ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌‌ಕಾನೂನು ಸಮರಕ್ಕೆ ಮುಂದಾದ ಹು–ಧಾ ಪಾಲಿಕೆ

ಜಲಮಂಡಳಿ ಹಂಗಾಮಿ ನೌಕರರ ನೇಮಕ ಪ್ರಕ್ರಿಯೆ ಅತಂತ್ರ: ಬಗೆಹರಿಯದ ಸಮಸ್ಯೆ
Last Updated 15 ಜುಲೈ 2022, 8:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲೂ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗುವುದು ಮುಂದುವರಿದಿದೆ. ಈ ನಡುವೆಜಲಮಂಡಳಿಯಲ್ಲಿ ಹಂಗಾಮಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹೊಸ ವ್ಯವಸ್ಥೆಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿ ಕಾನೂನು ಸಮರ ನಡೆಸಲು ಪಾಲಿಕೆ ಮುಂದಾಗಿದೆ.

ಅವಳಿನಗರದಲ್ಲಿ ನೀರು ಪೂರೈಕೆ ವ್ಯವಸ್ಥೆಯನ್ನು ಎಲ್‌ ಅಂಡ್‌ ಟಿ ಸಂಸ್ಥೆಗೆ ಹಸ್ತಾಂತರ ಮಾಡಲಾಗಿದ್ದು, ಇಲ್ಲಿ ವರದಿ ಮಾಡಿಕೊಳ್ಳುವಂತೆ ಜಲಮಂಡಳಿಯ ಹಂಗಾಮಿ ನೌಕರರಿಗೆ ನಿರ್ದೇಶನ ನೀಡಲಾಗಿದೆ. ಆದರೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಹಾಗೂ ಪಾಲಿಕೆಯ ಮೂಲಕವೇ ಹಸ್ತಾಂತರ ಪ್ರಕ್ರಿಯೆ ನಡೆಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನೌಕರರು ಪಟ್ಟು ಹಿಡಿದಿದ್ದಾರೆ. ಪಾಲಿಕೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಮುಖ್ಯ ಕಾರ್ಯದರ್ಶಿ ಹಂತದಲ್ಲಿ ಈ ಕುರಿತು ಹಲವು ಸಭೆ ನಡೆದರೂ ಸಮಸ್ಯೆ ತಾರ್ಕಿಕ ಅಂತ್ಯ ಕಂಡಿಲ್ಲ.

ಈ ಸಮಸ್ಯೆ ಬಗೆಹರಿಯದಿರುವುದು ನಗರದಲ್ಲಿ 24x7 ನೀರು ಪೂರೈಕೆ ಯೋಜನೆಗೆ ಹಿನ್ನಡೆ ಆಗುತ್ತಿದೆ. ಎಲ್‌ ಅಂಡ್‌ ಟಿಯಲ್ಲಿ ಜಲಮಂಡಳಿಯ ಹಂಗಾಮಿ ನೌಕರರಿಗೆ ಬದಲಾಗಿ ಬೇರೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಹೈಕೋರ್ಟ್‌ನಲ್ಲಿ ಅಫಿಡವಿಟ್‌ ಸಲ್ಲಿಸಲು ಪಾಲಿಕೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

‘ಕೋರ್ಟ್ ನಿರ್ದೇಶನದಂತೆ ಎಲ್‌ ಅಂಡ್‌ ಟಿಯಲ್ಲಿ ವರದಿ ಮಾಡಿಕೊಳ್ಳಿ. ಮುಂದೆ ನೀವು ಕಾನೂನು ಹೋರಾಟ ಮಾಡಿ ಎಂದು ನೌಕರರಿಗೆ ಹೇಳಿದರೂ ಅವರು ಸ್ಪಂದಿಸುತ್ತಿಲ್ಲ’ ಎಂದು ಹು‌ಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಹೇಳಿದರು.

‘ಹಂಗಾಮಿ ನೌಕರರ ಸಮಸ್ಯೆಯನ್ನು ಕಾನೂನಿನ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕಳೆದ ಬಾರಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಯೋಜನೆಗಳ ಅನುಷ್ಠಾನಕ್ಕೂ ತೊಡಕಾಗುತ್ತಿರುವುದರಿಂದ ಕಾನೂನು ಪ್ರಕ್ರಿಯೆ ಅನಿವಾರ್ಯವಾಗಿದೆ’ ಎಂದು ತಿಳಿಸಿದರು.

ಎರಡು ತಿಂಗಳಿಂದ ವೇತನ ಆಗಿಲ್ಲ: ‘ಜಲಮಂಡಳಿಯಲ್ಲಿ ಹಂಗಾಮಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ ಎರಡು ತಿಂಗಳಿಂದ ವೇತನ ನೀಡದೆ ತೊಂದರೆ ನೀಡಲಾಗುತ್ತಿದೆ’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘದ ಅಧ್ಯಕ್ಷ ವಿ.ಎನ್. ಹಳಕಟ್ಟಿ ಆರೋಪಿಸಿದರು.

‘ಎಲ್‌ ಅಂಡ್‌ ಟಿ ಸಂಸ್ಥೆಯು ನಿರ್ದಿಷ್ಟ ನಮೂನೆ ಅರ್ಜಿ ಭರ್ತಿ ಮಾಡಲು ಸೂಚನೆ ನೀಡಿದೆ. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ. ಇದರ ಬದಲಾಗಿ ನಾವೇ ಒಂದು ಅರ್ಜಿ (ನೌಕರರ ವಿವರದ ಮಾಹಿತಿ) ಭರ್ತಿ ಮಾಡಿಕೊಡುತ್ತೇವೆ. ನಾವು ಕೆಲಸ ಮಾಡುತ್ತಿದ್ದೇವೆ. ಕರ್ತವ್ಯ ಲೋಪ ಎಸಗಿಲ್ಲ. ವಿನಾಕಾರಣ ವೇತನ ಬಾಕಿ ಉಳಿಸಿಕೊಂಡಿರುವುದು ಅಕ್ಷಮ್ಯ. ಕೂಡಲೇ ವೇತನ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ಬಾಕ್ಸ್‌

ನಿರ್ವಹಣಾ ವಿಭಾಗ ಬಾಗಲಕೋಟೆಗೆ ಸ್ಥಳಾಂತರ

ಈ ನಡುವೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಹುಬ್ಬಳ್ಳಿ ಜಲಮಂಡಳಿ ನಿರ್ವಹಣಾ ವಿಭಾಗವನ್ನು ಬಾಗಲಕೋಟೆಗೆ ಸ್ಥಳಾಂತರಿಸಿ ಆದೇಶ ಹೊರಡಿಸಿದೆ.

‘ನಗರದಲ್ಲಿ ಸುಗಮ ನೀರು ಪೂರೈಕೆ ವ್ಯವಸ್ಥೆ ಉದ್ದೇಶದಿಂದ ಎಲ್‌ ಅಂಡ್‌ ಟಿ ಸಂಸ್ಥೆಗೆ ಜಲಮಂಡಳಿಯ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಹುಬ್ಬಳ್ಳಿ ನಿರ್ವಹಣಾ ವಿಭಾಗ ಬಾಗಲಕೋಟೆಗೆ ವರ್ಗಾವಣೆಯಾದರೆ, ತಾಂತ್ರಿಕ ಸಹಕಾರಕ್ಕೆಜಲಮಂಡಳಿಯ ಧಾರವಾಡದ ಎಂಜಿನಿಯರ್‌ ಮತ್ತು ಅಧಿಕಾರಿಗಳನ್ನು ಬಳಸಿಕೊಳ್ಳಲಾಗುವುದು’ ಎಂದು ಡಾ. ಗೋಪಾಲಕೃಷ್ಣ ಹೇಳಿದರು.

‘ಒಪ್ಪಂದದ ಅನ್ವಯ ಜಲಮಂಡಳಿಯಿಂದ ತಾಂತ್ರಿಕ ಸಹಕಾರ ಅತ್ಯಗತ್ಯವಾಗಿದೆ. ಉಳಿದ ಪ್ರಕ್ರಿಯೆಗಳು ಎಲ್‌ ಅಂಡ್‌ ಟಿ ನಿರ್ವಹಿಸಲಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT