ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಐತಿಹ್ಯದ ಸೇಂಟ್‌ ಆ್ಯಂಡ್ರ್ಯೂಸ್‌ ಚರ್ಚ್

ಹುಬ್ಬಳ್ಳಿ–ಧಾರವಾಡ ಮೆಟ್ರೊ
ಅಕ್ಷರ ಗಾತ್ರ

ಬ್ರಿಟಿಷರ ಆಡಳಿತಾವಧಿಯಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಪ್ರಭಾವದಿಂದ 18ನೇ ಶತಮಾನದಲ್ಲಿ ಧಾರವಾಡ ಜಿಲ್ಲೆಯಲ್ಲಿ ಸ್ಥಾಪನೆಗೊಂಡ ಹಲವು ಚರ್ಚ್‌ಗಳ ಪೈಕಿ ಹುಬ್ಬಳ್ಳಿಯ ಸೇಂಟ್‌ ಆ್ಯಂಡ್ರ್ಯೂಸ್‌ ಚರ್ಚ್ ಪ್ರಮುಖವಾದದ್ದು. ಪ್ರಾಟೆಸ್ಟಂಟ್ ಪಂಥಕ್ಕೆ ಸೇರಿದ ಈ ಚರ್ಚ್ ನಗರದಲ್ಲಿ ಸ್ಥಾಪನೆಗೊಂಡ ಮೊದಲ ‘ಇಂಗ್ಲಿಷ್ ಚರ್ಚ್’. 1896ರಲ್ಲಿ ರೈಲ್ವೆ ಆಸ್ಪತ್ರೆ ಪಕ್ಕದಲ್ಲಿ ಈ ಚರ್ಚ್‌ನ ನಿರ್ಮಾಣ ಕಾಮಗಾರಿ ಆರಂಭಗೊಂಡಿತು. ಜೂನ್‌ 5, 1897ರಂದು ₹6,801 ವೆಚ್ಚದಲ್ಲಿ ಪೂರ್ಣಗೊಂಡ ಚರ್ಚ್‌ನ್ನು ಆಗಿನ ಮುಂಬೈನ ಬಿಷಪ್‌ ಎಲ್‌.ಜಿ.ಮೈಲಾನ್‌ ಉದ್ಘಾಟಿಸಿದರು.

ಈ ಚರ್ಚ್‌ನ್ನು ಆಗ ಅಸ್ತಿತ್ವದಲ್ಲಿದ್ದ ಎಂ.ಎಸ್‌.ಎಂ. (ಮದ್ರಾಸ್ ಆ್ಯಂಡ್‌ ಸದರ್ನ್‌ ಮಹಾರಾಷ್ಟ್ರ) ರೈಲ್ವೆ ಕಂಪನಿ ನಿರ್ಮಿಸಿತ್ತು. ಕಂಪನಿಯ ಮುಖ್ಯ ಎಂಜಿನಿಯರ್‌ ಹಡಲಸ್ಟನ್‌ ಹಾಗೂ ಧರ್ಮಗುರು ರೆವರೆಂಡ್ ಎ.ಡಬ್ಲು. ಬೇಹೆಮ್‌ ಚರ್ಚ್‌ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರೈಲ್ವೆ ಇಲಾಖೆ ಅಧಿಕಾರಿಗಳು, ಉದ್ಯೋಗಿಗಳು, ಭದ್ರತಾ ಸಿಬ್ಬಂದಿ (ಎಂ.ಎಸ್‌.ಎಂ. ರೈಫಲ್ಸ್) ಈ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು.

ರೈಲ್ವೆ ಕಂಪನಿಯ ಷೇರುದಾರರು, ಆಂಗ್ಲೋ– ಇಂಡಿಯನ್ನರು ನೀಡಿದ ವಂತಿಗೆ ಚರ್ಚ್‌ನ ಅಭಿವೃದ್ಧಿಗೆ ನಾಂದಿಯಾಯಿತು. ಕಾಲಾನಂತರ ಎಂ.ಎಸ್‌.ಎಂ. ರೈಲ್ವೆ ಕಂಪನಿಯಿಂದ ಮುಂಬೈ ಡಯಾಸಿಸ್‌ ಬೋರ್ಡ್‌ಗೆ ನಂತರ ಚರ್ಚ್‌ ಆಫ್ ಸೌತ್‌ ಇಂಡಿಯಾ ವ್ಯಾಪ್ತಿಯ ಉತ್ತರ ಕರ್ನಾಟಕ ಡಯಾಸಿಸ್ ಬೋರ್ಡ್‌ಗೆ ಚರ್ಚ್‌ ಆಡಳಿತ ಹಸ್ತಾಂತರಗೊಂಡಿತು. ಉತ್ತರ ಕರ್ನಾಟಕ ಡಯಾಸಿಸ್ ಬೋರ್ಡ್‌ನ ಕೇಂದ್ರ ಸ್ಥಳ ಧಾರವಾಡದಲ್ಲಿದ್ದು, ಬಿಷಪ್‌ ರೈಟ್‌ ರೆವೆರೆಂಡ್‌ ರವಿಕುಮಾರ್ ಜೆ. ನಿರಂಜನ್‌ ಅದರ ಮುಖ್ಯಸ್ಥರಾಗಿದ್ದಾರೆ. ಪ್ರಸ್ತುತ, ಫಾದರ್ ರೆವರೆಂಡ್ ಡಾ.ಮರ್ಫಿ ವಿಲಿಯಂ ಸೋನ್ಸ್‌ ಸೇಂಟ್‌ ಆ್ಯಂಡ್ರ್ಯೂಸ್‌ ಚರ್ಚ್‌ನ ಸಭಾಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯುರೋಪಿಯನ್ ವಾಸ್ತುಶಿಲ್ಪ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಈ ಚರ್ಚ್‌ಗೆ ಕೆಂಪು ಬಣ್ಣ ಬಳಿಯಲಾಗಿದೆ. ಚಾವಣಿಗೆ ಸಾಗವಾಣಿ ಹಾಗೂ ಸೀಸಂ ಕಟ್ಟಿಗೆ ಬಳಸಿದ್ದು, ಅದರ ಮೇಲೆ ಮಂಗಳೂರು ಹೆಂಚು ಅಳವಡಿಸಲಾಗಿದೆ. ಮಳೆ, ಚಳಿ, ಬೇಸಿಗೆಯಲ್ಲಿ ಒಂದೇ ವಿಧದ ಉಷ್ಣಾಂಶ ಹೊಂದಿರುವ ತಂತ್ರಜ್ಞಾನ ಅಳವಡಿಸಲಾಗಿದೆ.

ಚರ್ಚ್‌ನ ಪವಿತ್ರ ವೇದಿಕೆಯಲ್ಲಿ ಇಟಲಿಯಿಂದ ಆಮದು ಮಾಡಿಕೊಂಡಿರುವ ಅಮೃತಶಿಲೆ ನೆಲಹಾಸು ಹಾಕಲಾಗಿದೆ. ಗದ್ದುಗೆಯಲ್ಲಿ ಶಿಲುಬೆ, ಪವಿತ್ರಗ್ರಂಥ ಹಾಗೂ 2 ಪುಟ್ಟ ದೀಪಸ್ತಂಭಗಳನ್ನು ಪ್ರತಿಷ್ಠಾಪಿಸಲಾಗಿದೆ. ವೇದಿಕೆಯ ಎಡ– ಬಲಬದಿಗಳಲ್ಲಿ ಪವಿತ್ರಪೀಠ ಸ್ಥಾಪಿಸಲಾಗಿದೆ. ಗದ್ದುಗೆ ಸಮ್ಮುಖದಲ್ಲಿ ಪವಿತ್ರಗ್ರಂಥ ಪಠಣಕ್ಕಾಗಿರುವ ಹಿತ್ತಾಳೆ ಸ್ಟ್ಯಾಂಡ್‌ ಎಲ್ಲರ ಗಮನಸೆಳೆಯುತ್ತದೆ. 122 ವರ್ಷ ಕಳೆದಿದ್ದರೂ ಹೊಳಪು ಕಳೆದುಕೊಳ್ಳದ ಅದರ ಕೆತ್ತನೆ ವಿಶಿಷ್ಟವಾಗಿದೆ. ಚರ್ಚ್‌ನಲ್ಲಿರುವ ಪೀಠೋಪಕರಣಗಳು ಕೂಡ ಸಾಗವಾಣಿಯಿಂದ ನಿರ್ಮಾಣಗೊಂಡಿದ್ದು ಶತಮಾನ ಕಳೆದರೂ ಹೊಳಪು ಕಳೆದುಕೊಳ್ಳದೇ, ಗಟ್ಟಿಮುಟ್ಟಾಗಿವೆ.

ಸಂಪೂರ್ಣ ಅಮೃತಶಿಲೆಯಲ್ಲಿ ನಿರ್ಮಿಸಿರುವ ‘ದೀಕ್ಷಾ ಸ್ನಾನ ಕುಂಡ’ವನ್ನು (ಬ್ಯಾಪ್ಟಿಸಂ ಪಾಂಡ್) ಕೂಡ ಇಟಲಿಯಿಂದ ಆಮದು ಮಾಡಿಕೊಳ್ಳಲಾಗಿದೆ. ಇಲ್ಲಿ ಶಿಶುಗಳಿಗೆ ಧರ್ಮದೀಕ್ಷೆ ನೀಡುವ, ಹೆಸರಿಡುವ ಕಾರ್ಯಕ್ರಮ ಜರುಗುತ್ತವೆ. ಚರ್ಚ್‌ಗೆ ಸಂಬಂಧಿಸಿದ ಪ್ರಮುಖರ ಜನನ–ಮರಣಗಳ ಉಲ್ಲೇಖ ಹೊಂದಿರುವ 7 ಹಿತ್ತಾಳೆ ಫಲಕಗಳನ್ನು ಚರ್ಚ್‌ನ ಗೋಡೆ ಮೇಲೆ ಅಳವಡಿಸಲಾಗಿದೆ. ಆರಂಭದಿಂದ ಇಲ್ಲಿಯವರೆಗೆ ಸೇವೆಗೈದ ಸಭಾಪಾಲಕರ ವಿವರಗಳನ್ನೊಳಗೊಂಡ ಹಿತ್ತಾಳೆ ಫಲಕವೂ ಆಕರ್ಷಕವಾಗಿದೆ.

ಚರ್ಚ್‌ ಆವರಣದಲ್ಲಿ ಮಾವು, ಬೇವು, ಅಶೋಕವೃಕ್ಷ, ಗುಲ್‌ಮೊಹರ್... ಮತ್ತಿತರ ವೃಕ್ಷಗಳು, ಆಲಂಕಾರಿಕ ಹೂವಿನ ಗಿಡಗಳಿದ್ದು, ಪರಿಸರ ಪ್ರೇಮ ಎದ್ದುಕಾಣುತ್ತದೆ. ಚರ್ಚ್‌ ಆವರಣದಲ್ಲಿ ಸ್ಥಾಪನೆಗೊಂಡಿರುವ ಸೇಂಟ್‌ ಆ್ಯಂಡ್ರ್ಯೂಸ್‌ ಇಂಗ್ಲಿಷ್‌ ಮಾಧ್ಯಮ ಶಾಲೆ ಶಿಕ್ಷಣ ಸೇವೆಗೆ ಹೆಸರಾಗಿದೆ.

ಕ್ರಿಸ್‌ಮಸ್‌ ಮಾಸಾಚರಣೆ ಸೇರಿ ಚರ್ಚ್‌ನಲ್ಲಿ ಹಲವು ವಿಶೇಷ ಆಚರಣೆಗಳು ನಡೆಯುತ್ತವೆ. ಗುಡ್‌ಫ್ರೈಡೇ, ಬೂದಿ ಬುಧವಾರದಿಂದ 40 ದಿನಗಳು ಹಾಗೂ 7 ಭಾನುವಾರಗಳಂದು ಉಪವಾಸ ಆಚರಣೆ, ಈಸ್ಟರ್‌ ಸಂಡೇ, ಸುಗ್ಗಿಹಬ್ಬ, ಬೈಬಲ್‌ ರೀಡಿಂಗ್, ಕರ್ತನ ಪವಿತ್ರ ಭೋಜನ, ಜೂನ್‌ 5ರಂದು ವಾರ್ಷಿಕೋತ್ಸವ, ನವೆಂಬರ್ 30ರಂದು ಸೇಂಟ್‌ ಆ್ಯಂಡ್ರ್ಯೂಸ್‌ ಡೇ, ಡಿಸೆಂಬರ್ ತಿಂಗಳಾದ್ಯಂತ ವೈವಿಧ್ಯಮಯ ಕಾರ್ಯಕ್ರಮ– ವಿಶೇಷ ಪ್ರಾರ್ಥನೆಗಳು, ಕ್ಯಾಂಡಲ್‌ ಲೈಟ್‌ ಸರ್ವಿಸ್, ಏಸುವಿನ ಜನ್ಮದಿನಾಚರಣೆ, ಕ್ರಿಸ್‌ಮಸ್‌ ಟ್ರೀಟ್, ಕೃತಜ್ಞತಾ ದಿನ, ಹೊಸ ವರ್ಷಾಚರಣೆ... ಅವುಗಳಲ್ಲಿ ಪ್ರಮುಖವಾಗಿವೆ.

ಪ್ರತಿ ಭಾನುವಾರ ಏರ್ಪಡಿಸುವ ಕರ್ತನ ಪವಿತ್ರ ಭೋಜನ ಏಸುವಿನ ತ್ಯಾಗ, ಬಲಿದಾನಗಳನ್ನು ಸಂಸ್ಮರಿಸುತ್ತದೆ. ಚರ್ಚ್‌ನ ನಾಮದಾತ ಸೇಂಟ್‌ ಆ್ಯಂಡ್ರ್ಯೂಸ್‌ ಅವರ ಜನ್ಮದಿನದಂದು ಚರ್ಚ್‌ನ ಸದಸ್ಯತ್ವ ಹೊಂದಿರುವ 60, 75 ಹಾಗೂ 85 ವರ್ಷ ಪೂರೈಸಿದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಗುತ್ತದೆ.

ಪ್ರತಿ ವರ್ಷ ಕ್ರಿಸ್‌ಮಸ್‌ ಮುಂಚಿನ ಭಾನುವಾರ ಕ್ಯಾಂಡಲ್‌ ಲೈಟ್‌ ಸರ್ವಿಸ್ ಆಚರಿಸಲಾಗುತ್ತದೆ. ಆ ದಿನ ಚರ್ಚ್‌ನ ಎಲ್ಲ ವಿದ್ಯುದ್ದೀಪಗಳನ್ನು ಆರಿಸಿ ಮೇಣದಬತ್ತಿಯನ್ನು ಪ್ರಜ್ವಲಿಸಿ ಬೆಳಕನ್ನು (ಜ್ಞಾನ, ಸುಭಿಕ್ಷೆ) ಪಸರಿಸಲಾಗುತ್ತದೆ.

ಡಿಸೆಂಬರ್‌ 30ರಂದು ಆಚರಿಸುವ ಕೃತಜ್ಞತಾ ದಿನದಂದು ಚರ್ಚ್‌ನ ಸದಸ್ಯತ್ವ ಹೊಂದಿರುವ ಪ್ರತಿ ಕುಟುಂಬದವರು ವೇದಿಕೆಗೆ ಬಂದು ತಮ್ಮ ವರ್ಷದ ಅನುಭವ, ಬೆಳವಣಿಗೆ, ಕಷ್ಟ–ಸುಖಗಳನ್ನು ಹಂಚಿಕೊಂಡು ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಮುಂಬರುವ ವರ್ಷ ಸುಖವಾಗಿರಲಿ ಎಂದು ಸಂಕಲ್ಪಿಸಿ ಗಾಯನದ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.

ಬಣ್ಣ ಬದಲಿಸುವ ಕರ್ಟನ್‌ಗಳು: ಚರ್ಚ್‌ನ ಪವಿತ್ರ ವೇದಿಕೆಯ ಹಿನ್ನೆಲೆಯಲ್ಲಿ ಅಳವಡಿಸುವ ಕರ್ಟನ್‌ಗಳು ವಿಶೇಷವಾಗಿವೆ. ಸಂತರ ಸ್ಮರಣೆ ಅವಧಿಯಲ್ಲಿ ಕೆಂಪು, ಈಸ್ಟರ್‌ ಅವಧಿಯಲ್ಲಿ ಹಸಿರು, ಹಬ್ಬ ಮತ್ತಿತರ ಆಚರಣೆಗಳಲ್ಲಿ ನೇರಳೆ, ವಾರ್ಷಿಕೋತ್ಸವ ಅವಧಿಯಲ್ಲಿ ಬಿಳಿ ಬಣ್ಣದ ಕರ್ಟನ್‌ ಅಳವಡಿಸಲಾಗುತ್ತದೆ.

ಎಲ್ಲದಕ್ಕೂ ದಾಖಲೆಗಳಿವೆ
ಚರ್ಚ್‌ ವ್ಯಾಪ್ತಿಯಲ್ಲಿ 100 ಕುಟುಂಬಗಳೂ 4 ಸಾವಿರಕ್ಕೂ ಹೆಚ್ಚು ಸದಸ್ಯರೂ ಇದ್ದಾರೆ. ಅವರೆಲ್ಲ ತಮ್ಮ ಗಳಿಕೆಯ ಶೇ 1ರಷ್ಟನ್ನಾದರೂ ಚರ್ಚ್‌ನ ಅಭಿವೃದ್ಧಿಗೆ ದೇಣಿಗೆ ನೀಡುತ್ತಾರೆ. ಚರ್ಚ್‌ನ ಆರಂಭದಿಂದ ಜನನ, ಮರಣ, ವಿವಾಹ ಸಂಬಂಧಿಸಿದ ಮಾಹಿತಿಯನ್ನು ರಜಿಸ್ಟರ್‌ನಲ್ಲಿ ದಾಖಲಿಸಿಡಲಾಗಿದೆ. ಇಂದಿಗೂ ದೇಶ– ವಿದೇಶಗಳಿಂದ ಬರುವ ಮೊಮ್ಮಕ್ಕಳು, ಮರಿಮಕ್ಕಳು, ಗಿರಿಮಕ್ಕಳು ತಮ್ಮ ಪೂರ್ವಜರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಅವರಿಗೆ ಗೌರವ ಸಮರ್ಪಿಸುತ್ತಾರೆ. ಅವರೆಲ್ಲರಿಗೂ ಈ ಚರ್ಚ್‌ನೊಂದಿಗೆ ಭಾವನಾತ್ಮಕ ನಂಟಿದೆ.

‘ಪರಾರ್ಥ ಪ್ರಾರ್ಥನೆ’ಗೆ ಆದ್ಯತೆ
ಚರ್ಚ್‌ನಲ್ಲಿ ಪ್ರತಿ ಭಾನುವಾರ ಕ್ರಿಶ್ಚಿಯನ್ನೇತರ ಸಮುದಾಯಗಳ ಅಭ್ಯುದಯಕ್ಕಾಗಿ ‘ಪರಾರ್ಥ ಪ್ರಾರ್ಥನೆ’ ಸಲ್ಲಿಸಲಾಗುತ್ತದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲ, ಮುಖ್ಯಮಂತ್ರಿ ಇವರ ಕ್ಷೇಮಕ್ಕಾಗಿ ಪ್ರಾರ್ಥಿಸಲಾಗುತ್ತದೆ. ಪ್ರಕೃತಿವಿಕೋಪಗಳ ಸಂತ್ರಸ್ತರ ಒಳಿತಿಗಾಗಿ ಪ್ರಾರ್ಥಿಸಿ, ಕೈಲಾದಷ್ಟು ನೆರವು ನೀಡಲಾಗುತ್ತದೆ ಎಂದು ಸೇಂಟ್‌ ಆ್ಯಂಡ್ರ್ಯೂಸ್‌ ಚರ್ಚ್‌ನ ಸಭಾಪಾಲಕ ಫಾದರ್ ರೆವರೆಂಡ್ ಡಾ.ಮರ್ಫಿ ವಿಲಿಯಂ ಸೋನ್ಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT