ಭಾನುವಾರ, ಆಗಸ್ಟ್ 25, 2019
27 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ

ಶ್ರಾವಣಾ ಬಂತು... ಕುಣಿದ್ಹಾಂಗ ರಾವಣಾ...

Published:
Updated:
Prajavani

ಶ್ರಾವಣಾ ಬಂತು ನಾಡಿಗೆ, ಬಂತು ಬೀಡಿಗೆ,
ಬಂತು ಶ್ರಾವಣ... ಕುಣಿದ್ಹಾಂಗ ರಾವಣಾ...
ಸುಳಿದಾವ ಗಾಳಿ... ಭೈರವನೆ ರೂಪತಾಳಿ...

ಈ ಶ್ರಾವಣ ಬಂದಾಗಿಂದ ನಮ್ಮ ಬೇಂದ್ರೆ ಅಜ್ಜಾರು ಹೊಳ್ಳಾ ಮಳ್ಳಾ ನೆನಪಾಗ್ತಾರ. ಅವರ ಈ ಸಾಲುಗಳಂತೂ ತುಟಿಯೊಳಗ ಮಣಮಣ ಅಂತಾವ..

ನಮ್ಮ ಹುಬ್ಬಳ್ಳಿ ರಸ್ತೆ ಮ್ಯಾಲಂತೂ ರಾವಣನ ಹೆಜ್ಜಿ ಬಿದ್ಹಂಗ.. ತೆಗ್ಗ ಬಿದ್ದಾವ. ಒಂದೊಂದು ಊರ ಅಗಸಿ ಬಾಗಲಿಗೆ ಹಣಮಪ್ಪನ ಪಾದ, ವಿಠಲನ ಪಾದ ಇರ್ತಾವ. ನಮ್ಮೂರ ರಸ್ತೆಯೊಳಗ ಮಾತ್ರ ರಾವಣನ ಪಾದ, ಕುಂಭಕರ್ಣನ ಪಾದನ ಬಿದ್ದಂಗ ಆಗ್ಯಾವ.

ಈ ಶ್ರಾವಣ ಮಾಸದಾಗ ಹೊಸ ಅರವಿ ಹಾಕ್ಕೊಂಡು, ಜೋಕಾಲಿ ಜೀಕ್ಕೊಂಡು ಇರೂ ಕಾಲ. ಜೋಕಾಲಿ ಹಗ್ಗ ಚುಚ್ಚಬಾರದಂತ ಕಟಗಿ ಫಳಿ, ಹಾಕಿ, ಹೊಸ ಬಟ್ಟಿಗೆ ಸಿಬಿರು ಚುಚ್ಚಿ ನೂಲು ಏಳಬಾರದಂತ ಅದಕೊಂದು ಝಮಕಾನಿ ಸುತ್ತಿ, ಜೋರೆ ಜೀಕೋರು... ಅಂಥ ಹೆಣ್ಮಕ್ಕಳು... ಉಟ್ಟ ಬಟ್ಯಾಗ, ಹೆಲಿಕಾಪ್ಟರ್ ಇಳಿಬಿಟ್ಟ ಹಗ್ಗಕ್ಕ ಕೂತ್ಗೊಂಡು ಹೋಗುಮುಂದ ಶ್ರಾವಣ ಖರೇನೆ ರಾವಣಾಗಿದ್ದ!

ಆದ್ರೂ ನೋಡ್ರಿ ನಮ್ಮ ಮಣ್ಣಿನ ಗುಣ ಏನಂದ್ರ ಇಂಥಾ ಪ್ರವಾಹನೂ ಕಣ್ಣೀರಿನ ಹಾಡಾಗ್ತದ.. ಜೋಕಿನ ಝೋಕುಗಳಾಗಿ ಹರದಾಡ್ತಾವ. ‘ನಿನ್ನೆ ನನ್ನ ಕನಸಿನಾಗ... ಬಿಸಿಲು ಬಂದಿತ್ತು’ ಅಂತ ಹರದಾಡಿ ಬಿಸಿಲು ಮಾಯ ಆಗೂದ್ರೊಳಗ ಇನ್ನೊಬ್ರು, ‘ಆ ಬಿಸಲಾಗ ಒಂದೀಟು ಚಡ್ಡಿ ಒಣಗಿಸಿ ಕೊಡಪಾ’ ಅನ್ನೋರು.. ‘ಇಲ್ಲ ಬಿಡ್ಲೆ, ನನ್ನೂವ ಒಣಗೂದ್ರೊಳಗ ಎಚ್ಚರಾಯ್ತು’ ಅಂತ ಪ್ರಶ್ನೋತ್ತರ ಸಾಗಿರ್ತಾವ.. ನಡುನಡು ಇಮೋಜಿಗಳು ಬ್ಯಾರೆ... ಬಿದ್ದು ಬಿದ್ದು ನಕ್ಹಂಗ, ನಕ್ಕೊಂತ ಕಣ್ಣೀರಾದಂಗ, ಹಲ್ಲು ಕಿರದ್ಹಂಗ...

ನಮ್ಮ ಪಾಡು ಹಾಡಾಗುವ ಗುಣ ಹೆಂಗದ ಅಂದ್ರ, ಮಳಿಗೂ ಮನವಿ ಮಾಡ್ಕೊಳ್ಳೂದು.. ‘ನೋಡಪಾ, ಮೂರ ದಿನದಿಂದ ನಮ್ಮ ಅರವಿ ಒಣಗಿಲ್ಲ.. ಅಡ್ಡಿ ಇಲ್ಲ.. ಆದ್ರ ಹೊಸಾವು ತೊಗೊಂಬರಾಕರೆ ಬಿಡುವು ಕೊಡು’ ಅಂತ ಕೇಳೂದು..


ನವಲಗುಂದ ತಾಲ್ಲೂಕಿನ ತುಪ್ಪರಿಹಳ್ಳ ಪ್ರವಾಹದಲ್ಲಿಯೇ ಮೊರಬ ಗ್ರಾಮಸ್ಥರು ಬಟ್ಟೆ ತೊಳೆದರು

ದಶಕಗಳಲ್ಲೊಮ್ಮೆ ಆಗಾಗ ಅರಳುವ ಹೂಗಳು.. ಅಂತ್ಹೇಳಿ ಗಿಡದ ಮ್ಯಾಲೆ ಒಣಗಿಹಾಕಿದ್ದ ಮಕ್ಕಳ ಚಡ್ಡಿ ಚಿತ್ರ ಹರಿಬಿಡೂದು...

ಇವರೆಲ್ಲ ಭಾಳ ಆರಾಮ ಕುತ್ಗೊಂಡು ನಗಾಡ್ತಾರ ಅಂತ ಅಂದ್ಕೊಳ್ಳೂದು ಬ್ಯಾಡ. ಮಳಿಗೆ ರಸ್ತೆ ಬಿದ್ದ ಬದುಕನ್ನು ಎತ್ತಿ ಕಟ್ಟಾಕ ಸಹಾಯ ಮಾಡ್ಕೊಂತ ಇರೋರೆ. ಪ್ರಸಂಗ ಬಂದ್ರ ಧಡಾಬಡಾ ನೀರಿಗಿಳಿದು, ನಾಕು ಮಂದಿಗೆ ಎಳದು ತರೋರೆ. ಅಕ್ಕಾರ, ಅಣ್ಣಾರ, ವೈನಿ, ಕಾಕಾ ಅಂತ ಮಾತಾಡಸ್ಕೊಂತ ತಮ್ಮನೀಗೆ ಕರಕೊಂಡು ಹೋಗೋರು.. 

ಈ ಮಳಿ ಮೈ ತೋಯಸ್ತದ, ಮಂದಿ, ಮನಸು ಆರ್ದ್ರಗೊಳಸ್ತಾರ.

ಮುಗಸೂ ಮೊದಲು ಇನ್ನೊಂದು ನಗಿಗುದ್ದು.. ‘ಇಷ್ಟು ದಿನ ಮಳಿ ಪ್ರೇಯಸಿಹಂಗ ಅನಸ್ತಿತ್ತು.. ಈಗೀಗ ಹೆಂಡ್ತಿಹಂಗ ಕಾಡ್ತದ’ ಪಾಪ.. ಅವರಿಗೂ ಛೊಲೊ ಗೊತ್ತು... ಪ್ರೇಯಸಿಯ ಎಲ್ಲ ನಖರಾಗಳು ಮಳಿಯ ತುಂತುರು ಹನಿ ಕಚಗುಳಿ ಇಟ್ಹಂಗ ಅನಿಸಿದ್ರ, ಹೆಂಡ್ತಿ ವರ್ಷಾನುಗಟ್ಟಲೆ ಎಲ್ಲ ಅಸಮಾಧಾನ ಒಳಗೊಳಗ ಇಟ್ಕೊಂಡು, ಪ್ರವಾಹದ್ಹಂಗ ಒಮ್ಮೆ ಸುರದು, ಶಾಂತ ಆಗ್ತಾಳ.. ಆದ್ರೂ ಮನಸು ರಾಡಿ ಆಗ್ತದ...

ಏನರೆ ಇರಲಿ, ಎಲ್ಲ ಬದಿಗೊತ್ತಿ ಮಳೆಬಿಲ್ಲು ಮೂಡಿದಾಗ ಮತ್ತ ಸಾಂಗತ್ಯ ಬೇಂದ್ರೆಯಜ್ಜನ ಹಾಡು ಗುನುಗ್ತದ.. 

ಶ್ರಾವಣಾ ಬಂತು ಮನಿಮನಿಗೆ | ಕೂಡಿ ದನಿದನಿಗೆ ಮನದ ನನಿಕೊನಿಗೆ ಒಡೆದಾವ ಹಾಡೂ | ರಸ ಉಕ್ಕತಾವ ನೋಡು...


ಕಲಘಟಗಿ ತಾಲ್ಲೂಕಿನ ದುಮ್ಮವಾಡ ಬಳಿಯ ನೀರ ಸಾಗರ ತುಂಬಿ ಹರಿಯುವಾಗ ನಾಗರಿಕರ ಸೆಲ್ಫಿ ಸಂಭ್ರಮ ಚಿತ್ರ: ಈರಪ್ಪ ನಾಯ್ಕರ್‌

 

Post Comments (+)