ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಮಂತಿಕೆ, ಅಧಿಕಾರ ಪೂಜೆ ಸಲ್ಲದು: ಸಂತೋಷ್ ಹೆಗ್ಡೆ

ಮಹಿಳೆಯ ಘನತೆ, ಮಾನವ ಮೌಲ್ಯ ಉಳಿಸೋಣ– ಯುವಜನರ ಸಂಕಲ್ಪ ಸಮಾವೇಶ
Published : 19 ಸೆಪ್ಟೆಂಬರ್ 2024, 16:16 IST
Last Updated : 19 ಸೆಪ್ಟೆಂಬರ್ 2024, 16:16 IST
ಫಾಲೋ ಮಾಡಿ
Comments

ಧಾರವಾಡ: ‘ಶ್ರೀಮಂತಿಕೆ ಹಾಗೂ ಅಧಿಕಾರವನ್ನು ಪೂಜಿಸುವ ಸಮಾಜ ಈಗ ನಿರ್ಮಾಣವಾಗಿದೆ. ಇದನ್ನು ಬದಲಾಯಿಸಲು ಯುವಜನರಿಂದ ಮಾತ್ರ ಸಾಧ್ಯ' ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ಸರ್ಕಾರಿ ನೌಕರರ ಭವನದಲ್ಲಿ ‘ಮಹಿಳೆಯ ಘನತೆ ಹಾಗೂ ಮಾನವ ಮೌಲ್ಯ ಉಳಿಸೋಣ’ ಶೀರ್ಷಿಕೆಯಡಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೆಷನ್ (ಎಐಡಿವೈಒ) ರಾಜ್ಯ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ವಲಯಮಟ್ಟದ ಯುವಜನರ ಸಂಕಲ್ಪ ಸಮಾವೇಶ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇಂದಿನ ಸಮಾಜದಲ್ಲಿ ಜೈಲಿಗೆ ಹೋಗಿ ಬಂದವರನ್ನು ಸ್ವಾಗತಿಸಲಾಗುತ್ತಿದೆ. ಇದು ದುರದೃಷ್ಟಕರ ಸಂಗತಿ. ದುರಾಸೆ, ಹಣದ ಪ್ರಭಾವ ಮಿತಿ ಮೀರಿದೆ. ನಮ್ಮ ಹಿರಿಯರು ಕಟ್ಟಿದ ಮೌಲ್ಯಗಳು ಕುಸಿಯುತ್ತಿವೆ’ ಎಂದು ಆತಂಕ ವ್ಯಕ್ತಡಿಸಿದರು.

‘ಪ್ರಸ್ತುತ ಸಮಾಜದಲ್ಲಿ ಮಹಿಳೆಯರಿಗೆ ಭದ್ರತೆ ಕಡಿಮೆಯಾಗಿದೆ. ನಿರ್ಭಯಾ ಘಟನೆ ನಡೆದಾಗ ಸಮಾಜ ಜಾಗೃತಗೊಂಡಿತ್ತು. ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದರೂ ಸಾರ್ವಜನಿಕರ ವಲಯದಲ್ಲಿ ಚರ್ಚೆ ನಡೆಯುತ್ತಿಲ್ಲ. ದೌರ್ಜನ್ಯ ಘಟನೆಗಳು ನಡೆದ ಸಂದರ್ಭದಲ್ಲಿ ಜನರು ಪ್ರತಿಭಟಿಸಿ ಧ್ವನಿ ಎತ್ತಬೇಕು‘ ಎಂದು ಸಲಹೆ ನೀಡಿದರು. 

ಹಲವು ಯುವಜನರು ಮಾದಕ ವ್ಯಸನ ರೂಢಿಸಿಕೊಂಡಿದ್ದಾರೆ. ಮಕ್ಕಳಿಗೆ ಸಂಸ್ಕಾರ ಕಲಿಸದಿರುವುದರಿಂದ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಸಮಾಜದಲ್ಲಿ ಶಾಂತಿ ಸೌಹಾರ್ದದ ನಿಟ್ಟಿನಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಬೇಕು ಎಂದು ಹೇಳಿದರು.

‘ಹಿಂದಿನ ಕಾಲದಲ್ಲಿ ಹಿರಿಯರ ಮಾತಿಗೆ ಗೌರವ ಕೊಡುತ್ತಿದ್ದರು. ಆಗ ಕಡಿಮೆ ತಪ್ಪು ನಡೆಯುತ್ತಿದ್ದವು. ತಪ್ಪು ಮಾಡಿದವರಿಗೆ ಬೇಗ ಶಿಕ್ಷೆಯಾಗಬೇಕು. ಆಗ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ನ್ಯಾಯಾಂಗದ ಘನತೆ ಹೆಚ್ಚುತ್ತದೆ. ತಪ್ಪು ಮಾಡುವವರ ಸಂಖ್ಯೆ ಕಡಿಮೆಯಾಗುತ್ತದೆ’ ಎಂದರು. 

‘ತಪ್ಪು ಮಾಡಿ ಜೈಲಿಗೆ ಹೋದವರ ಮನೆಗೆ ಹೋಗಬೇಡ ಎಂದು ಹಿಂದಿನ ಕಾಲದಲ್ಲಿ ಮನೆಯರು ಹೇಳುತ್ತಿದ್ದರು. ಹೀಗಾಗಿ, ತಪ್ಪು ಮಾಡಲು ಸಮಾಜ ಭಯ ಪಡುತ್ತಿತ್ತು. ಸಮಾಜದ ಭಾವನೆ ಬದಲಾಗದಿದ್ದರೆ ಇಂಥ ಕೃತ್ಯಗಳು ನಡೆಯುತ್ತಿರುತ್ತವೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರೆ ಸಮಾಜ ತಾನಾಗಿಯೇ ಬದಲಾಗುತ್ತದೆ ಎಂದು ಹೇಳಿದರು.

ಎಐಡಿವೈಒ ಸಂಘಟನೆಯ ಉಪಾಧ್ಯಕ್ಷ ಜಿ.ಶಶಿಕುಮಾರ್ ಮಾತನಾಡಿ, ಪ್ರಸ್ತುತ ಯುವಜನರು ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಬಿಕ್ಕಟ್ಟಿನಲ್ಲಿದ್ದಾರೆ. ಬದುಕಿಗೆ ಮಾರ್ಗದರ್ಶನ ಇಲ್ಲ. ಸಮಾಜದಲ್ಲಿ ಕುಟುಂಬಕ್ಕೆ ಭದ್ರತೆ ಇದೆಯೇ ಎಂಬುದನ್ನು ಯುವಜನರು ಅರಿಯಬೇಕು‘ ಎಂದರು.

‘ತಲೆಮಾರು ಮುಗಿದಂತೆ ಮಾಲ್ಯಗಳು ಕುಸಿಯುತ್ತಿವೆ. ನಿರುದ್ಯೋಗ ಹಾಗೂ ಅಭದ್ರತೆ ಸಮಸ್ಯೆ ಕಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಕೃತಿಗಳು ನಡೆಯುತ್ತಿವೆ. ಜಾಗತೀಕರಣದಿಂದ ಮನುಷ್ಯ ವಿಕೃತನಾಗುತ್ತಿದ್ದಾನೆ. ದುರ್ಬಲ ಮನಸ್ಸಿನವರು ಪಾತಕಿಯಾಗುತ್ತಿದ್ದಾರೆ. ಯುವ ಜನರು ಹೋರಾಟದ ಮಾರ್ಗದಲ್ಲಿ ನಡೆಯಬೇಕು‘ ಎಂದರು.

ಸಿದ್ಧಲಿಂಗ ಬಾಗೇವಾಡಿ, ಶರಣಪ್ಪ ಉದ್ಭಾಳ, ರಾಮಾಂಜನೇಯಪ್ಪ ಆಲ್ದಳಿ, ವಸಂತ ನಡಹಳ್ಳಿ ವಸಂತ ಪಾಲ್ಗೊಂಡಿದ್ದರು.

ದೌರ್ಜನ್ಯ ಘಟನೆ ಖಂಡಿಸಿ ಧ್ವನಿ ಎತ್ತಲು ಸಲಹೆ ತಪ್ಪಿತಸ್ಥರಿಗೆ ತ್ವರಿತವಾಗಿ ಶಿಕ್ಷೆ ವಿಧಿಸಬೇಕು ಮಾನವೀಯ ಮೌಲ್ಯಗಳ ಪಾಲನೆಯಿಂದ ಉತ್ತಮ ಸಮಾಜ ನಿರ್ಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT