ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಎಂ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

ಬಿಜೆಪಿಯಿಂದ ಪ್ರತಿಭಟನಾ ಮೆರವಣಿಗೆ; ಘೋಷಣೆ ಕೂಗಿ ಆಕ್ರೋಶ
Published : 24 ಸೆಪ್ಟೆಂಬರ್ 2024, 16:09 IST
Last Updated : 24 ಸೆಪ್ಟೆಂಬರ್ 2024, 16:09 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿ, ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈರ್ಕೋರ್ಟ್ ವಜಾಗೊಳಿಸಿದ್ದನ್ನು ಬಿಜೆಪಿ ಮುಖಂಡರು ಸ್ವಾಗತಿಸಿದರು.

ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಿಂದ ಕಾರವಾರ ರಸ್ತೆಯ ಇಎಸ್‌ಐ ಆಸ್ಪತ್ರೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ, ವಿಧಾನಸಭೆ ವಿರೋಧ ಪಕ್ಷದ ನಾಯಕ ಅರವಿಂದ ಬೆಲ್ಲದ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರ ದುರುಪಯೋಗ, ಭ್ರಷ್ಟಾಚಾರಕ್ಕೆ ನ್ಯಾಯಾಲಯದ ತೀರ್ಪು ಮೊದಲ ಹಂತದ ಶಿಕ್ಷೆಯಾಗಿದೆ. ಅವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದು  ಆಗ್ರಹಿಸಿದರು.

‘ಮುಡಾ ಹಗರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಅಂತ್ಯವಾಗಲಿದೆ ಎಂದು ಹೇಳಿದ್ದೆ. ಈಗ ನ್ಯಾಯಾಲಯದ ತೀರ್ಪು ಅವರ ವಿರುದ್ಧ ಬಂದಿದೆ’ ಎಂದರು.  

‘ಬಡವರು, ದಲಿತರಿಗೆ ಸೇರಬೇಕಾದ ನಿವೇಶನಗಳನ್ನು ಅವರು ಪಡೆದಿದ್ದಾರೆ. ರಾಜ್ಯಪಾಲರು ಈ ಬಗ್ಗೆ ಸ್ಪಷ್ಟನೆ ಕೇಳಿದಾಗ ಅವರು ನೀಡಲಿಲ್ಲ. ಆದ್ದರಿಂದ ರಾಜ್ಯಪಾಲರು ಅನಿವಾರ್ಯವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನಕ್ಕೆ ಬೆಲೆ ಕೊಡುವ ಬದಲು, ಹೈಕೋರ್ಟ್ ಮೊರೆ ಹೋದರು. ಕೋರ್ಟ್ ತೀರ್ಪಿನಿಂದ ಕಾನೂನಿನ ಎದುರು ಎಲ್ಲರೂ ಸಮಾನರು ಎಂಬುದು ಸಾಬೀತಾಗಿದೆ. ಈಗ ಕಾಂಗ್ರೆಸ್‌ಗೆ  ಹೊಸ ಮುಖ್ಯಮಂತ್ರಿಯನ್ನು ಹುಡುಕುವ ಅನಿವಾರ್ಯತೆ ಬಂದಿದೆ’ ಎಂದರು.

‘ಅವರು ಮಾತನಾಡುವುದು ಸಮಾಜವಾದ. ಮಾಡುವುದು ಭ್ರಷ್ಟಾಚಾರ. ಈಗ ಬಿಜೆಪಿ ನಾಯಕರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ’ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಹು-ಧಾ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ನ್ಯಾಯದ ಪರ ಹೈಕೋರ್ಟ್ ತೀರ್ಪು ಬಂದಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಮಹಾನಗರ ಪಾಲಿಕೆ ಸದಸ್ಯರಾದ ಸಂತೋಷ್‌ ಚವ್ಹಾಣ, ರಾಧಾಬಾಯಿ ಸಫಾರೆ, ಮಹೇಂದ್ರ ಕೌತಾಳ, ಸುನೀತಾ ಚವ್ಹಾಣ ಇದ್ದರು.

‘ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿ’

ಹುಬ್ಬಳ್ಳಿ: ‘ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೂಡಲೇ ತನಿಖೆ ಆರಂಭಿಸಬೇಕು. ಅವರು ತನಿಖೆಗೆ ಸಹಕರಿಸಬೇಕು’ ಎಂದು ಸಂಸದ ಜಗದೀಶ ಶೆಟ್ಟರ್ ಒತ್ತಾಯಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ರಾಜ್ಯಪಾಲರು ಕಾನೂನುಬದ್ಧವಾಗಿಯೇ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಈಗ ಅದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ’ ಎಂದರು. ‘ಸಿ.ಎಂ ರಾಜೀನಾಮೆ ನೀಡದಿದ್ದರೆ ಅವರ ಕೆಳಗಿನ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ. ತನಿಖೆ ನಡೆದು ಅವರು ತಪ್ಪಿತಸ್ಥರಲ್ಲ ಎಂಬುದು ಸಾಬೀತಾದರೆ ಮತ್ತೆ ಮುಖ್ಯಮಂತ್ರಿಯಾಗಲಿ. ರಾಜೀನಾಮೆ ಕೊಟ್ಟು ಅವರು ಕಾನೂನು ಹೋರಾಟ ಮುಂದುವರಿಸಬಹುದು’ ಎಂದು ಹೇಳಿದರು. ‘ಸಂವಿಧಾನಬದ್ಧವಾದ ರಾಜ್ಯಪಾಲರ ಹುದ್ದೆಗೆ ಅಪಮಾನ ಮಾಡುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಕಾಂಗ್ರೆಸ್‌ನಿಂದ ಸಂವಿಧಾನಕ್ಕೆ ಅಪಚಾರವಾಗುತ್ತಿದೆ’ ಎಂದು ಹೇಳಿದರು. ಅರ್ಕಾವತಿ ಹಗರಣದಲ್ಲಿ ಅವರು ಜೈಲಿಗೆ ಹೋಗಬೇಕಿತ್ತು. ಆದರೆ ಕೆಂಪಣ್ಣ ಆಯೋಗದ ವರದಿಯನ್ನು ಮುಚ್ಚಿಟ್ಟರು. ಈಗಲೂ ಭಂಡತನದಿಂದ ನಡೆದುಕೊಳ್ಳುತ್ತಿದ್ದಾರೆ‘ ಎಂದು ಹೇಳಿದರು. ಕಾಂಗ್ರೆಸ್ ಹೈಕಮಾಂಡ್ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಜನ ದಂಗೆ ಏಳುತ್ತಿದ್ದಾರೆ. ಆ ಪಕ್ಷದ ವರಿಷ್ಠರು ಕೂಡಲೇ ಮುಖ್ಯಮಂತ್ರಿ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT