ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಕಿ–ಅಂಶ ಸಂಗ್ರಹ: ಖಚಿತತೆಗೆ ಆದ್ಯತೆ’

ರಾಷ್ಟ್ರೀಯ ಮಾದರಿ ಸಮೀಕ್ಷೆ: ಜುಲೈ 1ರಿಂದ ಆರಂಭ
Last Updated 20 ಜೂನ್ 2018, 8:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಂಕಿ–ಅಂಶ ಸಂಗ್ರಹದಲ್ಲಿ ಗುಣಮಟ್ಟ ಮತ್ತು ಖಚಿತತೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಕೇಂದ್ರ ಅಂಕಿ–ಅಂಶ ಸಂಸ್ಕರಣಾ ಕೇಂದ್ರದ ಮಹಾ ನಿರ್ದೇಶಕ ಕೃಷ್ಣಮೂರ್ತಿ ಮಯ್ಯ ಸಲಹೆ ನೀಡಿದರು.

ನಗರದಲ್ಲಿ ಸೋಮವಾರ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯ (ಎನ್‌ಎಸ್‌ಎಸ್‌ಒ) ಪ್ರಾಂತೀಯ ಅಧಿಕಾರಿಗಳಿಗೆ ಆಯೋಜಿಸಿದ್ದ ಶಿಬಿರ ಉದ್ಘಾಟಿಸಿ ಮಾತನಾಡಿದರು.

ದೇಶದ ಅಭಿವೃದ್ಧಿಯನ್ನು ತಾಳೆ ಹಾಕಲು ಅಂಕಿ–ಅಂಶಗಳು ಮಹತ್ವದ ಪಾತ್ರ ವಹಿಸುತ್ತವೆ. ಯೋಜನೆಯೊಂದರ ಯಶಸ್ಸು, ಅಭಿವೃದ್ಧಿ ಪಥ ಎಲ್ಲವನ್ನೂ ಅಂಕಿ–ಅಂಶಗಳ ಆಧಾರದಲ್ಲೇ ನಿರ್ಧರಿಸಬೇಕಾಗುತ್ತದೆ. ಹೀಗಾಗಿ, ಅಂಕಿ–ಅಂಶ ಸಂಗ್ರಹಿಸುವಾಗ ಅಧಿಕಾರಿಗಳು ತುಂಬಾ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.

ದೇಶದ ಯೋಜನೆ, ಯೋಚನೆಗಳ ತಳಹದಿ ಅಂಕಿ–ಅಂಶಗಳಾಗಿವೆ. ಯಾವುದೇ ಅಭಿವೃದ್ಧಿ ಕೆಲಸದಿಂದ ದೇಶದ ಮೇಲಾಗಿರುವ ಪರಿಣಾಮ, ಬದಲಾವಣೆಯನ್ನು ಅಂಕಿ–ಅಂಶಗಳನ್ನು ಆಧರಿಸಿಯೇ ಹೇಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಎನ್‌ಎಸ್‌ಎಸ್‌ಒ ಜಂಟಿ ನಿರ್ದೇಶಕ ಎನ್‌. ಸುಶೀಂದ್ರಬಾಬು ಮಾತನಾಡಿ, ‘ಜುಲೈ 1ರಿಂದ ಅಂಕಿ –ಅಂಶ ಸಂಗ್ರಹ ಕೆಲಸ ದೇಶದಾದ್ಯಂತ ಆರಂಭವಾಗಲಿದ್ದು, ಡಿಸೆಂಬರ್‌ 31ರಂದು ಕೊನೆಗೊಳ್ಳಲಿದೆ’ ಎಂದು ತಿಳಿಸಿದರು.

ಮೊದಲ ಸುತ್ತಿನಲ್ಲಿ ಕುಡಿಯುವ ನೀರಿನ ಸೌಕರ್ಯ, ನೈರ್ಮಲ್ಯ, ಮನೆಗಳ ಲಭ್ಯತೆ ಹಾಗೂ ಜನರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳ ಕುರಿತು ಮಾಹಿತಿ ಸಂಗ್ರಹಿಸಲಾಗುವುದು. ವಿಶೇಷವಾಗಿ, ಅಂಗವಿಕಲರ ಸಮಸ್ಯೆಗಳು, ಅವರಿಗೆ ಲಭ್ಯ ಇರುವ ಸೌಲಭ್ಯಗಳು, ಸಿಗುತ್ತಿರುವ ಸಹಾಯ, ಹಾಗೂ ಅಂಗವಿಕಲತೆಗೆ ಕಾರಣವಾಗುತ್ತಿರುವ ಅಂಶಗಳು ಬಗ್ಗೆ ಮಾಹಿತಿ ಸಂಗ್ರಹ ನಡೆಯಲಿದೆ ಎಂದು ಹೇಳಿದರು.

ಈ ಸಲದ ಸಮೀಕ್ಷೆಯಲ್ಲಿ ಸಂಗ್ರಹಿಸುವ ಅಂಶಗಳನ್ನು ನೀರಿನ ಸೂಚಿ ಹಾಗೂ ಸೂಚ್ಯಂಕಗಳ ತಯಾರಿಕೆಯಲ್ಲಿ ಬಳಸಲಾಗುವುದು. ನುರಿತ ಅಧಿಕಾರಿಗಳು ಈ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಸಾರ್ವಜನಿಕರು ಅಧಿಕಾರಿಗಳಿಗೆ ನೆರವಾಗಬೇಕು ಎಂದು ಹೇಳಿದರು.

ಅಂಕಿ–ಅಂಶಗಳ ಪರಿಕಲ್ಪನೆ, ವ್ಯಾಖ್ಯಾನ, ವಿನ್ಯಾಸದ ಕುರಿತು ಎನ್‌ಎಸ್‌ಎಸ್‌ಒ ಜಂಟಿ ನಿರ್ದೇಶಕ ಎನ್‌.ಸುಶೀಂಧ್ರ ಬಾಬು, ಪಟ್ಟಿ ತಯಾರಿಕೆ, ಮನೆಗಳ ಆಯ್ಕೆ ಮಾಡುವ ಕುರಿತು ಎನ್‌ಎಸ್‌ಎಸ್‌ಒ ಮುಖ್ಯ ಅಧಿಕಾರಿ ಬಿ.ಎಸ್‌.ಭಾಂಗಿ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT