ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಪ್ರೀತಿ: ಕನ್ನಡಮಯವಾದ ಬಸ್‌

ಬಸ್‌ನಲ್ಲಿ ಕಲಾವಿದರು, ಸಾಹಿತಿಗಳು, ಸಾಧಕರ ಪರಿಚಯ
Last Updated 1 ನವೆಂಬರ್ 2020, 9:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಗ್ರಾಮಾಂತರ ಘಟಕ 1ರ ಹುಬ್ಬಳ್ಳಿ–ಸವದತ್ತಿ ಬಸ್ ಭಾನುವಾರ ಮಧ್ಯಾಹ್ನ ನಗರದ ಹಳೇ ಬಸ್‌ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಅಲ್ಲಿದ್ದ ಜನರಲ್ಲಿ ಸಂಭ್ರಮ. ಜೈ ಕನ್ನಡಾಂಬೆ, ಕನ್ನಡ ಮಾತೆಗೆ ಜೈ ಎನ್ನುವ ಘೋಷಣೆಗಳು ಮೊಳಗಿದವು.

ಸಾರಿಗೆ ಇಲಾಖೆಯ ನಿರ್ವಾಹಕರು ಮತ್ತು ಚಾಲಕರು ಸೇರಿ ಸ್ವಂತ ಖರ್ಚಿನಿಂದ ಬಸ್ ‘ಕನ್ನಡಮಯ’ ಮಾಡಿದ್ದರು. ಬಸ್‌ ಮುಂಭಾಗದಲ್ಲಿ ಭುವನೇಶ್ವರಿಯ ಭಾವಚಿತ್ರ ಅಂಟಿಸಿ ಪೂಜೆ ಮಾಡಲಾಗಿತ್ತು. ಬಣ್ಣಬಣ್ಣದ ಬಲೂನ್‌ಗಳಿಂದ ಬಸ್‌ ಅಲಂಕರಿಸಲಾಗಿತ್ತು. ಬಸ್ ಒಳಗಡೆ ಎಲ್ಲಿ ನೋಡಿದರೂ ಕನ್ನಡಮಯ. ಕನ್ನಡ ನಾಡು, ನುಡಿ ಮತ್ತು ಭಾಷೆಗಾಗಿ ದುಡಿದ ಕವಿಗಳು, ಕಲಾವಿದರು, ವೀರಯೋಧರು, ಕನ್ನಡದ ಮೇರು ನಟರು, ಸಾಹಿತಿಗಳು ಹೀಗೆ ಪ್ರತಿಯೊಬ್ಬರ ಭಾವಚಿತ್ರಗಳನ್ನು ಹಾಕಲಾಗಿತ್ತು.

ಹಂಪಿ, ಐಹೊಳೆ, ಬಾದಾಮಿ, ಪಟ್ಟದಕಲ್ಲು, ವಿಜಯನಗರದ ಅರಸರು, ಕನ್ನಡದ ಸಂತರು ಹೀಗೆ ಪ್ರಮುಖ ಎಲ್ಲ ಮಹನೀಯರ ಚಿತ್ರಗಳನ್ನು ಅಂಟಿಸಲಾಗಿತ್ತು. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ, ದ.ರಾ. ಬೇಂದ್ರೆ, ಕುವೆಂಪು, ವಿ.ಕೃ. ಗೋಕಾಕ, ಯು.ಆರ್‌. ಅನಂತಮೂರ್ತಿ, ಗಿರೀಶ ಕಾರ್ನಾಡ ಮತ್ತು ಚಂದ್ರಶೇಖರ ಕಂಬಾರ ಅವರು ಈ ಪ್ರಶಸ್ತಿಗಳನ್ನು ಪಡೆದ ವರ್ಷ, ಯಾವ ಸಾಧನೆಗೆ ಈ ಗೌರವ ಬಂದಿದೆ ಎನ್ನುವ ಮಾಹಿತಿ ಹೊಂದಿದ್ದ ಪೋಸ್ಟರ್‌ಗಳು ಬಸ್‌ನೊಳಗೆ ರಾರಾಜಿಸುತ್ತಿದ್ದವು.

ಬಸ್‌ ಚಾಲಕ ನಾಗರಾಜ ಬೂಮಣ್ಣನವರು, ನಿರ್ವಾಹಕರಾದ ಕಲ್ಲಣ್ಣನವರ ಮತ್ತು ರಿಯಾಜ್‌ ಹೀಗೆ ಹಲವಾರು ಸಿಬ್ಬಂದಿ ಶೃಂಗಾರಗೊಂಡ ಬಸ್‌ ಮುಂದೆ ಕನ್ನಡ ಹಾಡುಗಳಿಗೆ ಹೆಜ್ಜೆಯಾಗಿ ಸಂಭ್ರಮಿಸಿದರು.

ಹುಬ್ಬಳ್ಳಿ ಗ್ರಾಮಾಂತರ ಘಟಕದಲ್ಲಿ ಚಾಲಕ ಮತ್ತು ನಿರ್ವಾಹಕರಾಗಿರುವ ಶಿವಪ್ಪ ದ್ಯಾಮಣ್ಣ ದ್ಯಾಮಣ್ಣನವರ ಪ್ರತಿಕ್ರಿಯಿಸಿ ‘ಪ್ರತಿ ರಾಜ್ಯೋತ್ಸವ ಸಮಯದಲ್ಲಿ ಇದಕ್ಕಿಂತಲೂ ವಿಜೃಂಭಣೆಯಿಂದ ಮಾಡುತ್ತಿದ್ದೆವು. ಕೋವಿಡ್‌ ಇರುವ ಕಾರಣ ಈ ವರ್ಷ ಹೆಚ್ಚು ಜನ ಸೇರಿಲ್ಲ. ಬಸ್‌ ಅಲಂಕಾರಕ್ಕೆ ನಾಗರಾಜ ಬೂಮಣ್ಣನವರು ಹಣ ಹಾಕಿದ್ದು, ನಾವೆಲ್ಲರೂ ಕೈ ಜೋಡಿಸಿದ್ದೇವೆ’ ಎಂದರು.

ನಾಗರಾಜ ಮಾತನಾಡಿ ‘ಕೋವಿಡ್‌ನಿಂದಾಗಿ ಜನ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಬಹಳಷ್ಟು ಜನರಿಗೆ ಮನಸ್ಸು ಜಡ್ಡುಗಟ್ಟಿದಂತಾಗಿದೆ. ಆದ್ದರಿಂದ ಹಬ್ಬಗಳು, ನಾಡು, ನುಡಿಯ ದಿನಗಳಿಂದು ಸಂಭ್ರಮದಿಂದ ಆಚರಿಸಿದರೆ ಮನಸ್ಸಿಗೂ ಖುಷಿ ಸಿಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT