ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸಾಮಾಜಿಕ ತಾಣದಲ್ಲಿ ಚರ್ಚೆ, ವ್ಯಂಗ್ಯ

ಪಾಲಿಕೆ ಮತದಾನಕ್ಕೆ ನಿರುತ್ಸಾಹ, ಮತಪಟ್ಟಿ ಗೊಂದಲವೂ ಕಾರಣ
Last Updated 5 ಸೆಪ್ಟೆಂಬರ್ 2021, 6:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಮಾಡಲು ಅವಳಿ ನಗರದ ಬಹಳಷ್ಟು ಮತದಾರರು ನಿರುತ್ಸಾಹ ತೋರಿದ್ದು, ಸಾಮಾಜಿಕ ತಾಣದಲ್ಲಿ ಚರ್ಚೆ ಹುಟ್ಟು ಹಾಕಿದೆ.

ಕೆಲವರು ಮತ ಹಾಕದ ಮತದಾರರಿಗೆ ಚಾಟಿ ಬೀಸಿದರೆ, ಇನ್ನೂ ಕೆಲವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 82 ವಾರ್ಡ್‌ಗಳಿಗೆ ಗುರುವಾರ ನಡೆದ ಮತದಾನದಲ್ಲಿ ಶೇ 53.81ರಷ್ಟು ಜನ ಮಾತ್ರ ಹಕ್ಕು ಚಲಾವಣೆ ಮಾಡಿದ್ದಾರೆ.

44ನೇ ವಾರ್ಡ್‌ನಲ್ಲಿ ಶೇ 38.65ರಷ್ಟು ಮಾತ್ರ ಮತದಾನವಾಗಿದ್ದು, ಇದು ಅತಿ ಕಡಿಮೆ ಮತದಾನವಾದ ವಾರ್ಡ್‌ ಎನಿಸಿದೆ. 82ನೇ ವಾರ್ಡ್‌ನಲ್ಲಿ ಶೇ 77.23 ಮತದಾನವಾಗಿದೆ. ಇದು ಗರಿಷ್ಠ ಮತ ಪ್ರಮಾಣವಾಗಿದೆ. ಮತದಾನದ ಬಗ್ಗೆ ಸಾಮಾಜಿಕ ತಾಣದಲ್ಲಿ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿವೆ.

‘ಹುಬ್ಬಳ್ಳಿಸಿಟಿ ಈ ಗ್ರೂಪ್‌’ ಫೇಸ್‌ಬುಕ್‌ ಖಾತೆಯಲ್ಲಿ ಉಪೇಂದ್ರ ಕುಕನೂರ ಎಂಬುವರು ಪಾಲಿಕೆ ಚುನಾವಣೆಗೆ ಮತ ಚಲಾಯಿಸಿದ ವಾರ್ಡ್‌ವಾರು ವಿವರವನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಹಲವು ಪ್ರತಿಕ್ರಿಯೆ ಬಂದಿವೆ.

ಮಹೇಶ ಪುರೋಹಿತ್‌ ಎಂಬುವರು ‘ಹುಬ್ಬಳ್ಳಿ–ಧಾರವಾಡದ ಜನ ತಮ್ಮ ನಾಗರಿಕ ಪ್ರಜ್ಞೆಯನ್ನು ಮತ್ತೆ ಸಾಬೀತು ಮಾಡಿದ್ದಾರೆ’ ಎಂದು ವ್ಯಂಗ್ಯವಾಡಿದ್ದರೆ, ಜಯದೇವ ಹಿರೇಮಠ ‘ಅವಳಿ ನಗರಗಳ ಜನ ಫೇಸ್‌ಬುಕ್‌ ಹಾಗೂ ಇತರ ಸಾಮಾಜಿಕ ತಾಣಗಳಲ್ಲಿ ದಿನಪೂರ್ತಿ ಬ್ಯುಸಿ ಆಗಿದ್ದಾರೆ. ವೈಯಕ್ತಿಕ ದಾಳಿ ಮಾಡುವಲ್ಲಿ ನಿರತರಾಗಿದ್ದಾರೆ. ಮನೆಯಿಂದ ಹೊರಗೆ ಬಾರದ ರಾಜ್ಯ ರಾಜಧಾನಿಯ ಜನರನ್ನು ಅನುಕರಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಲ್ಲಿ ಯಾವುದೇ ಮೌಲ್ಯವಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘27ನೇ ವಾರ್ಡ್‌ ವ್ಯಾಪ್ತಿಯಲ್ಲಿ ಬರುವ ನವನಗರ ಕಡಿಮೆ ಮತದಾನದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮತದಾರರು ಮತಪಟ್ಟಿಯಲ್ಲಿ ತಮ್ಮ ಹೆಸರು ಹುಡುಕಲು ಪರದಾಡಿದ್ದಾರೆ’ ಎಂದು ಅಮೃತ ಜೋಶಿ ಎಂಬುವರು ಬರೆದಿದ್ದಾರೆ. ಇದಕ್ಕೆ ಉಪೇಂದ್ರ ಕುಕನೂರ ‘ಬಹಳಷ್ಟು ವಾರ್ಡ್‌ಗಳಲ್ಲಿ ಇದೇ ಸಮಸ್ಯೆಯಾಗಿದೆ’ ಎಂದಿದ್ದಾರೆ.

‘ಹಕ್ಕು ಚಲಾಯಿಸಲು ಎಲ್ಲಾ ಸರ್ಕಾರಿ ನೌಕರರಿಗೆ ರಜೆ ನೀಡಲಾಗಿತ್ತು. ಅವರೆಲ್ಲ ಮತ ಹಾಕಿದ್ದಾರೋ, ಇಲ್ಲವೋ ಎನ್ನುವುದನ್ನು ಮೊದಲು ಪರೀಕ್ಷಿಸಬೇಕು. ಮತ ಚಲಾಯಿಸದಿದ್ದರೆ, ದಂಡ ವಿಧಿಸಬೇಕು’ ಎಂದು ನಿಲೇಶ್‌ ಶಹಾ ಎನ್ನುವವರು ಆಗ್ರಹಿಸಿದ್ದಾರೆ.

‘ಕೋವಿಡ್‌ ಭೀತಿ ಕಾರಣ’
‘ಕಲಬುರ್ಗಿ ಮತ್ತು ಬೆಳಗಾವಿ ಮಹಾನಗರ ಪಾಲಿಕೆಗೆ ಹೋಲಿಸಿದರೆ ನಮ್ಮಲ್ಲಿಯೇ ಹೆಚ್ಚು ಮತದಾನವಾಗಿದೆ. ಜನರಲ್ಲಿರುವ ಕೋವಿಡ್‌ ಭೀತಿ ಮತದಾನ ಪ್ರಮಾಣ ಕುಸಿಯಲು ಕಾರಣವಾಗಿರಬಹುದು’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಭಿಪ್ರಾಯಪಟ್ಟರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಕೋವಿಡ್‌ ಕಾರಣದಿಂದ ರಾಜಕೀಯ ಪಕ್ಷಗಳಿಗೆ ದೊಡ್ಡ ಕಾರ್ಯಕ್ರಮಗಳನ್ನು ಮಾಡಲು ಅವಕಾಶವಿರಲಿಲ್ಲ. ಹೀಗಾಗಿ ಬಹಳಷ್ಟು ಜನರಿಗೆ ಚುನಾವಣೆ ಇರುವ ವಿಷಯ ಗೊತ್ತಾಗಲಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವೀಪ್‌ ಚಟುವಟಿಕೆಗಳನ್ನು ನಡೆಸುವುದಿಲ್ಲ. ಅದಕ್ಕೆ ಸಮಯವೂ ಇರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT