ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷವೂ ನಡೆಯದ ಮೆಣಸಿನಕಾಯಿ ಮೇಳ

ಕೊರೊನಾ ಜೊತೆಗೆ ಮೆಣಸಿನ ಕಾಯಿ ಬಾಧಿಸಿದ ಪೋರ್‌ಟ್ರೋಟ್‌ ವೈರಸ್‌, ನಿರಂತರ ಮಳೆ, ಟ್ರಿಪ್ಸ್‌ ಕೀಟ
Last Updated 22 ಜನವರಿ 2022, 4:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ ಜನವರಿಯಲ್ಲಿ ನಡೆಯುತ್ತಿದ್ದ ಒಣ ಮೆಣಸಿನಕಾಯಿ ಮೇಳಕ್ಕೆ ಕೊರೊನಾ ನೆರಳು ಬಿದ್ದಿದೆ. ಕಳೆದರಡು ವರ್ಷಗಳಿಂದ ಮೇಳ ನಡೆಯಲಿಲ್ಲ. ಈ ವರ್ಷದ ಮೇಳಕ್ಕೆ ಕೋವಿಡ್‌ ಜತೆಗೆ ಪೋರ್‌ಟ್ರೋಟ್‌ ವೈರಸ್‌, ಟ್ರಿಪ್ಸ್‌ ಕೀಟ ತಣ್ಣೀರೆರೆಚಿವೆ.

ಅಕಾಲಿಕ ಮಳೆಯ ನಡುವೆಯೂ ಧಾರವಾಡ ಜಿಲ್ಲೆಯಲ್ಲಿ ಮೆಣಸಿನಕಾಯಿ ಉತ್ತಮವಾಗಿ ಬೆಳೆದಿತ್ತು. ಇನ್ನೇನು ಫಸಲು ಕೈಗೆ ಬರಲಿದೆ ಎನ್ನುವ ಹೊತ್ತಿಗೆ ಪೋರ್‌ಟ್ರೋಟ್‌ ವೈರಸ್‌ ತಗುಲಿ ಶೇ 99ರಷ್ಟು ಮೆಣಸಿನಕಾಯಿ ಬಿಳಿ ಬಣ್ಣಕ್ಕೆ ತಿರುಗಿದೆ. ಜೊತೆಗೆ ಅಕಾಲಿಕ ಮಳೆ, ಟ್ರಿಪ್ಸ್‌ ಕೀಟಬಾಧೆ ಕೂಡ ಮೆಣಸಿನ ಕಾಯಿ ಗುಣಮಟ್ಟವನ್ನು ಕುಂದಿಸಿವೆ.

ಜಿಲ್ಲೆಯ ಕುಂದಗೋಳ, ಗುಡಗೇರಿ, ಕುಬಿಹಾಳ, ಸಂಶಿ, ಬೆನಕನಹಳ್ಳಿ, ಚಿಕ್ಕನರ್ತಿ, ಭರದ್ವಾಡ, ಯರಗುಪ್ಪಿ, ಯಲಿವಾಳ, ಹರ್ಲಾಪುರ ಗುಣಮಟ್ಟದ ಮೆಣಸಿನಕಾಯಿ ಬೆಳೆಗೆ ಪ್ರಸಿದ್ಧಿ ಪಡೆದಿವೆ. 2020–21ರಲ್ಲಿ ಜಿಲ್ಲೆಯ 18,470 ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದರೆ, 2021–22ರಲ್ಲಿ 22,563 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ.

ಮೆಣಸಿನಕಾಯಿ ಮೇಳ ಆಯೋಜಿಸುವ ಯೋಚನೆಯಲ್ಲಿರುವಾಗಲೇ ವೈರಸ್‌ನಿಂದಾಗಿ ಬೆಳೆ ಹಾಳಾಗಿದೆ. ಕೊರೊನಾ ಜೊತೆ ವೈರಸ್‌ ಕಾಟದಿಂದ ಮೇಳ ಆಯೋಜಿಸುವ ಯೋಚನೆ ಕೈಬಿಡುವಂತಾಯಿತು ಎಂದು ಕುಂದಗೋಳದ ಅಮರಶಿವ ಸಾಂಬಾರ ರೈತ ಉತ್ಪಾದಕ ಕಂಪನಿಯ ಸಿಇಒ ಜ್ಞಾನೇಶ್ವರಿ ಎಚ್‌.ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ಪೋರ್‌ಟ್ರೋಟ್‌ ವೈರಸ್‌ ಬಾಧೆಗೊಳಗಾದ ಮೆಣಸಿನಕಾಯಿಯನ್ನು ಹೆಚ್ಚಿನ ರೈತರು ಕೊಯ್ಲು ಮಾಡದೇ ಹೊಲದಲ್ಲೇ ಬಿಟ್ಟರೆ ಕೆಲವರು ಕೊಯ್ಲು ಮಾಡಿ ರಾಶಿ ಮಾಡಿದರು.

ಮೆಣಸಿನಕಾಯಿ ಬೆಳೆಯ ಕೊನೆ ಹಂತದಲ್ಲಿ ನಂತರ ಕೀಟ ಬಾಧಿಸಿದಾಗ ಕೀಟನಾಶಕ ಸಿಂಪಡಿಸಿದರೂ ಬೆಳೆ ರಕ್ಷಣೆ ಅಸಾಧ್ಯ ಎನ್ನುತ್ತಾರೆ ಸಾಂಬಾರು ಪದಾರ್ಥ ಅಭಿವೃದ್ಧಿ ಮಂಡಳಿಯ ಕ್ಷೇತ್ರ ಅಧಿಕಾರಿ ಬಾಪುಗೌಡ.

ರೈತ, ಗ್ರಾಹಕರ ಬೆಸೆದ ಒಣ ಮೆಣಸಿನಕಾಯಿ ಮೇಳ

ರಾಜ್ಯ ಸಾಂಬಾರು ಪದಾರ್ಥ ಅಭಿವೃದ್ಧಿ ಮಂಡಳಿ ಹುಬ್ಬಳ್ಳಿ, ತೋಟಗಾರಿಕಾ ಇಲಾಖೆ, ವಾಣಿಜ್ಯ ಮಂಡಳಿ ಹಾಗೂ ರೈತ ಉತ್ಪಾದಕ ಕಂಪನಿಗಳ ಆಶ್ರಯದಲ್ಲಿ ಮೂರುಸಾವಿರ ಮಠದ ಆವರಣದಲ್ಲಿ ಏಳು ವರ್ಷಗಳಿಂದ ನಡೆಯುತ್ತಿದ್ದ ಒಣಮೆಣಸಿನಕಾಯಿ ಮೇಳ ರೈತರು ಹಾಗೂ ಗ್ರಾಹಕರನ್ನು ಬೆಸೆದಿತ್ತು. ಗ್ರಾಹಕರಿಗೆ ಗುಣಮಟ್ಟದ ಮೆಣಸಿನಕಾಯಿ ಸಿಕ್ಕರೆ, ರೈತರಿಗೆ ಉತ್ತಮ ದರ ದೊರೆಯುತ್ತಿತ್ತು.

2018–19ರಲ್ಲಿ ₹66 ಲಕ್ಷ, 2019–20ರಲ್ಲಿ ₹77 ಲಕ್ಷ ವಹಿವಾಟು ನಡೆದಿತ್ತುಎಂದು ರಾಜ್ಯ ಸಾಂಬಾರು ಪದಾರ್ಥ ಅಭಿವೃದ್ಧಿ ಮಂಡಳಿಯ ಹುಬ್ಬಳ್ಳಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಚಿದಾನಂದಪ್ಪ ಪಿ.ಜಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಕೋಟ್‌

ಒಣ ಮೆಣಸಿನಕಾಯಿ ಮೇಳ ಬೆಳೆಗಾರರಿಗೂ, ಗ್ರಾಹಕರಿಗೂ ಅನುಕೂಲವಾಗಿತ್ತು. ಆದರೆ, ಕೋವಿಡ್‌ ಆತಂಕದ ಕಾರಣ ಎರಡು ವರ್ಷಗಳಿಂದ ಮೇಳ ಆಯೋಜಿಸಲಾಗಲಿಲ್ಲ
ಚಿದಾನಂದಪ್ಪ, ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಸಾಂಬಾರು ಪದಾರ್ಥ ಅಭಿವೃದ್ಧಿ ಮಂಡಳಿಯ ಹುಬ್ಬಳ್ಳಿ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT