ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆವಳುತ್ತಾ ಸಾಗಿದ ಯೋಜನೆಗಳು: ಶೆಟ್ಟರ್ ಬೇಸರ

ಸ್ಮಾರ್ಟ್‌ ಸಿಟಿ ಅಧಿಕಾರಿಗಳ ಜತೆ ಸಭೆ: ತ್ವರಿತವಾಗಿ ಕಾಮಗಾರಿ ಮುಗಿಸಲು ಸೂಚನೆ
Last Updated 9 ಜೂನ್ 2019, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸ್ಮಾರ್ಟ್ ಸಿಟಿ ಯೋಜನೆಗೆ ಅವಳಿನಗರ ಆಯ್ಕೆಯಾಗಿ ಎರಡೂವರೆ ವರ್ಷವಾದರೂ, ಎದ್ದು ಕಾಣುವ ಯಾವುದೇ ಯೋಜನೆಗಳು ಪೂರ್ಣಗೊಂಡಿಲ್ಲ. ಹಲವು ಯೋಜನೆಗಳು ಇನ್ನೂ ಡಿಪಿಆರ್ ಮತ್ತು ಟೆಂಡರ್ ಹಂತದಲ್ಲೇ ಇವೆ. ಬೇಗನೇ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ, ತ್ವರಿತವಾಗಿ ಕಾಮಗಾರಿ ಮುಗಿಸಬೇಕು’ ಎಂದು ಶಾಸಕ ಜಗದೀಶ ಶೆಟ್ಟರ್ ಸೂಚನೆ ನೀಡಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸ್ಮಾರ್ಟ್ ಯೋಜನೆ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ‘ಯೋಜನೆಗಳ ಜಾರಿಗೆ ಏನಾದರೂ ತೊಡಕುಗಳಿದ್ದರೆ ಅಥವಾ ಇಲಾಖೆಗಳ ನಡುವೆ ಹೊಂದಾಣಿಕೆಯ ಸಮಸ್ಯೆ ಎದುರಾದರೆ ನನ್ನ ಗಮನಕ್ಕೆ ತನ್ನಿ. ಸಮಸ್ಯೆಯನ್ನು ಬಗೆಹರಿಸುತ್ತೇನೆ’ ಎಂದರು.

ಸ್ಮಾರ್ಟ್ ಯೋಜನೆಯಡಿ ನಾಲಾ ಸರ್ವೆ, ಸ್ವಚ್ಛತಾ ಕಾರ್ಯ ಹಾಗೂ ಇ– ಟಾಯ್ಲೆಟ್‌ಗಳ ಅಳವಡಿಕೆ, ಮಳೆ ನೀರು ಕೊಯ್ಲು ಯೋಜನೆ, ಸ್ಯಾನಿಟರಿ ನ್ಯಾಪ್‌ಕಿನ್ ಯಂತ್ರ ಅಳವಡಿಕೆ, ಈಜುಕೋಳ ನವೀಕರಣ ಕಾರ್ಯ, ರಸ್ತೆಗಳ ಅಭಿವೃದ್ಧಿ, ಉಣಕಲ್ ಮತ್ತು ತೋಳನಕೆರೆ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದ ಅಧಿಕಾರಿಗಳು, ಸದ್ಯ 15 ಯೋಜನೆಗಳ ಕಾಮಗಾರಿ ನಡೆಯುತ್ತಿದ್ದು, 16 ಟೆಂಡರ್ ಹಂತದಲ್ಲಿವೆ ಎಂದು ಗಮನಕ್ಕೆ ತಂದರು.

ನೆಹರೂ ಮೈದಾನ ಕೈಬಿಡಬೇಡಿ:‘ಅನುದಾನದ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಹುಬ್ಬಳ್ಳಿಯ ಹೃದಯಭಾಗದಲ್ಲಿರುವ ನೆಹರೂ ಮೈದಾನ ಅಭಿವೃದ್ಧಿ ಯೋಜನೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಿಂದ ಕೈ ಬಿಡುವ ಪ್ರಸ್ತಾವ ಇದೆ. ಅದಕ್ಕೆ ಪರ್ಯಾಯವಾಗಿ, ನಗರದ ಹೊರವಲಯದಲ್ಲಿ ಸುಸಜ್ಜಿತ ಮೈದಾನ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ಅಧಿಕಾರಿಗಳು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ‘ನೆಹರೂ ಮೈದಾನ ಇಡೀ ನಗರಕ್ಕಿರುವ ಏಕೈಕ ಸಾರ್ವಜನಿಕ ಮೈದಾನ. ಅದನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲೇಬೇಕು. ಯಾವುದೇ ಕಾರಣಕ್ಕೂ ಮೈದಾನವನ್ನು ಯೋಜನೆಯಿಂದ ಕೈಬಿಡಬಾರದು. ಅಂತಹ ಸಂದರ್ಭ ಬಂದರೆ, ನನ್ನ ಗಮನಕ್ಕೆ ತನ್ನಿ. ಸಂಬಂಧಪಟ್ಟವರ ಜತೆ ನಾನು ಮಾತನಾಡುವೆ’ ಎಂದರು.

‘ಉಣಕಲ್ ಕೆರೆ ರಸ್ತೆ ಪಕ್ಕದಲ್ಲಿರುವ ಸ್ಲಂ ಜಾಗದಲ್ಲಿ ಸುಸಜ್ಜಿತ ವಸತಿ ಸಂಕೀರ್ಣ ನಿರ್ಮಿಸಿ. ಇದರಿಂದ ಅಲ್ಲಿ ಅತಿಕ್ರಮವಾಗಿರುವ ಜಾಗದ ತೆರವು ಜತೆಗೆ, ಅಲ್ಲಿನ ನಿವಾಸಿಗಳಿಗೆ ಇರಲು ಮನೆ ಕಟ್ಟಿಕೊಟ್ಟಂತಾಗುತ್ತದೆ’ ಎಂದ ಶೆಟ್ಟರ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ಭೂಮಿ ಪೂಜೆ ತಕ್ಷಣ ಕೆಲಸ ಆರಂಭಿಸಿ:‘ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳ ಭೂಮಿ ಪೂಜೆ ನಡೆದು ತಿಂಗಳುಗಳಾದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಪೂಜೆ ಆದ ತಕ್ಷಣ ಕೆಲಸ ನಡೆಯಬೇಕು. ಅದಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ಪೂಜೆಗೂ ಮುನ್ನವೇ ಮುಗಿಸಿಕೊಳ್ಳಬೇಕು’ ಎಂದ ಶೆಟ್ಟರ್, ‘ನಗರದ 15 ಸ್ಥಳಗಳಲ್ಲಿ ಅಳವಡಿಸಿರುವ ಇ–ಟಾಯ್ಲೆಟ್‌ಗಳ ಬಳಕೆಗೆ ಜನ ಅಷ್ಟಾಗಿ ಒಲವು ತೋರುತ್ತಿಲ್ಲ. ಹಾಗಾಗಿ, ಅದಕ್ಕೆ ಪರ್ಯಾಯ ವ್ಯವಸ್ಥೆ ಬಗ್ಗೆಯೂ ಗಮನ ಹರಿಸಿ’ ಎಂದರು.

ಜನತಾ ಬಜಾರ್, ಧಾರವಾಡ ಮಾರ್ಕೆಟ್‌, ಸ್ಮಾರ್ಟ್ ಕಂಬ, ವಿದ್ಯುತ್ ಚಿತಾಗಾರ ಸೇರಿದಂತೆ ಕೆಲ ಯೋಜನೆಗಳಿಗೆ ಟೆಂಡರ್ ಕರೆದರೂ ಟೆಂಡರ್‌ದಾರರು ಆಸಕ್ತಿ ತೋರುತ್ತಿಲ್ಲ. ಹಾಗಾಗಿ, ಮತ್ತೆ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.‌

ಬಿಜೆಪಿ ಮುಖಂಡರಾದ ಮಹೇಶ ಬುರ್ಲಿ ಹಾಗೂ ರವಿ ನಾಯಕ್ ಇದ್ದರು.

‘ನಾಲೆ ಒತ್ತುವರಿದಾರರಿಗೆ ನೋಟಿಸ್ ಕೊಡಿ’
‘ಉಣಕಲ್ ಕೆರೆಯಿಂದ ಬಿಡ್ನಾಳ ಕೆರೆವರೆಗೆ 11 ಕಿಲೋಮೀಟರ್ ಚಾಚಿಕೊಂಡಿರುವ ನಾಲೆಯನ್ನು ಅತಿಕ್ರಮಿಸಿ ಈಗಾಗಲೇ ಕಟ್ಟಡ ನಿರ್ಮಿಸುತ್ತಿರುವವರಿಗೆ ನೋಟಿಸ್ ಕೊಟ್ಟು, ಕೆಲಸ ನಿಲ್ಲಿಸಿ. ಒತ್ತುವರಿ ತೆರವುಗೊಳಿಸಿ ‘ಗ್ರೀನ್ ಕಾರಿಡಾರ್’ (ಹಸಿರು ನಗರೀಕರಣ) ಕೆಲಸ ಆರಂಭಿಸಿ’ ಎಂದು ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದರು.

‘ನಾಲೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಟೆಂಡರ್ ಶ್ಯೂರ್ ರಸ್ತೆ ವಿನ್ಯಾಸ ಮಾಡಿರುವ ಜನಾ ಅರ್ಬನ್ ಸ್ಪೇಸ್‌ ಫೌಂಡೇಷನ್‌ ವ್ಯವಸ್ಥಾಪಕಿ ಸ್ವಾತಿ ರಾಮನಾಥನ್ ಅವರೊಂದಿಗೂ ಒಮ್ಮೆ ಸಮಾಲೋಚನೆ ನಡೆಸಿ’ ಎಂದು ಸಲಹೆ ನೀಡಿದರು.

‘ರೋಪ್‌ ವೇ ಸಾಧ್ಯವೇ ಪರಿಶೀಲಿಸಿ’:
‘ನಾನು ಸಚಿವನಾಗಿದ್ದಾಗ ನೃಪತುಂಗ ಬೆಟ್ಟದಿಂದ ಉಣಕಲ್ ಕೆರೆವರೆಗೆ ರೋಪ್‌ ವೇ ನಿರ್ಮಿಸುವ ಆಲೋಚನೆ ಮಾಡಿದ್ದೆ. ಅದಕ್ಕಾಗಿ, ಏಜೆನ್ಸಿಯೊಂದರಿಂದ ಪ್ಲಾನಿಂಗ್ ಕೂಡ ಮಾಡಿಸಿದ್ದೆ. ಅವರು ಯೋಜನೆ ಅಸಾಧ್ಯ ಎಂದಿದ್ದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಅದು ಸಾಧ್ಯವೆ ಎಂಬುದನ್ನು ಪರಿಶೀಲಿಸಿ. ತಜ್ಞರಿಂದ ಆ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿ’ ಎಂದು ಹೇಳಿದರು.

‘ಸ್ಥಿರ ಸರ್ಕಾರವಿದ್ದರೆ ಅಭಿವೃದ್ಧಿ ಚುರುಕು’
‘ಅಭಿವೃದ್ಧಿ ಕೆಲಸಗಳು ಚುರಕುಗೊಳ್ಳಬೇಕಾದರೆ ಸ್ಥಿರ ಸರ್ಕಾರದ ಜತೆಗೆ, ಇಚ್ಛಾಶಕ್ತಿ ಬೇಕು. ಇವೆರಡರ ಕೊರತೆಯಿಂದಾಗಿ ಹುಬ್ಬಳ್ಳಿ–ಧಾರವಾಡಕ್ಕೆ ಬಂದಿರುವ ಅನೇಕ ಯೋಜನೆಗಳು ಇನ್ನೂ ತೆವಳುತ್ತಾ ಸಾಗಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿಆರ್‌ಟಿಎಸ್, ಸಿಆರ್‌ಎಫ್ ರಸ್ತೆ ಸೇರಿದಂತೆ ಕೆಲ ಯೋಜನೆಗಳ ಕಾಮಗಾರಿ ತ್ವರಿತಕ್ಕೆ ಇಚ್ಛಾಶಕ್ತಿ ತೋರಲಿಲ್ಲ. ಸದ್ಯದ ಸಮ್ಮಿಶ್ರ ಸರ್ಕಾರ ಅಸ್ಥಿರತೆಯಿಂದ ಕೂಡಿದ್ದು, ಯಾವುದೇ ಕೆಲಸಗಳಾಗುತ್ತಿಲ್ಲ’ ಎಂದು ಶೆಟ್ಟರ್ ಬೇಸರ ವ್ಯಕ್ತಪಡಿಸಿದರು.

‘ಬಿಆರ್‌ಟಿಎಸ್ ಯೋಜನೆ ಬಂದು 8 ವರ್ಷವಾಯ್ತು. ಈ ಅವಧಿಯಲ್ಲಿ ನಾಲ್ಕೈದು ಎಂ.ಡಿ.ಗಳು ಬಂದು ಹೋದರು. ಇದೀಗ ಸ್ಮಾರ್ಟ್ ಸಿಟಿ ಯೋಜನೆಗೂ ಇದೇ ಗತಿ ಬಂದಿದೆ. ರಾಜ್ಯ ಸರ್ಕಾರ ಈ ಎರಡೂ ಯೋಜನೆಗಳು ಪೂರ್ಣಗೊಳ್ಳುವವರೆಗೆ ಕಾಯಂ ಎಂ.ಡಿ.ಗಳನ್ನು ನೇಮಿಸಬೇಕು. ಆಗ ಮಾತ್ರ ಕಾಲಮಿತಿಯಲ್ಲಿ ಕೆಲಸ ಮುಗಿಯುತ್ತದೆ. ಗುಜರಾತ್‌ನಲ್ಲಿ ಒಬ್ಬ ಐಎಎಸ್‌ ಅಧಿಕಾರಿ ಕನಿಷ್ಠ 5 ವರ್ಷದವರೆಗೆ ವರ್ಗಾವಣೆಯಾಗುವುದಿಲ್ಲ. ಹಾಗಾಗಿ, ಅಲ್ಲಿ ಯೋಜನೆಗಳು ಬೇಗ ಮುಗಿಯುತ್ತವೆ. ಅಧಿಕಾರಿಗಳು ಹೆಚ್ಚಿನ ಆಸ್ಥೆ ತೋರಿಸಿ ಕೆಲಸ ಮಾಡುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT