ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಡೆ ಶಿವನಾಮ ಸ್ಮರಣೆ; ಭಕ್ತರ ಜಾಗರಣೆ

ದೇಗುಲಗಳಲ್ಲಿ ವಿಶೇಷ ಪೂಜೆ; ದೇವರ ದರ್ಶನ ಪಡೆದ ಭಕ್ತರು; ಸಿದ್ಧಾರೂಢರ ರಥೋತ್ಸವ ಇಂದು
Last Updated 2 ಮಾರ್ಚ್ 2022, 3:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾ ಶಿವರಾತ್ರಿ ಹಬ್ಬವನ್ನು ನಗರದಲ್ಲಿ ಮಂಗಳವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ಜರುಗಿದವು.

ದೇಗುಲಗಳಲ್ಲಿ ‘ಓಂ ನಮಃ ಶಿವಾಯ’ ಸ್ಮರಣೆ ಅನುರಣಿಸಿತು. ಭಕ್ತರು ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಜಾಗರಣೆ ಮಾಡಿ ಭಕ್ತಿ ಮೆರೆದರು. ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇಗುಲಗಳು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿದವು.

ಶಿವಪುರ ಕಾಲೊನಿಯ ಈಶ್ವರ ದೇವಸ್ಥಾನ, ವಿಶ್ವೇಶ್ವರ ನಗರದ ವಿಶ್ವನಾಥ ದೇವಸ್ಥಾನ, ಉಣಕಲ್‌ನ ಬಸವೇಶ್ವರ ದೇಗುಲ, ರೈಲು ನಿಲ್ದಾಣ ರಸ್ತೆಯ ಈಶ್ವರ ದೇವಸ್ಥಾನ, ಹಳೇ ಕೋರ್ಟ್ ವೃತ್ತದ ಸಾಯಿಮಂದಿರ ಸೇರಿದಂತೆ ನಗರದ ಎಲ್ಲಾ ದೇವಸ್ಥಾನಗಳಲ್ಲಿ ಶಿವರಾತ್ರಿಯ ವಿಶೇಷ ಪೂಜೆ ಜರುಗಿತು. ದೇವರ ಮೂರ್ತಿ ಹಾಗೂ ಶಿವಲಿಂಗಕ್ಕೆ ಅಭಿಷೇಕ ಮಾಡಲಾಯಿತು

ಶಿವನನ್ನು ಸ್ಮರಿಸುವ ಭಕ್ತಿಗೀತೆಗಳು, ಭಜನೆಗಳು ಹಾಗೂ ಹಾಡುಗಳು ಎಲ್ಲೆಡೆ ಕೇಳಿ ಬರುತ್ತಿದ್ದವು. ಕೆಲ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಕಮಿಷನರ್ ಲಾಭೂರಾಮ್ ಅವರು ಸ್ಟೇಷನ್ ರಸ್ತೆಯ ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ದೇವರ ದರ್ಶನ ಪಡೆದರು.

ಸಿದ್ಧಾರೂಢ ಮಠದಲ್ಲಿ ‘ಶಿವರಾತ್ರಿ’ ಸಂಭ್ರಮ

ಸಿದ್ಧಾರೂಢರು ಹಾಗೂ ಗುರನಾಥಾರೂಢರ ಗದ್ದುಗೆಗಳಿಗೆ ಮಾಡಿದ್ದ ವಿಶೇಷ ಅಲಂಕಾರ ಗಮನ ಸೆಳೆಯಿತು. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಹಾಗೂ ವಿವಿಧ ಮಠಾಧೀಶರಿಂದ ಪ್ರವಚನ ಜರುಗಿದವು. ವಿದ್ಯುತ್ ದೀಪಗಳಿಂದ ಅಲಂಕೃತವಾಗಿದ್ದ ಮಠವು ಝಗಮಗಿಸುತ್ತಿತ್ತು.

ಆರೂಢದ್ವಯರ ಮೂರ್ತಿಗಳನ್ನು ಹೊತ್ತ ಪಲ್ಲಕ್ಕಿಯು ಮಧ್ಯಾಹ್ನ ಮಠದಿಂದ ಹೊರಟಿತು. ಗಣೇಶಪೇಟೆಯ ಜಡಿ ಬಸವೇಶ್ವರ ಮಠ, ದೀವಟೆ ಕಾಲೊನಿ ಸೇರಿದಂತೆ ವಿವಿಧೆಡೆ ಸಂಚರಿಸಿ ರಾತ್ರಿ ಮಠಕ್ಕೆ ವಾಪಸ್ಸಾಯಿತು. ಪಲ್ಲಕ್ಕಿಗೆ ಭಕ್ತರು ಭವ್ಯ ಸ್ವಾಗತ ನೀಡಿ, ಪೂಜೆ ಸಲ್ಲಿಸಿದರು.

ಮಠದ ದಾಸೋಹ ಭವನದಲ್ಲಿ ಭಕ್ತರಿಗೆ ಗೋಧಿ ಹುಗ್ಗಿ ಊಟ, ಜಿಲೇಬಿಯನ್ನು ರಾತ್ರಿಯವರೆಗೂ ವಿತರಿಸಲಾಯಿತು. ವಿವಿಧ ದೇವಸ್ಥಾನಗಳ ಸಮಿತಿಯವರು ಅಲ್ಲಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು. ಕೆಲವರು ಉಚಿತವಾಗಿ ನೀರು ಹಾಗೂ ಬಾಳೆಹಣ್ಣು ವಿತರಿಸಿ ಭಕ್ತ ಸಮರ್ಪಿಸಿದರು. ಮಠದಲ್ಲಿ ರಾತ್ರಿ ಸಂಗೀತೋತ್ಸವ ಹಾಗೂ ಭಜನೆಯನ್ನು ಆನಂದಿಸಿದ ಭಕ್ತರು, ಸಿದ್ಧಾರೂಢರ ಸನ್ನಿಧಿಯಲ್ಲಿ ಜಾಗರಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT