ಶುಕ್ರವಾರ, ನವೆಂಬರ್ 22, 2019
26 °C

ಮಾದರಿ ಆ್ಯಪ್‌ಗೆ ಚಿಂತನೆ: ಆರ್‌. ದಿಲೀಪ್‌

Published:
Updated:

ಹುಬ್ಬಳ್ಳಿ: ‘ಅವಳಿ ನಗರದಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಜನಸ್ನೇಹಿಯಾದ ಮಾದರಿ ಆ್ಯಪ್ ಸಿದ್ಧಪಡಿಸಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಆಯುಕ್ತ ಆರ್. ದಿಲೀಪ್ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಗರ ಪ್ರದೇಶದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ಸಾರ್ವಜನಿಕರು ವಿಡಿಯೊ ಅಥವಾ ಬರಹದ ಮೂಲಕ ಆ್ಯಪ್‌ಗೆ ಅಪ್‌ಲೋಡ್‌ ಮಾಡಬಹುದು. ಅವರ ಹೆಸರು ಗೋಪ್ಯವಾಗಿಡುವುದಲ್ಲದೆ, ಆ್ಯಪ್‌ನಲ್ಲಿಯೂ ಗೊತ್ತಾಗುವುದಿಲ್ಲ. ಆ ಮಾಹಿತಿ ಆಧರಿಸಿ ಸಿಬ್ಬಂದಿ ಕೂಡಲೇ ಕಾರ್ಯೋನ್ಮುಖರಾಗಿ ಅಪರಾಧಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ’ ಎಂದರು.

‘ಠಾಣಾ ವ್ಯಾಪ್ತಿಯಲ್ಲಿ ರಚಿಸಿದ ಬೀಟ್‌ನ ಕೆಲವು ಸಿಬ್ಬಂದಿ ಇತ್ತೀಚೆಗೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಅವರ ಕಾರ್ಯಗಳನ್ನು ತಿಳಿಯಲು ಹಾಗೂ ಬೀಟ್‌ಗಳನ್ನು ಇನ್ನಷ್ಟು ಸಮರ್ಥವಾಗಿಸಲು ಪೊಲೀಸ್ ವಾಟ್ಸ್‌ ಆ್ಯಪ್ ಗ್ರೂಪ್‌ ಮಾಡಲಾಗುವುದು. ಪಾನ್ ಬೀಡಾ ಅಂಗಡಿ ಮಾಲೀಕರು, ಪ್ರಜ್ಞಾವಂತ ನಾಗರಿಕರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳನ್ನು ಸೇರಿಸಿ, ಮಾಹಿತಿ ಪಡೆಯಲಾಗುವುದು’ ಎಂದು ತಿಳಿಸಿದರು.

‘ಸಂಚಾರ ನಿಯಮಾವಳಿಗಳನ್ನು ಉಲ್ಲಂಘಿಸಿದ ಸವಾರರಿಂದ ದಂಡ ಕಟ್ಟಿಸಿಕೊಳ್ಳಲು ಪೊಲೀಸ್ ಇಲಾಖೆಯು ವಾಟ್ಸ್ ಆ್ಯಪ್ ಸೇವೆಯನ್ನು ಶೀಘ್ರ ಆರಂಭಿಸಲಿದೆ’ ಎಂದು ಹೇಳಿದರು.

‘ಸಂಚಾರ ನಿಯಮ ಉಲ್ಲಂಘಿಸಿದ ಸವಾರರಿಗೆ ಪೊಲೀಸ್ ಇಲಾಖೆಯಿಂದ ನೋಟಿಸ್ ಮತ್ತು ಪಾವತಿಸಬೇಕಾದ ದಂಡದ ಸಂದೇಶ ಕಳುಹಿಸಲಾಗುತ್ತದೆ. ಅದರಲ್ಲಿ ಇಲಾಖೆಯ ಅಧಿಕೃತ ಬ್ಯಾಂಕ್ ಖಾತೆ ನಂಬರ್ ಸಹ ನೀಡಲಾಗುತ್ತದೆ. ಆನ್‌ಲೈನ್‌ ಮೂಲಕವೇ ಸವಾರರು ದಂಡ ಪಾವತಿಸಬಹುದು. ಸಂಚಾರ ಪೊಲೀಸರು ಕಡಿಮೆ ಹಣ ಪಡೆದು ಸವಾರರನ್ನು ಬಿಟ್ಟು ಬಿಡುತ್ತಾರೆ ಎನ್ನುವ ಆರೋಪ ಇದರಿಂದ ದೂರವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)