ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸುರಕ್ಷೆ ಇರಲಿ ಕಾಳಜಿ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 19 ಜುಲೈ 2019, 20:04 IST
ಅಕ್ಷರ ಗಾತ್ರ

ಪ್ರತಿ ವರ್ಷ ಶಾಲೆ ಆರಂಭವಾಗುವ ಹೊತ್ತಿನಲ್ಲಿ ಮಕ್ಕಳನ್ನು ಈ ವರ್ಷ ಯಾವ ವಾಹನದಲ್ಲಿ ಕಳಿಸಬೇಕು, ಶಾಲೆಯ ವಾಹನವಾದರೆ ಉತ್ತಮವೇ; ಆಟೊದಲ್ಲಿ ಕಳುಹಿಸಿದರೆ ಸುರಕ್ಷಿತವೇ? ಹೀಗೆ ನೂರಾರು ಪ್ರಶ್ನೆಗಳು ಪೋಷಕರನ್ನು ಕಾಡುತ್ತವೆ. ಏಕೆಂದರೆ ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ, ಅಸುರಕ್ಷಿತ ಚಾಲನೆ, ನಿಯಮ ಮೀರಿ ವಾಹನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ತೆಗ್ಗು–ಗುಂಡಿಗಳೇ ತುಂಬಿರುವ ಹುಬ್ಬಳ್ಳಿಯ ರಸ್ತೆಗಳು ವಾಹನ ಸವಾರರನ್ನು ಇನ್ನಷ್ಟು ಹೈರಾಣಾಗಿಸಿವೆ.

ನಗರ ಪ್ರದೇಶಗಳಲ್ಲಿ ‘ಓಡುವ’ ಭರದಲ್ಲಿ ಅದೆಷ್ಟೋ ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ವಾಹನದ ತನಕ ಹೋಗಿ ಬರುವಷ್ಟು ಕೂಡ ಪುರಸೊತ್ತು ಇರುವುದಿಲ್ಲ. ಆಟೊ, ಮ್ಯಾಕ್ಸಿಕ್ಯಾಬ್‌ ಮತ್ತು ಶಾಲಾ ವಾಹನಗಳ ಚಾಲಕರ ಮೇಲೆ ಭರವಸೆ ಇಟ್ಟು ಮಕ್ಕಳನ್ನು ಕಳುಹಿಸುತ್ತಾರೆ. ಮಕ್ಕಳು ಮನೆಗೆ ಬರುವ ತನಕ ಪೋಷಕರು ಕೈಯಲ್ಲಿ ಜೀವ ಹಿಡಿದುಕೊಂಡಿರುತ್ತಾರೆ.

ಮಕ್ಕಳನ್ನು ಕರೆದುಕೊಂಡು ಹೋಗುವ ಶಾಲಾ ವಾಹನ ಹೇಗಿರಬೇಕು, ಯಾವೆಲ್ಲ ಸೌಲಭ್ಯಗಳನ್ನು ಹೊಂದಿರಬೇಕು ಎನ್ನುವುದರ ಬಗ್ಗೆಯೂ ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ. ಎಲ್ಲ ಮಧ್ಯಮ ವರ್ಗದ ಕುಟುಂಬದವರು ಪ್ರತಿ ತಿಂಗಳು ಸಾವಿರಾರು ರೂಪಾಯಿ ಖರ್ಚು ಮಾಡಿ ಮಕ್ಕಳನ್ನು ಶಾಲಾ ವಾಹನದಲ್ಲಿ ಕಳಿಸುವಷ್ಟು ಶಕ್ತರಾಗಿರುವುದಿಲ್ಲ. ಆದ್ದರಿಂದ ಆಟೊಗಳ ಮೊರೆ ಹೋಗುತ್ತಾರೆ.

ನಿಯಮ ಮೀರಿ ಮಕ್ಕಳನ್ನು ಆಟೊದಲ್ಲಿ ಕರೆದುಕೊಂಡು ಹೋಗಬಾರದು ಎಂದು ಪೊಲೀಸರು ಅನೇಕ ಬಾರಿ ಆಟೊ ಚಾಲಕರಿಗೆ ತಿಳಿ ಹೇಳಿದರೂ ಸುಧಾರಣೆಯಾಗುತ್ತಿಲ್ಲ. ಏಕೆ ಹೀಗೆ ಎಂದು ಆಟೊ ಚಾಲಕರೊಬ್ಬರನ್ನು ಪ್ರಶ್ನಿಸಿದಾಗ ‘ವಾಸ್ತವ ಸ್ಥಿತಿ ಬೇರೆಯೇ ಇದೆ. ಕಾನೂನಿಗೆ ಬದ್ಧರಾಗಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ ನಿಜ; ಕಡಿಮೆ ಮಕ್ಕಳನ್ನು ಕರೆದುಕೊಂಡು ಹೋದರೆ ಪೋಷಕರಿಂದ ಶಾಲೆಯ ವಾಹನಗಳು ಪಡೆಯುವಷ್ಟೇ ಹಣ ಪಡೆಯಬೇಕಾಗುತ್ತದೆ. ನಾವು ಹೀಗೆ ಮಾಡಿದರೆ ಬಹುತೇಕ ಪೋಷಕರು ಹೆಚ್ಚು ಹಣ ಕೊಡಲು ಒಪ್ಪುವುದಿಲ್ಲ. ಹಾಗಾಗಿ, ಅಧಿಕ ಮಕ್ಕಳನ್ನು ಕರೆದುಕೊಂಡು ಅನಿವಾರ್ಯ’ ಎಂದರು.

ಪೋಷಕರು ಮಕ್ಕಳನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶಾಲೆಗೆ ಸೇರಿಸುತ್ತಾರೆ. ಪಠ್ಯಪುಸ್ತಕ, ಶಾಲಾ ಸಮವಸ್ತ್ರಕ್ಕೆ ಸಾವಿರಾರು ರೂಪಾಯಿ ವೆಚ್ಚ ಮಾಡುತ್ತಾರೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪೋಷಕರು ಮಕ್ಕಳನ್ನು ಕಳುಹಿಸುವ ವಾಹನಗಳ ಬಗ್ಗೆಯೂ ಎಚ್ಚರದಿಂದ ಇರಬೇಕು. ಮಕ್ಕಳ ಸುರಕ್ಷತೆಗಿಂತ ಯಾವುದೂ ದೊಡ್ಡದಲ್ಲ ಎನ್ನುವ ಅರಿವು ಮೂಡಬೇಕು.

ಆಟೊದಲ್ಲಿ 6 ಮಕ್ಕಳಿಗಷ್ಟೇ ಅವಕಾಶ

‘ದೊಡ್ಡವರಾದರೆ ಆಟೊಗಳಲ್ಲಿ ಮೂವರಿಗಿಂತ ಹೆಚ್ಚು ಜನರನ್ನು ಕರೆದುಕೊಂಡು ಹೋಗುವಂತಿಲ್ಲ. ಶಾಲಾ ಮಕ್ಕಳಾದರೆ ಆರು ಮಕ್ಕಳನ್ನು ಕರೆದುಕೊಂಡು ಹೋಗಲು ಅವಕಾಶವಿದೆ. ವ್ಯಾನ್‌, ಶಾಲಾ ಬಸ್ಸುಗಳಾದರೆ ಆ ವಾಹನದ ಸೀಟಿನ ಸಾಮರ್ಥ್ಯದಷ್ಟೇ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಬೇಕು ಎನ್ನುವ ನಿಯಮವಿದೆ. ಮ್ಯಾಕ್ಸಿ ಕ್ಯಾಬ್‌ನಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವಂತಿಲ್ಲ’ ಎಂದು ಹುಬ್ಬಳ್ಳಿ ಪೂರ್ವ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ವಾಡ್ ತಿಳಿಸಿದರು.

ಸುಪ್ರೀಂ ಕೋರ್ಟ್‌ ಮಾರ್ಗಸೂಚಿಗಳು

lಪ್ರತಿ ಶಾಲೆಯಲ್ಲಿ ಶಾಲಾ ವಾಹನ ಸುರಕ್ಷತಾ ಸಮಿತಿ ರಚಿಸಬೇಕು. ವಾಹನಗಳನ್ನು ಸಮಿತಿ ಪರಿಶೀಲಿಸಿ ಅನುಮೋದನೆ ನೀಡಬೇಕು.

lವಾಹನ ಚಾಲಕನಿಗೆ ಕನಿಷ್ಠ 5 ವರ್ಷ ಅನುಭವ ಇರಬೇಕು. ಆತನ ವಿರುದ್ಧ ಅಪಘಾತದ ದೂರು ದಾಖಲಾಗಿರಬಾರದು. ಕುಡಿದು ಚಾಲನೆ ಮಾಡಿದ ಬಗ್ಗೆ ದಂಡ ಕಟ್ಟಿರಬಾರದು. ಆತನ ಸಂಪೂರ್ಣ ಮಾಹಿತಿಯನ್ನು ಶಾಲಾ ಸಮಿತಿ ಹೊಂದಿರಬೇಕು.

lವಾಹನವು ಪರ್ಮಿಟ್‌ ಹೊಂದಿರುವ ಜತೆಗೆ, ಸುಸ್ಥಿತಿಯಲ್ಲಿರಬೇಕು. 15 ವರ್ಷಗಳಿಗಿಂತ ಹಳೆಯದಾಗಿರಬಾರದು. 40 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಹೋಗದಂತೆಸ್ಪೀಡ್‌ ಗವರ್ನರ್‌ ಅಳವಡಿಸಿರಬೇಕು.

lವಾಹನ ಸಂಪೂರ್ಣವಾಗಿ ಹಳದಿ ಬಣ್ಣ ಹೊಂದಿರಬೇಕು. ಹಿಂದೆ ಮತ್ತು ಮುಂದೆ ಶಾಲಾ ವಾಹನ ಎಂದು ದಪ್ಪ ಅಕ್ಷರದಲ್ಲಿ (100 ಮಿ.ಮೀ.ಗಿಂತ ಹೆಚ್ಚು) ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿರಬೇಕು. ಉಳಿದ ಎರಡು ಕಡೆ ಶಾಲೆಯ ಹೆಸರು ಮತ್ತು ದೂರವಾಣಿ ಸಂಖ್ಯೆ ಬರೆದಿರಬೇಕು.

lಮಕ್ಕಳನ್ನು ಹತ್ತಿಸಿಕೊಳ್ಳಲು ಮತ್ತು ಸುರಕ್ಷಿತವಾಗಿ ಇಳಿಸಿ ಪಾಲಕರಿಗೆ ಒಪ್ಪಿಸಲು ಶಾಲೆಯ ಸಿಬ್ಬಂದಿಯೊಬ್ಬರು ವಾಹನದಲ್ಲಿರಬೇಕು.

lಅಗ್ನಿ ಅವಘಡ ಸಂದರ್ಭದಲ್ಲಿ ಸರಾಗವಾಗಿ ಹೊರಹೋಗಲು ‌ತುರ್ತು ನಿರ್ಗಮನ ವ್ಯವಸ್ಥೆ ಇರಬೇಕು

lವಾಹನಕ್ಕೆ ಅಧಿಕೃತ ಕಂಪನಿಗಳ ಎಲ್‌ಪಿಜಿ ಕಿಟ್‌ಗಳನ್ನು ಮಾತ್ರ ಅಳವಡಿಸಬೇಕು. ಸಿಲಿಂಡರ್‌ ಮೇಲೆ ಆಸನದ ವ್ಯವಸ್ಥೆ ಮಾಡುವಂತಿಲ್ಲ. ಸಂಪೂರ್ಣಪಾರದರ್ಶಕ ಗಾಜುಗಳನ್ನು ಅಳವಡಿಸಿರಬೇಕು. ಬಾಗಿಲುಗಳು ಸರಳವಾಗಿ ತೆರೆದುಕೊಳ್ಳುವಂತೆ ಲಾಕ್‌ಗಳನ್ನು ಅಳವಡಿಸಬೇಕು. ತುರ್ತು ನಿರ್ಗಮನ ಬಾಗಿಲು ಕಡ್ಡಾಯವಾಗಿರಬೇಕು.

lವಾಹನದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಇರಬೇಕು

lವಾಹನದ ಕಿಟಕಿಗಳು ಅಡ್ಡ ಸರಳುಗಳನ್ನು ಹೊಂದಿರಬೇಕು

lಮಕ್ಕಳ ಬ್ಯಾಗುಗಳು ಸುರಕ್ಷಿತವಾಗಿ ಇಡಲು ಸರಿಯಾದ ಜಾಗ ಇರಬೇಕು.

ಒಂದೂವರೆ ತಿಂಗಳಲ್ಲಿ ₹6.18 ಲಕ್ಷ ದಂಡ

ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಸಂಚಾರ ಠಾಣೆ ಪೊಲೀಸರು, ಒಂದೂವರೆ ತಿಂಗಳಲ್ಲಿ 2,534 ಪ್ರಕರಣ ದಾಖಲಿಸಿದ್ದಾರೆ. ಒಟ್ಟು ₹6.18 ಲಕ್ಷ ದಂಡ ವಿಧಿಸಿದ್ದಾರೆ.

ಜೂನ್‌ ಆರಂಭದಿಂದಲೇ ಶಾಲಾ ವಾಹನಗಳು ಹಾಗೂ ಆಟೊಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಪೈಕಿ ಆಟೊಗಳ ವಿರುದ್ಧವೇ 1,074 ಪ್ರಕರಣ ದಾಖಲಿಸಿ, ₹5.80 ಲಕ್ಷ ದಂಡ ಹಾಗೂ ಶಾಲಾ ವಾಹನಗಳ ವಿರುದ್ಧ 113 ಪ್ರಕರಣ ದಾಖಲಿಸಿ, ₹38,600 ದಂಡ ವಸೂಲಿ ಮಾಡಿದ್ದಾರೆ. ಸುರಕ್ಷತಾ ನಿಯಮ ಪಾಲಿಸದ 352 ಆಟೊ ಚಾಲಕರ ಹಾಗೂ 78 ಶಾಲಾ ವಾಹನ ಚಾಲಕರು ಸೇರಿದಂತೆ, ಒಟ್ಟು 430 ಮಂದಿಯ ಚಾಲನಾ ಪರವಾನಗಿ ರದ್ದುಗೊಳಿಸಲು ಪ್ರಾದೇಶಿಕ ಸಾರಿಗೆ (ಆರ್‌ಟಿಒ) ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.

ದನಗಳಂತೆ ತುಂಬುತ್ತಾರೆ

‘ಆಟೊಗಳಲ್ಲಿ ವಿದ್ಯಾರ್ಥಿಗಳನ್ನು ಮನಸೋ ಇಚ್ಛೆ ತುಂಬಿಕೊಂಡು ಹೋಗುತ್ತಾರೆ. ಆಟೊಗಳ ಎರಡು ಕಡೆಗಳಲ್ಲಿ ತನ್ನ ಸೀಟಿನ ಬಳಿ ಬ್ಯಾಗುಗಳನ್ನು ನೇತು ಹಾಕಿಕೊಳ್ಳುವ ಚಾಲಕ, ಮುಂದಿನ ಸೀಟಿನಲ್ಲಿಯೂ ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಾನೆ. ಆಟೊಗಳಲ್ಲಿ ಮಕ್ಕಳನ್ನು ದನಗಳಂತೆ ತುಂಬಿಕೊಂಡು ಹೋಗುವುದನ್ನು ನೋಡಿಯೂ ಪೋಷಕರು ತಮ್ಮ ಮಕ್ಕಳನ್ನು ಆಟೊ ಹತ್ತಿಸುತ್ತಾರೆ’ ಎಂದು ಸಂಚಾರ ವಿಭಾಗದ ಡಿಸಿಪಿ ಶಿವಕುಮಾರ ಗುಣಾರೆ ಪ್ರತಿಕ್ರಿಯಿಸಿದರು.

‘ಬೆಳಿಗ್ಗೆ ಶಾಲೆ ಆರಂಭವಾಗುವ ಮತ್ತು ಸಂಜೆ ಮುಗಿಯುವ ಹೊತ್ತಿಗೆ ಶಾಲೆಗಳ ಎದುರು ಆಟೊಗಳ ದಂಡು ನಿಂತಿರುತ್ತವೆ. ಕೆಲ ಚಾಲಕರನ್ನು ಹೊರತುಪಡಿಸಿದರೆ, ಉಳಿದವರೆಲ್ಲರೂ ಮಿತಿಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುತ್ತಾರೆ. ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಚಾಲಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ನಿತ್ಯ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದರು.

ಶಾಲೆ–ಪೋಷಕರ ಜವಾಬ್ದಾರಿ ಹೆಚ್ಚು

‘ವಿದ್ಯಾರ್ಥಿಗಳ ಬಗ್ಗೆ ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರ ಜವಾಬ್ದಾರಿ ಹೆಚ್ಚು. ಆಟೊಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಿದ್ದರೆ, ಆ ಮಾರ್ಗವನ್ನು ಗುರುತಿಸಿ ಅಲ್ಲಿಗೊಂದು ಶಾಲಾ ವಾಹನ ನಿಯೋಜಿಸಬೇಕು. ಕಡಿಮೆ ಬಾಡಿಗೆಗೆ ಕರೆದೊಯ್ಯುತ್ತಾರೆ ಎಂದು ಪೋಷಕರು ತಮ್ಮ ಮಕ್ಕಳನ್ನು ಆಟೊಗಳಲ್ಲಿ ಅಸುರಕ್ಷಿತವಾಗಿ ಕಳಿಸಬಾರದು’ ಎಂದು ಅವರು ಸಲಹೆ ನೀಡಿದರು.

ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರು ಮಕ್ಕಳನ್ನು ಆಟೊದಲ್ಲಿ ಕಳಿಸುತ್ತಾರೆ, ಶಾಲಾ ವಾಹನದವರು ಹೆಚ್ಚಿನ ಶುಲ್ಕ ಕೇಳುವುದರಿಂದ ಆಟೊಗಳ ಅವಲಂಬನೆ ಅನಿವಾರ್ಯ
ನಿಂಗಪ್ಪ ಮಡಿವಾಳರ, ಪೋಷಕರು

ಶಾಲಾ ವಾಹನಗಳು ಅಪಘಾತಕ್ಕೆ ಈಡಾದರೆ ಶಾಲಾ ಆಡಳಿತ ಮಂಡಳಿ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಪರಿಚಯಸ್ಥರ ಆಟೊಗಳನ್ನೇ ನೆಚ್ಚಿಕೊಂಡಿದ್ದೇವೆ
ಸರೋಜಾ ಪಾಟೀಲ, ಪೋಷಕರು

ಹಲವು ವರ್ಷಗಳಿಂದ ಆಟೊ ಚಾಲಕರು ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ. ಅದನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಅಧಿಕಾರಿಗಳು ಗಮನ ಹರಿಸಬೇಕು
ಶೇಖರಯ್ಯ ಹಿರೇಮಠ, ಹುಬ್ಬಳ್ಳಿ ಆಟೊ ಮಾಲೀಕರು, ಚಾಲಕರ ಸಂಘದ ಅಧ್ಯಕ್ಷ

ಮಕ್ಕಳನ್ನು ಆಟೊದಲ್ಲಿ ಕರೆದೊಯ್ಯುವಾಗ ಪಾಲಿಸಬೇಕಾದ ನಿಯಮಾವಳಿ ಬಗ್ಗೆ ಶಿಕ್ಷಕರ ಜೊತೆ ಸಭೆ ನಡೆಸಲಾಗಿದೆ. ಕಡ್ಡಾಯವಾಗಿ ಕಾನೂನು ಪಾಲಿಸುವಂತೆ ತಿಳಿಸಲಾಗಿದೆ
ಶ್ರೀಶೈಲ ಕರಿಕಟ್ಟಿ, ಹುಬ್ಬಳ್ಳಿ ಶಹರ ಬಿಇಒ

ಕಾನೂನು ಮೀರಿ ಮಕ್ಕಳನ್ನು ಸಾಗಿಸುವ ಆಟೊಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ಕೆಲವರಿಗೆ ದಂಡ ವಿಧಿಸಲಾಗಿದೆ
ಎ.ಬಿ. ಜಮಾದಾರ್‌,ದಕ್ಷಿಣ ಸಂಚಾರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌

ಶಾಲಾ ಮಕ್ಕಳ ಸುರಕ್ಷತೆ ಪೋಷಕರಿಂದ ಸರ್ಕಾರದವರೆಗೂ ಎಲ್ಲರ ಜವಾಬ್ದಾರಿ ಇದೆ. ಶಾಲೆಗಳಿಗೆ ಪತ್ರ ಬರೆದು ಸುರಕ್ಷತೆ ಕ್ರಮದ ಬಗ್ಗೆ ಚರ್ಚಿಸಲಾಗುವುದು
ಅಶೋಕ ಯರಗಟ್ಟಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ, ಧಾರವಾಡ

ಸಂಚಾರ ನಿಯಮಗಳ ಬಗ್ಗೆ ಜನರ ನಿರ್ಲಕ್ಷ್ಯ ಹೆಚ್ಚುತ್ತಿದೆ. ದಂಡ ವಸೂಲಿ ನಮ್ಮ ಆದ್ಯತೆ ಅಲ್ಲದಿದ್ದರೂ, ನಿಯಮ ಪಾಲಿಸುವಂತೆ ಮಾಡಲು ಅನಿವಾರ್ಯವಾಗಿದೆ ಶಿವಕುಮಾರ ಗುಣಾರೆ,
ಡಿಸಿಪಿ, ಸಂಚಾರ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT