ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಅಂಚೆ ಸೇವೆಗೆ ಈಗ ಇನ್ನಷ್ಟು ವೇಗ

ವಿಮಾನದ ಮೂಲಕ ರಿಜಿಸ್ಟಾರ್‌, ಸ್ಪೀಡ್‌ ಪೋಸ್ಟ್‌ ರವಾನೆ ಆರಂಭ
Last Updated 12 ಡಿಸೆಂಬರ್ 2021, 21:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಂಚೆ ಕಚೇರಿಯ ರೈಲ್ವೆ ಮೇಲ್‌ ಸರ್ವಿಸ್‌ (ಆರ್‌ಎಂಎಸ್‌) ಮೂಲಕ ಕಳುಹಿಸುವ ನೋಂದಾಯಿತ (ರಿಜಿಸ್ಟರ್‌) ಹಾಗೂ ಸ್ಪೀಡ್‌ ಪೋಸ್ಟ್‌ಗಳು ಈಗ ಮೊದಲಿಗಿಂತಲೂ ಕಡಿಮೆ ಅವಧಿಯಲ್ಲಿ ನಿಗದಿತ ವಿಳಾಸಕ್ಕೆ ತಲುಪಲಿವೆ.

ಉತ್ತರ ಕರ್ನಾಟಕ ವ್ಯಾಪ್ತಿಯ ಬೆಳಗಾವಿ ಮತ್ತು ಕಲಬುರಗಿ ವಿಭಾಗದ ಜಿಲ್ಲೆಗಳನ್ನು ಒಳಗೊಂಡಿರುವ ಹುಬ್ಬಳ್ಳಿಯ ಕಚೇರಿ ಈಗ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಆರಂಭವಾಗಿರುವ ಕಾರ್ಗೊ ಮೂಲಕ ರಾಜ್ಯ ಹಾಗೂ ಹೊರರಾಜ್ಯಗಳಿಗೆ ನೋಂದಾಯಿತ ಹಾಗೂ ಸ್ಪೀಡ್‌ ಪೋಸ್ಟ್‌ಗಳನ್ನು ಕಳುಹಿಸುತ್ತಿದೆ.

ಇದರಿಂದ ಎರಡು ದಿನಗಳ ಒಳಗೆ ಜನರಿಗೆ ಅಂಚೆ ಸೇವೆ ತಲುಪುತ್ತದೆ. ಮೊದಲು ರೈಲು ಹಾಗೂ ಖಾಸಗಿ ವಾಹನಗಳ ಮೂಲಕ ಕಳುಹಿಸುತ್ತಿದ್ದರಿಂದ ನೋಂದಾಯಿತ ಪತ್ರಗಳು ತಲುಪಲು ಮೂರ್ನಾಲ್ಕು ದಿನ ಬೇಕಾಗುತ್ತಿದ್ದವು.

ಉತ್ತರ ಕರ್ನಾಟಕದ ಜಿಲ್ಲೆಗಳ ಮತ್ತು ಸೋಲಾಪುರದಅಂಚೆ ಕಚೇರಿಗಳಲ್ಲಿ ನೋಂದಾಯಿತವಾದ ಪತ್ರಗಳು ರೈಲ್ವೆ ಅಂಚೆ ವಿಂಗಡನಾ ಸೇವೆ ವಿಭಾಗೀಯ ಕಚೇರಿ ಹೊಂದಿರುವ ಹುಬ್ಬಳ್ಳಿಗೆ ಬರುತ್ತವೆ. ಬಳಿಕ ಅವುಗಳನ್ನು ವಿಂಗಡಿಸಿ ವಿಮಾನದ ಮೂಲಕ ಆಯಾ ಊರುಗಳಿಗೆ ತಲುಪಿಸಲಾಗುತ್ತದೆ. ಈ ಕೆಲಸ ವಾರದಿಂದ ಆರಂಭವಾಗಿದೆ. ಬೆಂಗಳೂರು, ಮುಂಬೈ, ಕೋಲ್ಕತ್ತ, ಗಾಜಿಯಬಾದ್‌, ನವದೆಹಲಿ, ಅಹಮದಾಬಾದ್‌, ಚೆನ್ನೈ ಸೇರಿದಂತೆ ಒಟ್ಟು 87 ಪ್ರಮುಖ ನಗರಗಳಿಗೆ ವಿಮಾನದ ಮೂಲಕ ನೋಂದಾಯಿತ ಪೋಸ್ಟ್‌ಗಳು ರವಾನೆಯಾಗುತ್ತಿವೆ.

ಹುಬ್ಬಳ್ಳಿಯಿಂದ ನೇರ ವಿಮಾನ ಸೌಲಭ್ಯ ಹೊಂದಿರುವ ನಗರಗಳಿಗೆ ಇಲ್ಲಿಂದಲೇ ನೇರವಾಗಿ ನೋಂದಾಯಿತ ಪತ್ರಗಳು ಹೋಗುತ್ತಿವೆ. ನೇರ ವಿಮಾನ ಸಂಪರ್ಕ ಹೊಂದದ ನಗರಗಳಿಗೆ ತಲುಪಬೇಕಾದ ಪತ್ರಗಳನ್ನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿರುವ ಪಿಎಂಒ ಕಚೇರಿಯ ಮೂಲಕ ನಿಗದಿತ ವಿಳಾಸಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹುಬ್ಬಳ್ಳಿಯ ರೈಲ್ವೆ ಅಂಚೆ ವಿಂಗಡನಾ ಸೇವಾ ವಿಭಾಗದ ಅಂಚೆ ಅಧೀಕ್ಷಕ ರಂಗನಾಥ ವೈ. ಮಧುಸಾಗರ ‘ಮೊದಲು ಬೆಂಗಳೂರು, ಚೆನ್ನೈ, ಮುಂಬೈನಿಂದ ಇಲ್ಲಿಗೆ ವಿಮಾನದ ಮೂಲಕ ನೋಂದಾಯಿತ ಪತ್ರಗಳು ಬರುತ್ತಿದ್ದವು. ಆಗ ಪತ್ರಗಳ ಸ್ವೀಕೃತಿ ಮಾತ್ರ ಇತ್ತು. ಪೋಸ್ಟ್‌ ಮಾಸ್ಟರ್‌ ಜನರಲ್‌ ವಿನೋದ ಕುಮಾರ್‌ ಅವರ ಉತ್ತೇಜನದಿಂದ ವೇಗವಾಗಿ ನೋಂದಾಯಿತ ಪತ್ರಗಳನ್ನು ವಿಮಾನದ ಮೂಲಕ ತಲುಪಿಸುವ ವ್ಯವಸ್ಥೆ ಆರಂಭಿಸಲಾಗಿದೆ’ ಎಂದರು.

‘ನೋಂದಾಯಿತ ಪತ್ರಗಳು ಅಥವಾ ಸಾಮಗ್ರಿಗಳಿಗೆ ಕಾರ್ಗೊ ಸೌಲಭ್ಯ ಆರಂಭಿಸಿರುವ ಇಂಡಿಗೊ ವಿಮಾನಯಾನ ಸಂಸ್ಥೆ ಪ್ರತಿ ಕೆ.ಜಿ.ಗೆ ₹ 14.77 ಪೈಸೆ ಪಡೆಯುತ್ತಿದೆ. ನಿತ್ಯ ಗರಿಷ್ಠ 180 ಕೆ.ಜಿ. ತೂಕದ ವಸ್ತುಗಳನ್ನು ಸದ್ಯಕ್ಕೆ ರವಾನೆ ಮಾಡಲಾಗುತ್ತಿದೆ. ಸಾಮಗ್ರಿಗಳು ಸಂಪೂರ್ಣವಾಗಿ ಪರಿಶೀಲನೆಗೆ ಒಳಪಡುವುದರಿಂದ ಸುರಕ್ಷತೆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಎರಡು ದಿನಗಳ ಒಳಗೆ ನಿಗದಿತ ವಿಳಾಸಕ್ಕೆ ತಲುಪಿಸಲು ಸುಲಭವಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT