ಸೋಮವಾರ, ಮಾರ್ಚ್ 8, 2021
24 °C

ರೇಷ್ಮೆ ಸೀರೆ ಮಾರಾಟ ಮೇಳ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಹಸ್ತ ಶಿಲ್ಪಿ ಸಂಸ್ಥೆ ಇಲ್ಲಿನ ದೇಶಪಾಂಡೆ ನಗರದ ಗುಜರಾತ್ ಭವನದಲ್ಲಿ ಮಂಗಳವಾರದಿಂದ ವಿವಿಧ ರಾಜ್ಯಗಳ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಆರಂಭಿಸಿದೆ. ಜುಲೈ 14ರ ವರೆಗೆ ಮೇಳ ನಡೆಯಲಿದೆ.

ಕರ್ನಾಟಕ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಆಂಧ್ರ ಸೇರಿದಂತೆ ಹದಿನೇಳು ರಾಜ್ಯಗಳ ರೇಷ್ಮೆ ಸೀರೆ ಉತ್ಪಾದಕರು, ವಿನ್ಯಾಸಗಾರರು ಹಾಗೂ ರೇಷ್ಮೆ ಸಹಕಾರ ಸಂಘಗಳ ಸದಸ್ಯರು ಪಾಲ್ಗೊಂಡಿದ್ದಾರೆ. ಪ್ರತಿಯೊಂದು ರಾಜ್ಯದ ಸಾಂಪ್ರದಾಯಿಕ ಶೈಲಿಯ 150ಕ್ಕೂ ಹೆಚ್ಚು ರೇಷ್ಮೆ ಸೀರೆಗಳು 60 ಮಳಿಗೆಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ.

₹1,200 ರಿಂದ ₹ 2 ಲಕ್ಷದವರೆಗಿನ ಸೀರೆಗಳು ಮೇಳದಲ್ಲಿವೆ. ತಸ್ಸರ್, ಜಾರ್ಜೆಟ್, ಅರಿಣಿ, ಧರ್ಮಾವರಂ, ಕಾಂಚಿಪುರಂ ರೇಷ್ಮೆ ಸೀರೆಗಳು ಗ್ರಾಹಕರ ಮನ ಸೆಳೆಯುತ್ತಿವೆ. ಅಲ್ಲದೆ, ಕೋಸಾ, ಡಾಕಾ, ಡಿಸೈನರ್ ಎಂಬ್ರಾಯಿಡರಿ, ಬಲ್‌ಚೂರಿ, ಪ್ರಿಂಟೆಡ್‌ ಸೀರೆಗಳು ಸಹ ಮಾರಾಟಕ್ಕಿದ್ದು, ಶೇ 20ರವರೆಗೆ ರಿಯಾಯಿತಿ ನೀಡಲಾಗುತ್ತಿದೆ.

ಮೇಳ ಉದ್ಘಾಟಿಸಿ ಮಾತನಾಡಿದ ಹಸ್ತಶಿಲ್ಪಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಟಿ. ಅಭಿನಂದನ್‌, ‘2012ರಿಂದ ಹುಬ್ಬಳ್ಳಿಯಲ್ಲಿ ರೇಷ್ಮೆ ಸೀರೆ ಮಾರಾಟ ಮೇಳ ಆಯೋಜಿಸುತ್ತ ಬಂದಿದ್ದೇವೆ. ವರ್ಷದಿಂದ ವರ್ಷಕ್ಕೆ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ. ರೇಷ್ಮೆ ಸೀರೆ ಮಾರಾಟ ಮಾತ್ರ ನಮ್ಮ ಉದ್ದೇಶವಲ್ಲ, ಅದರ ಬಗ್ಗೆ ಮಾಹಿತಿ ನೀಡುವುದು ಪ್ರಮುಖ ಅಂಶವಾಗಿದೆ’ ಎಂದರು.

ಮೇಳದಲ್ಲಿ ವಿವಿಧ ಬಗೆಯ ರೇಷ್ಮೆ ಸೀರೆಗಳು ಇರುವುದರಿಂದ ಆಯ್ಕೆಗೆ ವಿಪುಲ ಅವಕಾಶಗಳಿವೆ. ಕಳೆದ ಬಾರಿ ₹ 23 ಲಕ್ಷ ಮೌಲ್ಯದ ಸೀರೆಗಳು ಮಾರಾಟವಾಗಿದ್ದವು. ಪ್ರಸ್ತುತ ವರ್ಷ ₹ 40 ಲಕ್ಷ  ವಹಿವಾಟು ನಡೆಸುವ ಗುರಿಯಿದೆ ಎಂದು ಅಭಿನಂದನ್‌ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು