ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಕಿಮ್ಸ್‌ನಲ್ಲಿ ಥೆರಾಪ್ಯುಟಿಕ್ ಪ್ಲಾಸ್ಮಾ ಫೆರಾಸಿಸ್‌ ಚಿಕಿತ್ಸೆ

ಉತ್ತರ ಕರ್ನಾಟಕ ಭಾಗದ ಜನರಿಗೆ ಆಶಾಕಿರಣವಾದ ಆಧುನಿಕ ಚಿಕಿತ್ಸಾ ವಿಧಾನ
Last Updated 17 ಆಗಸ್ಟ್ 2022, 5:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆಯಲ್ಲಿ ಇದೀಗ ಹೊಸ ಮಾದರಿಯ ತಂತ್ರಜ್ಞಾನ ಬಳಸಿಕೊಂಡು ಬೆಂಗಳೂರಿನ ನಿಮ್ಹಾನ್ಸ್‌ ಸೇರಿದಂತೆ ಕೆಲವು ನಿರ್ದಿಷ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಸಿಗುತ್ತಿದ್ದ ಥೆರಾಪ್ಯುಟಿಕ್ ಪ್ಲಾಸ್ಮಾ ಫೆರಾಸಿಸ್‌ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ.

ಗಿಲಿಯನ್‌ ಬರೆ ಸಿಂಡ್ರೋಮ್‌ (ಜೆಬಿಎಸ್‌)(ನರಗಳಲ್ಲಿ ನಿಶಕ್ತಿ ಸಮಸ್ಯೆ ಕಾಣಿಸಿಕೊಳ್ಳುವುದು) ಸಮಸ್ಯೆಗೆ ಆಫರೆಸಿಸ್‌ ಎಂಬ ಯಂತ್ರದ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಅನುಸರಿಸುತ್ತಿದ್ದ ವಿಧಾನವನ್ನು ಇದೀಗ ಹುಬ್ಬಳ್ಳಿಯ ಕಿಮ್ಸ್‌ನಲ್ಲೂ ಬಳಸಲಾಗುತ್ತಿದೆ.

ಐವರಿಗೆ ಚಿಕಿತ್ಸೆ: ಕಿಮ್ಸ್‌ನಲ್ಲಿ ಇಲ್ಲಿಯವರೆಗೆ ಗಿಲಿಯನ್ ಬರೆ ಸಿಂಡ್ರೋಮ್‌ಸೇರಿದಂತೆ ವಿವಿಧ ರೋಗ ಲಕ್ಷಣಗಳಿಂದ ಬಳಲುತ್ತಿದ್ದ ಐವರಿಗೆ ಚಿಕಿತ್ಸೆ ನೀಡಲಾಗಿದ್ದು, ಇವರಲ್ಲಿ ನಾಲ್ವರು ಗುಣಮುಖರಾಗಿದ್ದಾರೆ. ಒಬ್ಬರು ಈ ಚಿಕಿತ್ಸೆಗೆ ಸ್ಪಂದಿಸಿಲ್ಲ. ಮಿಶ್ರಿಕೋಟೆಯ 28 ವರ್ಷದ ಮಹಿಳೆಯೊಬ್ಬರಿಗೆ ಇಲ್ಲಿ ಮೊದಲ ಬಾರಿ ಈ ವಿಧಾನ ಬಳಸಿ ಚಿಕಿತ್ಸೆ ನೀಡಲಾಗಿತ್ತು. ಇದು ಉತ್ತರ ಕರ್ನಾಟಕ ಭಾಗದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಥೆರಾಪ್ಯುಟಿಕ್ ಪ್ಲಾಸ್ಮಾಫೆರಾಸಿಸ್‌ ಚಿಕಿತ್ಸೆ ನೀಡಿದ ಪ್ರಕರಣವಾಗಿದೆ.

ಕಿಮ್ಸ್‌ನ ಪ್ಯಾಥಾಲಜಿ, ನ್ಯೂರೋಲಜಿವಿಭಾಗದ ತಜ್ಞರು ಸೇರಿ ಈ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಈ ಚಿಕಿತ್ಸೆ ನೀಡುವುದಕ್ಕಾಗಿ ವೈದ್ಯರು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ತರಬೇತಿ ಪಡೆದು ಬಂದಿದ್ದಾರೆ.

ರೋಗದ ಲಕ್ಷಣಗಳು: ನರಗಳಲ್ಲಿ ನಿಶಕ್ತಿ ಕಾಣಿಸಿಕೊಳ್ಳುವುದು, ನಡೆದಾಡಲು ಸಾಧ್ಯವಾಗದೆ ಇರುವುದು. ಪಾರ್ಶ್ವವಾಯು ಸಮಸ್ಯೆ, ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು ಜೆಬಿಎಸ್‌ನ ಪ್ರಮುಖ ಲಕ್ಷಣಗಳಾಗಿವೆ. ಇದು ಸಾಮಾನ್ಯವಾಗಿ ಎರಡು ವಾರಗಳ ವರೆಗೆ ಇರುತ್ತದೆ. ನಿರ್ಲಕ್ಷಿಸಿದರೆ ಜೀವಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು.

ಮನುಷ್ಯರ ದೇಹದಲ್ಲಿರುವ ರೋಗ ನಿರೋಧಕ ಕಣಗಳು ಅನಾರೋಗ್ಯಕ್ಕೆ ಒಳಗಾಗದಂತೆ ಹಾಗೂ ಅನಾರೋಗ್ಯ ಸಮಸ್ಯೆ ಎದುರಾದರೆ ತಡೆಯಲು ಶ್ರಮಿಸುತ್ತವೆ. ಆದರೆ, ಜೆಬಿಎಸ್‌, ಮೈಸ್ತೇನಿಯಾ ಗ್ರ್ಯಾವಿಸ್ಎಂಬ ಕೆಲವು ನಿರ್ದಿಷ್ಟ ಆರೋಗ್ಯ ಸಮಸ್ಯೆ ಸೃಷ್ಟಿಯಾದರೆ, ದೇಹದಲ್ಲಿನ ರೋಗ ನಿರೋಧಕ ಶಕ್ತಿಯ ಕಣಗಳು ರೋಗನಿರೋಧಕ ಕಣಗಳ ವಿರುದ್ಧವೇ ಸೆಣಸಿ ಸಾಯುತ್ತವೆ. ಇದರಿಂದ ಕೈಕಾಲು ಸೇರಿದಂತೆ ದೇಹದ ನರಗಳ ಮೇಲೆ ಪರಿಣಾಮ ಬೀರಿ ಸಮಸ್ಯೆ ಆಗುತ್ತದೆ. ಈ ರೀತಿ ಸಮಸ್ಯೆಗೆ ಥೆರಾಪ್ಯುಟಿಕ್ ಪ್ಲಾಸ್ಮಾ ಫೆರಾಸಿಸ್‌ ಚಿಕಿತ್ಸೆ ನೀಡಲಾಗುತ್ತದೆ ಎನ್ನುತ್ತಾರೆ ಕಿಮ್ಸ್‌ನನ್ಯೂರೋಲಾಜಿಸ್ಸ್‌ ಡಾ. ಅಮೃತ.

ಕಡಿಮೆ ವೆಚ್ಚ: ಈ ವಿಧಾನದ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಕಿಮ್ಸ್‌ನಲ್ಲಿ ಪ್ರತಿ ಬಾರಿ ಈ ವಿಧಾನದಲ್ಲಿ ಚಿಕಿತ್ಸೆಗೆ ₹5,500 ವೆಚ್ಚವಾಗುತ್ತದೆ. ಐದು ಬಾರಿಗೆ ಅಂದಾಜು ₹27ರಿಂದ ₹28 ಸಾವಿರ ವೆಚ್ಚವಾಗುತ್ತದೆ. ಸರ್ಕಾರಿ ಯೋಜನೆಗಳ ಅಡಿ ಚಿಕಿತ್ಸೆಗೆ ಒಳಗಾದರೆ ಉಚಿತ ಎನ್ನುತ್ತಾರೆ ಕಿಮ್ಸ್‌ನ ವೈದ್ಯರು.

ಜಿಬಿಎಸ್‌, ಮೈಸ್ತೇನಿಯಾ ಗ್ರ್ಯಾವಿಸ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ, ಥೆರಾಪ್ಯುಟಿಕ್ ಪ್ಲಾಸ್ಮಾ ಫೆರಾಸಿಸ್‌ ಚಿಕಿತ್ಸೆ ನೀಡಲಾಗುತ್ತಿದೆ. ಈ ಚಿಕಿತ್ಸೆಯಲ್ಲಿ ದೇಹದಿಂದ ಕಲುಷಿತಗೊಂಡಿರುವ ಪ್ಲಾಸ್ಮಾವನ್ನು ತೆಗೆದು ಶುದ್ಧ ಪ್ಲಾಸ್ಮಾವನ್ನು ದೇಹಕ್ಕೆ ಸೇರಿಸಲಾಗುತ್ತದೆ. ಸರಳವಾಗಿ ಹೇಳಬೇಕಾದರೆ ಇದೊಂದು ರಕ್ತ ಶುದ್ಧೀಕರಣ ಪ್ರಕ್ರಿಯೆಯಂತೆ. ಒಬ್ಬರಿಗೆ ಐದು ಬಾರಿ ಈ ವಿಧಾನದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ರಕ್ತದಲ್ಲಿರುವ ಕಲುಷಿತ ಕಣಗಳನ್ನು ನಾಶಪಡಿಸಲಾಗುತ್ತದೆ. ಈ ಚಿಕಿತ್ಸಾ ವಿಧಾನದಿಂದ ಹಂತ ಹಂತವಾಗಿ ರೋಗಿಗಳು ಗುಣಮುಖರಾಗುತ್ತಾರೆ ಎನ್ನುತ್ತಾರೆ ಕಿಮ್ಸ್‌ನ ಪ್ಯಾಥಾಲಜಿ ವಿಭಾಗದ ವೈದ್ಯರು.

*
ಐವರಿಗೆ ಪ್ಲಾಸ್ಮಾ ಫೆರಾಸಿಸ್‌ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಒಳ್ಳೆಯ ಫಲಿತಾಂಶ ಬರುತ್ತಿದೆ. -ಡಾ.ಅಮೃತ, ನ್ಯೂರೋಲಾಜಿಸ್ಟ್‌,ಕಿಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT