ಬುಧವಾರ, ನವೆಂಬರ್ 13, 2019
23 °C

ಬದುಕಿಗೆ ಬೇಕು ಸತ್ಸಂಗ: ಈಶಪ್ರಿಯತೀರ್ಥ

Published:
Updated:
Prajavani

ಹುಬ್ಬಳ್ಳಿ: ಜೀವನದಲ್ಲಿ ಮನುಷ್ಯ ಯಾವ ಸಂಗದಿಂದ ಹಾಳಾಗುತ್ತಾನೊ, ಅದೆನ್ನೆಲ್ಲ ಬಿಟ್ಟು ಸತ್ಸಂಗದ ಸಹವಾಸ ಮಾಡಬೇಕು. ಆಗ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಉಡುಪಿಯ ಅದಮಾರು ಮಠದ ಕಿರಿಯ ಸ್ವಾಮೀಜಿ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.

2020ರ ಜ. 18ರಂದು ಉಡುಪಿಯಲ್ಲಿ ಈಶಪ್ರಿಯತೀರ್ಥ ಸ್ವಾಮೀಜಿ ಪರ್ಯಾಯ ಪೀಠವನ್ನು ಅಲಂಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಪೂರ್ವಭಾವಿ ಸಂಚಾರ ಆರಂಭಿಸಿದ್ದಾರೆ. ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿಗೆ ಬಾಳಿಗಾ ಕ್ರಾಸ್‌ನಿಂದ ದೇಶಪಾಂಡೆ ನಗರದ ಕೃಷ್ಣ ಕಲ್ಯಾಣ ಮಂಟಪದ ತನಕ ರಥದಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಚಾರ್ಯರ ಶಕ್ತಿ ಹಾಗೂ ಅವರ ಚಿಂತನೆಗಳನ್ನು ಅರಿಯಲು ಸರಿಯಾದ ಸಮಯವಿದು. ಇಲ್ಲಿ ನಾನು ಎನ್ನುವುದು ನೆಪಮಾತ್ರ; ಹಿಂದಿನ ಎಲ್ಲ ಸ್ವಾಮೀಜಿಗಳ ಶಕ್ತಿ ನಮ್ಮನ್ನು ನಡೆಸಿಕೊಂಡು ಹೋಗುತ್ತಿದೆ. ಯಾರು ಭಯದಿಂದ ದೂರು ಇರುತ್ತಾರೊ; ಅವರಿಗೆ ಮಾತ್ರ ದೇವರನ್ನು ಕಾಣಲು ಸಾಧ್ಯವಾಗುತ್ತದೆ. ಕೃಷ್ಣನ ಚಿಂತನೆ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

‘ಮುಂದಿನ ವರ್ಷ ನಡೆಯುವ ಪರ್ಯಾಯಕ್ಕೆ ಎಲ್ಲರೂ ಬರಬೇಕು. ಮೂಲ ಕ್ಷೇತ್ರದಲ್ಲಿ ಭಕ್ತಿಯ ಸೇವೆ ಸಲ್ಲಿಸಿದರೆ ಹೆಚ್ಚು ಫಲ ಬರುತ್ತದೆ’ ಎಂದರು.

ಈಶಪ್ರಿಯತೀರ್ಥ ಶ್ರೀಪಾದರು ಎರಡು ದಿನ ನಗರದಲ್ಲಿ ವಾಸ್ತವ್ಯ ಮಾಡಲಿದ್ದು, ಬುಧವಾರ ಪಟ್ಟದೇವರ ಪೂಜೆ, ಸ್ವಾಮೀಜಿಗೆ ಪಾದಪೂಜೆ ನಡೆಯಲಿದೆ.

ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶ್ರೀಪತಿ ಓಕುಡೆ, ಸಮಾಜದ ಪ್ರಮುಖರಾದ ಅನಂತರಾಜ ಭಟ್‌, ರಾಮಚಂದ್ರ ಉಪಾಧ್ಯ, ಕೃಷ್ಣರಾಜ ಕೆಮ್ತೂರು, ಶ್ರೀಕಾಂತ ಕೆಮ್ತೂರು ಹಾಗೂ ಗುರುರಾಜ ಬಾಗಲಕೋಟೆ ಇದ್ದರು.

ಪ್ರತಿಕ್ರಿಯಿಸಿ (+)