ಧಾರವಾಡ: ‘ಭ್ರಷ್ಟಾಚಾರದ ಮಾಹಿತಿಗಳು ಬಹಳಷ್ಟು ಹೊರಬರುತ್ತಿವೆ. ಎಲ್ಲ ಪಕ್ಷಗಳಲ್ಲೂ ದುರಾಸೆಯ ರೋಗವನ್ನು ಕಂಡಿದ್ದೇನೆ, ಭ್ರಷ್ಟಾಚಾರ ತಡೆಗೆ ಹೋರಾಟ ನಡೆಯಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಿಂದಿನ ಸರ್ಕಾರವನ್ನು (ಬಿಜೆಪಿ ಸರ್ಕಾರ) ಈಗ ಅಧಿಕಾರದಲ್ಲಿವರುವವರು (ಕಾಂಗ್ರೆಸ್) 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆದಿದ್ದರು. ಈಗಿನ ಸರ್ಕಾರದಲ್ಲಿ (ಕಾಂಗ್ರೆಸ್) ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರದ ವಿಚಾರಗಳು ಹೊರಬಂದಿದೆ. ಭ್ರಷ್ಟಾಚಾರ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದುದಲ್ಲ’ ಎಂದು ಪ್ರತಿಕ್ರಿಯಿಸಿದರು.
‘ಶ್ರೀಮಂತರಾಗಲು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಾರೆ. ಭ್ರಷ್ಟಾಚಾರ ಹೀಗೆಯೇ ಮುಂದುವರಿದರೆ ಆರ್ಥಿಕ ಪರಿಸ್ಥಿತಿ ಏನಾಗಲಿದೆ ಎಂದು ಹೇಳುವುದು ಕಷ್ಟ. ಆರ್ಥಿಕ ಸ್ಥಿತಿ ಕುಸಿದರೆ ಕಷ್ಟಪಡುವವರು ಮಧ್ಯಮ ಮತ್ತು ಕೆಳವರ್ಗದವರು. ಇಂಥ ಸಮಸ್ಯೆ ಉಂಟಾದರೆ ಪ್ರಜಾಪ್ರಭುತ್ವ ಉಳಿಯಲ್ಲ. ಕ್ರಾಂತಿ ಆಗಬಹುದು. ಹೀಗಾಗಿ, ಭ್ರಷ್ಟಾಚಾರ ತಡೆಗೆ ಪ್ರಯತ್ನ ನಡೆಸಬೇಕು’ ಎಂದು ಉತ್ತರಿಸಿದರು.
‘ಈಗ ಸ್ವಂತಲಾಭಕ್ಕಾಗಿ ರಾಜಕೀಯ ಪ್ರವೇಶಿಸುತ್ತಾರೆ. ರಾಜಕೀಯ ವೃತ್ತಿಯಲ್ಲ. ಸೇವೆಗಾಗಿ ಈ ಕ್ಷೇತ್ರವನ್ನು ಪ್ರವೇಶಿಸಬೇಕು ಹೊರತು ಲಾಭಕ್ಕಾಗಿ ಅಲ್ಲ’ ಎಂದರು.