ಶನಿವಾರ, ಏಪ್ರಿಲ್ 4, 2020
19 °C
ಐದು ಪದಕ ಗೆದ್ದ ಕಾಶಿ ಪಟ್ನದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸೌಮ್ಯಾ

‘ಅಮ್ಮ’ನಾದ ಬಳಿಕ ಮೊದಲ ಪದಕದ ಪುಳಕ

ಪ್ರಮೋದ್ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಮದುವೆಯಾದ ಬಳಿಕ ಕ್ರೀಡೆಯೇ ಬೇಡವೆಂದು ದೂರ ಉಳಿದಿದ್ದ ಶಿಕ್ಷಕಿ ಕೆ. ಸೌಮ್ಯಾ ಮನೆಯವರ ಒತ್ತಾಸೆಗೆ ಮತ್ತೆ ಕ್ರೀಡೆಗಳಲ್ಲಿ ಪಾಲ್ಗೊಂಡರು. ‘ಅಮ್ಮ’ನಾದ ಬಳಿಕ ಮೊದಲ ಬಾರಿಗೆ ಭಾಗವಹಿಸಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಐದು ಪದಕಗಳ ಒಡತಿಯಾದರು!

ಪೇಢಾನಗರಿಯಲ್ಲಿ ಭಾನುವಾರ ಮುಕ್ತಾಯವಾದ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಈ ಸಾಧನೆ ಮಾಡಿರುವ ಸೌಮ್ಯಾ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕಾಶಿ ಪಟ್ನದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಇದಕ್ಕೂ ಮೊದಲು ನೆಲಮಂಗಲ ತಾಲ್ಲೂಕಿನ ದೊಡ್ಡಬೆಲೆಯಲ್ಲಿ ಶಿಕ್ಷಕಿಯಾಗಿದ್ದ ಅವರು ನಾಲ್ಕು ತಿಂಗಳ ಹಿಂದೆಯಷ್ಟೇ ಕಾಶಿ ಪಟ್ನಕ್ಕೆ ವರ್ಗಾವಣೆಯಾಗಿದ್ದಾರೆ. ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟುವಿನಲ್ಲಿ ನೆಲೆಸಿದ್ದಾರೆ.

2015ರಲ್ಲಿ ಮಂಡ್ಯದಲ್ಲಿ ನಡೆದಿದ್ದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಸೌಮ್ಯಾ ಕೊನೆಯ ಬಾರಿಗೆ ಭಾಗವಹಿಸಿ ಐದು ಚಿನ್ನದ ಪದಕಗಳನ್ನು ಪಡೆದಿದ್ದರು. ಇದಾಗ ಬಳಿಕ ಮದುವೆ ಹಾಗೂ ಮಗುವಿನ ಕಾರಣಕ್ಕಾಗಿ ಕ್ರೀಡೆಯಿಂದ ದೂರ ಉಳಿದಿದ್ದರು. ಈಗ ಇಲ್ಲಿ 35ರಿಂದ 45 ವರ್ಷದ ಒಳಗಿನವರ 400 ಮೀಟರ್‌ ಓಟದಲ್ಲಿ ಚಿನ್ನ, 200 ಮೀಟರ್ ಓಟದಲ್ಲಿ ಬೆಳ್ಳಿ, ಲಾಂಗ್‌ಜಂಪ್‌ನಲ್ಲಿ ಕಂಚು, 4X100 ಮೀ. ರಿಲೆಯಲ್ಲಿ ಚಿನ್ನ ಮತ್ತು 4X400 ಮೀ. ರಿಲೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

ಸರ್ಕಾರಿ ನೌಕರರ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಸೌಮ್ಯಾ 2010ರಲ್ಲಿ ಹರಿಯಾಣದ ಪಂಚಕುಲದಲ್ಲಿ ಮೂರು, 2012ರಲ್ಲಿ ಭೋಪಾಲ್‌ನಲ್ಲಿ ಮೂರು, 2012ರಲ್ಲಿ ಚೆನ್ನೈನಲ್ಲಿ ಎರಡು ಮತ್ತು 2016ರಲ್ಲಿ ಪುಣೆಯಲ್ಲಿ ಒಂದು ಪದಕಗಳನ್ನು ಗೆದ್ದಿದ್ದರು.

ಈ ಸಾಧನೆಯ ಖುಷಿಯನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಸೌಮ್ಯಾ ‘ಶಿಕ್ಷಕಿಯಾದ ಬಳಿಕ 2007ರಲ್ಲಿ ಮೊದಲ ಬಾರಿಗೆ ಧಾರವಾಡದಲ್ಲಿ ನಡೆದಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಐದು ಚಿನ್ನದ ಪದಕಗಳನ್ನು ಜಯಿಸಿದ್ದೆ. ಮತ್ತೆ ಇದೇ ಊರಿನಲ್ಲಿ ಕ್ರೀಡಾಕೂಟ ಇದ್ದ ಕಾರಣ ಪಾಲ್ಗೊಳ್ಳುವ ಆಸೆಯಿತ್ತು. ಆದರೆ, ಎರಡೂವರೆ ವರ್ಷಗಳ ಹಿಂದೆ ಸಿಸೇರಿಯನ್‌ ಹೆರಿಗೆಯಾಗಿದ್ದರಿಂದ ಅಷ್ಟೊಂದು ದೈಹಿಕ ಸಾಮರ್ಥ್ಯ ಇರಲಿಲ್ಲ. ಆದರೆ,  ಅಪ್ಪ ಲಕ್ಷ್ಮಣಗೌಡ, ಅಮ್ಮ ಪಾರ್ವತಿ ಮತ್ತು ಪತಿ ಜಗದೀಶ್ ಧೈರ್ಯ ತುಂಬಿದರು’ ಎಂದರು.

‘ಇಂದಬೆಟ್ಟುವಿನಿಂದ ಶಾಲೆಗೆ ಹೋಗಿಬರಲು ನಿತ್ಯ 90 ಕಿ.ಮೀ. ಪ್ರಯಾಣ ಮಾಡಬೇಕಾದ್ದರಿಂದ ಅಭ್ಯಾಸಕ್ಕೆ ಹೆಚ್ಚು ಸಮಯ  ಸಿಗಲಿಲ್ಲ.ಕೆಲ ದಿನಗಳ ಹಿಂದೆಯಷ್ಟೇ ಉಜಿರೆಯ ಎಸ್‌ಡಿಎಂ ಕಾಲೇಜು ಮೈದಾನದಲ್ಲಿ ಕೋಚ್‌ ಸಂದೇಶ್ ಪೂಂಜಾ ಸರ್‌ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದೆ. ಇದರಿಂದ ಪದಕ ಗೆಲ್ಲುವ ಭರವಸೆ ಮೂಡಿತು. ಕಾಶಿ ಪಟ್ನದ ಶಾಲೆಗೆ ವರ್ಗವಾಗಿ ಹೋದ ಬಳಿಕ ಅಲ್ಲಿನ ಸಹದ್ಯೋಗಿಗಳು ತೋರಿದ ಪ್ರೀತಿ, ವಿಶ್ವಾಸ ನನ್ನ ಸಾಧನೆಗೆ ಪ್ರೇರಣೆಯಾಯಿತು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು