ಶನಿವಾರ, ಡಿಸೆಂಬರ್ 7, 2019
22 °C

ಗಣೇಶೋತ್ಸವ ವಿಸರ್ಜನಾ ಮೆರವಣಿಗೆ: ಗಾಯಾಳುಗಳ ಭೇಟಿಮಾಡಿದ ಸಚಿವ ಜಗದೀಶ್‌ ಶೆಟ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೇಳೆ ಚಾಕು ಇರಿತಕ್ಕೆ ಒಳಗಾಗಿದ್ದ ಗಾಯಾಳುಗಳನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಭಾನುವಾರ ಕಿಮ್ಸ್‌ನಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಆಸ್ಪತ್ರೆಗೆ ದಾಖಲಾಗಿದ್ದ ಒಟ್ಟು ಒಂಬತ್ತು ಗಾಯಾಳುಗಳ ಪೈಕಿ ಒಬ್ಬರು ಮೃತಪಟ್ಟಿದ್ದರು. ಐದು ಜನ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಇನ್ನುಳಿದ ಮೂವರು ಗಾಯಾಳುಗಳಾದ ವಿನಾಯಕ ಭಜಂತ್ರಿ, ಅನಿಲ ಮತ್ತು ಮಹಾಂತೇಶ ಹೊಸಮನಿ ಅವರನ್ನು ಭೇಟಿ ಮಾಡಿ ‘ಕಿಮ್ಸ್‌ನಲ್ಲಿ ನಿಮಗೆ ಸಂಪೂರ್ಣ ಚಿಕಿತ್ಸೆ ಸಿಗುತ್ತದೆ. ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕಿಲ್ಲ’ ಎಂದರು.

ಅಗತ್ಯವಿದ್ದರೆ ಖಾಸಗಿ ಆಸ್ಪತ್ರೆಯ ಸೌಲಭ್ಯದ ನೆರವನ್ನು ಇಲ್ಲಿಗೇ ತರಿಸಿಕೊಳ್ಳಿ ಎಂದು ಮ್ಸ್‌ ವೈದ್ಯಕೀಯ ಅಧೀಕ್ಷಕ ಸಿ. ಅರುಣ ಕುಮಾರ್‌ ಅವರಿಗೆ ಸೂಚಿಸಿದರು. ಇದೇ ವೇಳೆ ಮಹಾಂತೇಶ ಅವರ ತಂದೆ ಬಸವನಗೌಡ ಮತ್ತು ತಾಯಿ ಶಿವಲೀಲಾ ಶೆಟ್ಟರ್‌ ಮುಂದೆ ಕಣ್ಣೀರು ಸುರಿಸಿದರು. ಆಗ ಶೆಟ್ಟರ್‌ ‘ನಿಮ್ಮ ಮಗನಿಗೆ ಪ್ರಾಣಪಾಯ ಇಲ್ಲ. ಭಯಪಡಬೇಡಿ’ ಎಂದು ಸಮಾಧಾನ ಮಾಡಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಘಟನೆ ನಡೆದ ದಿನದಂದೇ ಕಮಿಷನರ್‌ ಜೊತೆ ಮಾತನಾಡಿದ್ದೇನೆ. ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆದಾಗಲೂ ಕಟ್ಟೆಚ್ಚರ ವಹಿಸಬೇಕು. ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದೇನೆ’ ಎಂದರು.

‘ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನೂ ಬಂಧಿಸಲಾಗಿದೆ. ಕಮಿಷನರ್‌ ವರದಿ ನೀಡಿದ ಬಳಿಕ ಗೃಹಸಚಿವರ ಬಳಿ ಚರ್ಚಿಸುವೆ. ಈ ಘಟನೆ ವೈಯಕ್ತಿಕ ದ್ವೇಷದಿಂದ ನಡೆದಿದ್ದು ಎನಿಸುತ್ತದೆ. ತನಿಖೆ ಪೂರ್ಣವಾದ ಬಳಿಕ ಎಲ್ಲವೂ ಗೊತ್ತಾಗಲಿದೆ’ ಎಂದರು.

ಹಂತಹಂತವಾಗಿ ದಂಡ:

ಸಂಚಾರದ ವೇಳೆ ಸುರಕ್ಷತೆಗೆ ಒತ್ತು ಕೊಡಬೇಕು ಎನ್ನುವ ಕಾರಣಕ್ಕೆ ದಂಡದ ಪ್ರಮಾಣ ಹೆಚ್ಚಿಸಲಾಗಿದೆ. ಸಿಂಗಪುರ ಮತ್ತು ಅರಬ್‌ ರಾಷ್ಟ್ರಗಳಲ್ಲಿ ಇರುವಷ್ಟು ದಂಡ ನಮ್ಮಲ್ಲಿ ಇಲ್ಲ. ಹೊಸ ನಿಯಮವನ್ನು ಹಂತಹಂತವಾಗಿ ಸುಧಾರಣೆ ಮಾಡಬೇಕು ಎಂದು ಶೆಟ್ಟರ್ ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)