ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ ಕಾರ್ಡ್‌ಗಾಗಿ ತಪ್ಪದ ಪರದಾಟ

ಹಳೇ ಹುಬ್ಬಳ್ಳಿಯಲ್ಲಿ ಮಳೆಯಲ್ಲೂ ಸರತಿಯಲ್ಲಿ ನಿಲ್ಲುವ ಅನಿವಾರ್ಯತೆ
Last Updated 5 ಜುಲೈ 2019, 16:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಧಾರ್‌ ನೋಂದಣಿ ಹಾಗೂ ತಿದ್ದುಪಡಿ ಮಾಡಿಸಿಕೊಳ್ಳುವ ಸಲುವಾಗಿ ಹಳೇ ಹುಬ್ಬಳ್ಳಿಯಲ್ಲಿ ಜನ ನಿತ್ಯ ಪರದಾಡುತ್ತಿದ್ದಾರೆ. ಬೆಳಗಿನ ಜಾವವೇ ಎದ್ದು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಕೋಟಾರಗೇರಿ ಓಣಿಯಲ್ಲಿ (ದಿವಟಗಿ ಓಣಿ) ಕರ್ನಾಟಕ ಒನ್‌ ಕೇಂದ್ರವಿದ್ದು, ಇಲ್ಲಿ ಆಧಾರ್‌ ತಿದ್ದು‍ಪಡಿ ಹಾಗೂ ನೋಂದಣಿ ಮಾಡುತ್ತಾರೆ. ಹಳೇ ಹುಬ್ಬಳ್ಳಿಯಲ್ಲಿ ಇರುವ ಏಕೈಕ ಕೇಂದ್ರ ಇದಾದ ಕಾರಣ ಜನ ಪರದಾಡುವಂತಾಗಿದೆ. ಶ್ರೀರಾಮನಗರ ಮತ್ತು ಆನಂದನಗರದಲ್ಲಿ ಕರ್ನಾಟಕ ಒನ್‌ ಕೇಂದ್ರಗಳಿದ್ದರೂ ಅಲ್ಲಿ ಆಧಾರ್‌ ತಿದ್ದುಪಡಿ ಮಾಡುವುದಿಲ್ಲ. ಆದ್ದರಿಂದ ಪ್ರತಿ ಎರಡು ವಾರ್ಡ್‌ಗಳ ನಡುವೆ ಒಂದು ಕೇಂದ್ರ ಆರಂಭಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಆಧಾರ್‌ ಕೇಂದ್ರದಲ್ಲಿ ಪ್ರತಿ ದಿನ 40 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಸರತಿ ಸಾಲಿನಲ್ಲಿ ನಿಂತು ಒಂದು ದಿನ ಮೊದಲೇ ಅರ್ಜಿಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಮಕ್ಕಳು ಮತ್ತು ವಯಸ್ಸಾದವರು ಕೂಡ ಬೆಳಗಿನ ಜಾವದಿಂದಲೇ ಸರತಿಯಲ್ಲಿ ನಿಂತುಕೊಳ್ಳಬೇಕಾದ ಅನಿವಾರ್ಯತೆಯಿದೆ.

ಜಿಲ್ಲೆಯಲ್ಲಿ ಅಂಚೆ ಇಲಾಖೆಯಲ್ಲಿ 29, ಬ್ಯಾಂಕ್‌ನಲ್ಲಿ 30, ಕರ್ನಾಟಕ ಒನ್‌ ಕೇಂದ್ರದಲ್ಲಿ 10 ಮತ್ತು ನಾಲ್ಕು ಕಡೆ ಸೆಂಟರ್‌ ಫಾರ್‌ ಇ–ಗವರ್ನೆನ್ಸ್‌ ಆಧಾರ್‌ ತಿದ್ದುಪಡಿ ಮತ್ತು ನೋಂದಣಿ ಮಾಡುತ್ತಿವೆ. ಪಡಿತರ ಚೀಟಿ ಮತ್ತು ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಆಧಾರ್‌ ಕಾರ್ಡ್ ಕಡ್ಡಾಯವಾಗಿರುವ ಕಾರಣ ಈಗ ಬೇಡಿಕೆ ಹೆಚ್ಚಿದೆ.

‘ದಿವಟಿಗೆ ಓಣಿಯಲ್ಲಿರುವ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಲ್ಲಲು ಜಾಗವಿಲ್ಲ. ಸುತ್ತಲಿನ ವಾತಾವರಣದಿಂದ ಕೆಟ್ಟ ವಾಸನೆ ಬರುತ್ತದೆ. ಮನೆ ಕೆಲಸ ಬಿಟ್ಟು ಆಧಾರ್‌ಗಾಗಿಯೇ ಸಮಯ ಕಳೆಯುವುದು ನಿತ್ಯದ ಕೆಲಸವಾಗಿಬಿಟ್ಟಿದೆ’ ಎಂದು ಸ್ಥಳೀಯ ನಿವಾಸಿ ಬಿ.ಬಿ. ಹಸಿನಾ ಜಮಖಂಡಿ ಬೇಸರ ವ್ಯಕ್ತಪಡಿಸಿದರು.

ಮಲ್ಲಮ್ಮ ಎಂಬುವರು ಮಾತನಾಡಿ ‘ಆಧಾರ್‌ ಕಾರ್ಡ್‌ಗಾಗಿ ರಾತ್ರಿಯಿಂದ ಬೆಳಗಿನ ಜಾವದ ತನಕ ಕಾಯುವುದೇ ಕೆಲಸವಾಗಿದೆ. ಆದ್ದರಿಂದ ಹಳೇ ಹುಬ್ಬಳ್ಳಿಯಲ್ಲಿ ಇನ್ನಷ್ಟು ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಮನವಿ ಮಾಡಿದರು.

‘ಹಳ್ಳಿಗಳಿಂದ ಹೆಚ್ಚಿದ ಒತ್ತಡ’

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಗಲಾಟೆ ಕಡಿಮೆಯಿದೆ, ಕೇಂದ್ರಗಳೂ ಹೆಚ್ಚಿವೆ. ಜಿಲ್ಲೆಯ ವಿವಿಧ ಗ್ರಾಮಗಳ ಜನರು ನಗರಕ್ಕೆ ಬರುವುದರಿಂದ ಆಧಾರ್‌ ಕೇಂದ್ರಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಪಂಚಾಯ್ತಿಗಳಲ್ಲಿಯೂ ಕೇಂದ್ರಗಳನ್ನು ಆರಂಭಿಸುವುದರ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ಒಂದು ವೇಳೆ ಇದು ಜಾರಿಗೆ ಬಂದರೆ ನಗರದಲ್ಲಿ ಒತ್ತಡ ಕಡಿಮೆಯಾಗುತ್ತದೆ’ ಎಂದು ಆಧಾರ್‌ ನಿರ್ವಹಣಾ ಜಿಲ್ಲಾ ಸಂಯೋಜಕ ರುದ್ರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT