ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗುಪ್ಪಿ: ಕುರಿಗಾಹಿ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆ, ಆರೋಪಿ ಬಂಧನ

ಬಂಗಾರಪೇಟೆಯಲ್ಲಿದ್ದ ಆರೋಪಿ
Last Updated 20 ಫೆಬ್ರುವರಿ 2022, 15:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆಯನ್ನು ಹತ್ಯೆಗೈದು ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಯರಗುಪ್ಪಿಯ ಮಹ್ಮದ್‌ಅಲಿ ಕೋಲಕಾರ ಎಂಬಾತನನ್ನು ಕುಂದಗೋಳ ಠಾಣೆ ಪೊಲೀಸರು ಬಂಧಿಸಿ, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ವಣ್ಣೂರು ಗ್ರಾಮದ ಮಹಿಳೆ ಲಕ್ಷ್ಮಿ ಕಳ್ಳಿಮನಿ(27) ಅವರ ಶವ ಯರಗುಪ್ಪಿ ಗ್ರಾಮದ ಹೊಲವೊಂದರ ಪಕ್ಕದಲ್ಲಿ ಫೆ. 18ರಂದು ಸಂಜೆ ವೇಳೆ ಪತ್ತೆಯಾಗಿತ್ತು. ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿ ಚಿನ್ನಾಭರಣ ಕಳವು ಮಾಡಿರುವ ಕುರಿತು ಫೆ. 19ರಂದು ಕುಂದಗೋಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಧಾರವಾಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ನೇತೃತ್ವದಲ್ಲಿ ತನಿಖೆ ಕೈಗೊಂಡ ಪೊಲೀಸರು, 24 ತಾಸಿನಲ್ಲಿ ಅರವತ್ತು ವರ್ಷದ ಆರೋಪಿಯನ್ನು ಕೋಲಾರ ಜಿಲ್ಲೆಯ ಬಂಗಾರ ಪೇಟೆಯಲ್ಲಿ ಬಂಧಿಸಿ ಕರೆತಂದಿದ್ದಾರೆ.

ಪಿ. ಕೃಷ್ಣಕಾಂತ, ಪೊಲೀಸ್‌ ವರಿಷ್ಠಾಧಿಕಾರಿ, ಧಾರವಾಡ
ಪಿ. ಕೃಷ್ಣಕಾಂತ, ಪೊಲೀಸ್‌ ವರಿಷ್ಠಾಧಿಕಾರಿ, ಧಾರವಾಡ

ಪ್ರಕರಣದ ಹಿನ್ನೆಲೆ: ‘ಬೈಲಹೊಂಗಲದ ಲಕ್ಷ್ಮಿ ಕಳ್ಳಿಮನಿ ಅವರ ಕುಟುಂಬ ಫೆ. 16ರಂದು ಕುರಿ ಮೇಯಿಸುತ್ತ ಯರಗುಪ್ಪಿ ಗ್ರಾಮಕ್ಕೆ ಬಂದಿತ್ತು. ಕುಟುಂಬದವರು ಗ್ರಾಮದಲ್ಲಿರುವ ಹೊಲವೊಂದರಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಲಕ್ಷ್ಮಿ ಉರುವಲು ತರಲೆಂದು ಕುರಿದೊಡ್ಡಿಯ ಪಕ್ಕದಲ್ಲಿರುವ ಕುರುಚಲು ಗಿಡ ಬೆಳೆದ ಹೊಲಕ್ಕೆ ಹೋಗಿದ್ದರು. ಉರುವಲು ಹೊತ್ತುಕೊಂಡು ಬರುವಾಗ ಮಹ್ಮದ್‌ಅಲಿ, ಅವರನ್ನು ಅಡ್ಡಗಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಭಯದಿಂದ ಕೆಳಗೆ ಬಿದ್ದ ಅವರು ಪ್ರಜ್ಞಾಹೀನರಾಗಿದ್ದರು. ನಂತರ ಕುತ್ತಿಗೆ ಹಿಚುಕಿ ಕೊಲೆ ಮಾಡಿ, ಮೈಮೇಲಿದ್ದ ಮಾಂಗಲ್ಯ ಸರ, ಓಲೆ ಸೇರಿ ಎಂಟು ಗ್ರಾಂ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಭಾನುವಾರ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

‘ಆರೋಪಿ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಸ್ಥಳೀಯರ ಮಾಹಿತಿ ಹಾಗೂ ತಾಂತ್ರಿಕ ಉಪಕರಣಗಳ ಸಹಾಯದಿಂದ ಆರೋಪಿಯನ್ನು ಬಂಗಾರಪೇಟೆಯಲ್ಲಿ ಬಂಧಿಸಲಾಗಿದೆ. ಅವನು ಎರಡು ಮದುವೆಯಾಗಿದ್ದು ಮೊದಲನೇ ಪತ್ನಿಗೆ ಮೂವರು ಮಕ್ಕಳು, ಎರಡನೇ ಪತ್ನಿಗೆ ಇಬ್ಬರು ಮಕ್ಕಳು ಇದ್ದಾರೆ. ಅವನ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅತ್ಯಾಚಾರ ನಡೆದಿದೆಯೇ ಇಲ್ಲವೇ ಎನ್ನುವ ಕುರಿತು ವೈದ್ಯಕೀಯ ವರದಿ ಎದುರು ನೋಡುತ್ತಿದ್ದೇವೆ’ ಎಂದರು.

ಹೀಗೆ ನಡೆದಿತ್ತು ತನಿಖೆ...

‘ಕೃತ್ಯ ನಡೆದ ಹೊಲದ ಸಮೀಪ ರಾತ್ರಿಯಾದರೂ ದನಗಳು ಮೇಯುತ್ತಿದ್ದವು. ಅವು ಯಾರದೆಂದು ತನಿಖೆ ನಡೆಸಿದಾಗ ಆರೋಪಿ ಮಹ್ಮದ್‌ಅಲಿಯದ್ದು ಎಂದು ತಿಳಿದು ಬಂದಿದೆ. ಅಲ್ಲದೆ, ಅವನು ಮಹಿಳೆಯನ್ನು ಹತ್ಯೆ ಮಾಡಿದ ನಂತರ ಪರಿಚಯದವರಿಗೆ ದೂರವಾಣಿ ಕರೆ ಮಾಡಿ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿದ್ದ. ಪರಿಚಯದವರ ನಂಬರ್‌ ಜಾಡು ಹಿಡಿದ ಪೊಲೀಸರು, ಅವರಿಬ್ಬರ ನಡುವೆ ನಡೆದ ಸಂಭಾಷಣೆಯ ಮಾಹಿತಿ ಸಂಗ್ರಹಿಸಿದ್ದಾರೆ. ಕೆಲ ಹೊತ್ತಿನ ನಂತರ ಆರೋಪಿ ಮೊಬೈಲ್‌ ಆನ್‌ ಮಾಡಿದಾಗ ಬಂಗಾರ ಪೇಟೆಯಲ್ಲಿರುವುದು ಪತ್ತೆಯಾಗಿದೆ. ಸ್ಥಳೀಯ ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಮದ್ಯಪಾನ ಮಾಡುತ್ತಿದ್ದ ಅವನು, ಲೈಂಗಿಕತೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ’ ಎನ್ನುವ ಮಾಹಿತಿ ಸಂಗ್ರಹಿಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT