ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದ ಗೂಡಾದ ಸ್ಮಾರ್ಟ್ ಸಿಟಿ ಸಭೆ

ಯೋಜನೆಗಳ ಮಾಹಿತಿ ನೀಡದಿದ್ದಕ್ಕೆ ಪಾಲಿಕೆ ಸದಸ್ಯರ ಗರಂ: ಕಾಮಗಾರಿ ಬಗ್ಗೆಯೂ ಆಕ್ರೋಶ
Last Updated 20 ಅಕ್ಟೋಬರ್ 2022, 6:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಸ್ಮಾರ್ಟ್ ಸಿಟಿ ಯೋಜನೆಗಳ ಕುರಿತು ಮಹಾನಗರ ಪಾಲಿಕೆ ಸದಸ್ಯರಿಗಾಗಿ ಡೆನಿಸನ್ಸ್ ಹೋಟೆಲ್‌ನಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಸಭೆಯು ಗೊಂದಲದ ಗೂಡಾಯಿತು. ಯೋಜನೆಗಳ ಮಾಹಿತಿ ನೀಡದೆ ಸಭೆ ನಡೆಸಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಕಾಮಗಾರಿಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಅವರು, ಯೋಜನೆಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸುವುದಕ್ಕೆ ಸದಸ್ಯರು ಅವಕಾಶವನ್ನೇ ನೀಡಲಿಲ್ಲ. ಮಳೆ ಸುರಿದಾಗ, ‘ಸ್ಮಾರ್ಟ್’ ಕಾಮಗಾರಿಗಳಿಂದಾದ ಅವಾಂತರದ ಬಗ್ಗೆ ಗಮನ ಸೆಳೆದರು.

ವೇದಿಕೆ ಮೇಲಿದ್ದ ಸ್ಥಾಯಿ ಸಮಿತಿ ಅಧ್ಯಕ್ಷರಿಂದಿಡಿದು ಎಲ್ಲಾ ಸದಸ್ಯರು, ದೂರುಗಳ ಸರಮಾಲೆ ಬಿಚ್ಚಿಟ್ಟರು. ಸಮಾಧಾನಪಡಿಸಲು ಮುಂದಾದ ಮೇಯರ್, ಪಾಲಿಕೆ ಆಯುಕ್ತ, ಸ್ಮಾರ್ಟ್ ಸಿಟಿ ಎಂ.ಡಿ.ಗೆ ಕ್ಯಾರೇ ಕೊಡದೆ, ವೇದಿಕೆಯತ್ತ ಬಂದು ಆಕ್ರೋಶ ಹೊರಹಾಕಿದರು.

ಅನಾಹುತ ಗಮನಿಸಿದ್ದೀರಾ: ‘ಪಾಲಿಕೆ ಜಾಗದಲ್ಲಿ ಸ್ಮಾರ್ಟ್ ಅಭಿವೃದ್ಧಿ ಕಾಮಗಾರಿ ಮಾಡಿರುವ ನೀವು, ಅಲ್ಲಿನ ಅನಾಹುತಗಳನ್ನು ಗಮನಿಸಿದ್ದೀರಾ? ಅಭಿವೃದ್ಧಿ ಹೆಸರಲ್ಲಿ ನೀವು ಮಾಡಿದ್ದನ್ನು ಮುಂದೆ ನಾವು ಅನುಭವಿಸಬೇಕು’ ಎಂದು ಸದಸ್ಯ ಸಂತೋಷ ಚವ್ಹಾಣ ಹೇಳಿದರು. ‘ಮಳೆ ಬಂದರೆ ನಿಮ್ಮ ರಸ್ತೆಗಳು ಹಳ್ಳಗಳಾಗುತ್ತವೆ. ಸ್ಮಾರ್ಟ್ ಆಗಿರುವುದು ನೀವು ಮಾತ್ರ, ನಗರವಲ್ಲ’ ಎಂದು ಶಿವು ಮೆಣಸಿನಕಾಯಿ ಆರೋಪಿಸಿದರು.

‘ಹುಬ್ಬಳ್ಳಿಯನ್ನು ಸ್ಮಾರ್ಟ್ ಬದಲು ಡರ್ಟಿ ಸಿಟಿ‌ ಮಾಡಿದ್ದೀರಿ. ಮೊದಲ ಹಂತದಲ್ಲೇ ಇಷ್ಟೊಂದು ಅನಾಹುತವಾಗಿದೆ. ಎರಡನೇ ಹಂತದಲ್ಲಿ ಮತ್ತೇನು ಕಾದಿದೆಯೋ’ ಎಂದು ಆರೀಫ್ ಭದ್ರಾಪುರ ಆಕ್ರೋಶ ವ್ಯಕ್ತಪಡಿಸಿದರೆ, ‘ಈ ಅಧಿಕಾರಿಗಳ ದಂಡು ನಾಟಕ ಕಂಪನಿಯಂತಿದೆ. ಇವರ ನಾಟಕಕ್ಕೆ ಅವಾರ್ಡ್ ಕೊಡಬೇಕು’ ಎಂದು ನಿರಂಜನ ಹಿರೇಮಠ ವ್ಯಂಗ್ಯವಾಡಿದರು.

‘ಕಾಮಗಾರಿಗಳನ್ನು ವೀಕ್ಷಿಸಲು ಸದಸ್ಯರಿಗೆ ಬಸ್‌ ವ್ಯವಸ್ಥೆ ಮಾಡಿ. ಅಧಿಕಾರಿಗಳ ಸಮೇತ ಎಲ್ಲರೂ ಸ್ಥಳಗಳಿಗೆ ಹೋಗಿ ಪರಿಶೀಲಿಸೋಣ. ನಂತರ, ಹಸ್ತಾಂತರದ ಬಗ್ಗೆ ಯೋಚಿಸಿ’ ಎಂದು ರಾಜಣ್ಣ ಕೊರವಿ ಸಲಹೆ ನೀಡಿದರು.

ಧಾರವಾಡ ಯಾಕಿಲ್ಲ: ‘ಹೆಸರಿಗಷ್ಟೇ ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಎಂಬ ಹೆಸರಿದೆ. ಆದರೆ, ಜಿಲ್ಲಾ ಕೇಂದ್ರವನ್ನೇ ಯೋಜನೆಯಿಂದ ಹೊರಗಿಟ್ಟಿದ್ದೀರಿ. ಈ ತಾರತಮ್ಯದಿಂದಾಗಿಯೇ ನಮಗೆ ಪ್ರತ್ಯೇಕ ಪಾಲಿಕೆ ಬೇಕು’ ಎಂಬ ಕವಿತಾ ಕಬ್ಬೇರಾ ಮಾತಿಗೆ ಧಾರವಾಡದ ಇತರ ಸದಸ್ಯರು ದನಿಗೂಡಿಸಿ, ಧಿಕ್ಕಾರ ಕೂಗಿದರು.

ಪಾಲಿಕೆ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ, ಸ್ಮಾರ್ಟ್ ಸಿಟಿಯ ಅಜೀಜ್ ದೇಸಾಯಿ, ಉಪ ಮೇಯರ್ ಉಮಾ ಮುಕುಂದ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಧಾಬಾಯಿ ಸಫಾರೆ, ವಿಜಯಾನಂದ‌ ಶೆಟ್ಟಿ, ಸುರೇಶ ಬೇದರೆ ಇದ್ದರು.

ಪ್ರತಿಭಟನೆ: ಪಂಚತಾರಾ ಹೋಟೆಲ್‌ನಲ್ಲಿ ಸಭೆ ಆಯೋಜಿಸಿ, ಜನರರ ಹಣವನ್ನು ದುಂದುವೆಚ್ಚ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು, ಕಾರ್ಯಕರ್ತರು ಹಾಗೂ ಆಟೊ ಚಾಲಕರು ಹೋಟೆಲ್ ಎದುರು ಸಭೆಗೂ ಮುಂಚೆ ಪ್ರತಿಭಟನೆ ನಡೆಸಿದರು.

ಯಾರು ಏನಂದರು?

‘2ನೇ ಹಂತದಲ್ಲಿ ಪರಿಗಣನೆ’

‘ಮೊದಲ ಹಂತದಲ್ಲಿ ಹುಬ್ಬಳ್ಳಿಯ ವಿವಿಧ ವಲಯಗಳನ್ನು ಮಾತ್ರ ಸ್ಮಾರ್ಟ್ ಸಿಟಿ ಯೋಜನೆಯಡಿ ಪರಿಗಣಿಸಲಾಗಿದೆ. ಎರಡನೇ ಹಂತದಲ್ಲಿ ಧಾರವಾಡ ಸೇರಿದಂತೆ, ಹುಬ್ಬಳ್ಳಿಯ ಇತರ ಪ್ರದೇಶಗಳನ್ನು ಸಹ ಪರಿಗಣಿಸಲಾಗುವುದು.

– ಶಕೀಲ್ ಅಹ್ಮದ್, ವ್ಯವಸ್ಥಾಪಕ ನಿರ್ದೇಶಕ, ಹು–ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್

‘ಪರದಾಡಬೇಕಾಗುತ್ತದೆ’

2023ರ ಜೂನ್‌ನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಂತ್ಯಗೊಳ್ಳಲಿದೆ. ಅಷ್ಟರೊಳಗೆ ಎಲ್ಲಾ ಯೋಜನೆಗಳನ್ನು ಪಾಲಿಕೆಗೆ ಹಸ್ತಾಂತರಿಸಿಕೊಂಡು ನಿರ್ವಹಣೆಯನ್ನು ಕಲಿಯದಿದ್ದರೆ, ಮುಂದೆ ಪರದಾಡಬೇಕಾಗುತ್ತದೆ.

– ಡಾ. ಗೋಪಾಲಕೃಷ್ಣ ಬಿ., ಆಯುಕ್ತ, ಮಹಾನಗರ ಪಾಲಿಕೆ

‘ಚರ್ಚೆಗೆ ವಿಶೇಷ ಸಭೆ’

ಯೋಜನೆಗಳ ಚರ್ಚೆಗೆ ವಿಶೇಷ ಸಾಮಾನ್ಯ ಸಭೆ ನಡೆಸಲಾಗುವುದು. ಯೋಜನೆಗಳ ಮಾಹಿತಿ ಪುಸ್ತಕವನ್ನು ಸದಸ್ಯರಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗುವುದು. ಏಳು ದಿನದೊಳಗೆ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸೋಣ.

– ಈರೇಶ ಅಂಚಟಗೇರಿ, ಮೇಯರ್, ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT