ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಆಸ್ಪತ್ರೆಯ ಬಾಗಿಲಲ್ಲೇ ಚಿಕಿತ್ಸೆಯ ಮಾಹಿತಿ ಲಭ್ಯ

ಕೊರೊನಾ ಸೋಂಕಿತರಿಗಾಗಿ ಧಾರವಾಡ ಜಿಲ್ಲಾಡಳಿತದಿಂದ ಮಾದರಿ ಕ್ರಮ
Last Updated 23 ಜುಲೈ 2020, 19:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯದ ಬಹುತೇಕ ಕಡೆಗಳಲ್ಲಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿವೆ. ರಾಜ್ಯ ಸರ್ಕಾರದ ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಮುಂದೆ ಬರುತ್ತಿಲ್ಲ. ಆದರೆ, ಧಾರವಾಡ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಎಷ್ಟು ಬೆಡ್‌ಗಳಿವೆ, ಎಷ್ಟು ಮಂದಿ ದಾಖಲಾಗಿದ್ದಾರೆ. ತೊಂದರೆಯಾದರೆ ಸಂಪರ್ಕಿಸಬೇಕಾದ ಮೊಬೈಲ್‌ ನಂಬರ್‌ ಸಹಿತ ವಿವರವಾದ ಫಲಕವನ್ನು ಆಸ್ಪತ್ರೆಯ ಮುಂಭಾಗದಲ್ಲಿಯೇ ಹಾಕಲಾಗಿದೆ.

ಧಾರವಾಡ ಜಿಲ್ಲೆಯಲ್ಲಿ 17 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ ಆಸ್ಪತ್ರೆಗೂ ಒಬ್ಬೊಬ್ಬ ನೋಡಲ್‌ ಅಧಿಕಾರಿ ನೇಮಿಸಲಾಗಿದೆ. ಅವರು, ಕೊರೊನಾ ಸೋಂಕಿತರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುತ್ತಿರುವುದರಿಂದ ಸೋಂಕಿತರು ನಿರಾಳರಾಗಿದ್ದಾರೆ.

ಜಿಲ್ಲೆಯ 17 ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗಾಗಿ 544 ಬೆಡ್‌ ಲಭ್ಯ ಇವೆ. 248 ಸೋಂಕಿತರು ದಾಖಲಾಗಿದ್ದಾರೆ. ಉಳಿದವು ಖಾಲಿ ಇವೆ. ಅದರಲ್ಲಿ 119 ಬೆಡ್‌ಗಳು ಆಕ್ಸಿಜನ್‌ ಸೌಲಭ್ಯ ಹೊಂದಿದ್ದು, 47 ಮಂದಿಗೆ ಆಕ್ಸಿಜನ್‌ ಒದಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಒಟ್ಟು 41 ಬೆಡ್‌ಗಳಲ್ಲಿ ಐಸಿಯು ಸೌಲಭ್ಯ ಹೊಂದಿದ್ದು, 18 ಮಂದಿ ಈ ಸೌಲಭ್ಯ ಪಡೆಯುತ್ತಿದ್ದಾರೆ. 12 ವೆಂಟಿಲೇಟರ್‌ಗಳಿದ್ದು, ಆರು ಮಂದಿಗೆ ಅದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಖಾಸಗಿ ಆಸ್ಪತ್ರೆಗಳಿಗೆ ಸೋಂಕಿತರು ನೇರವಾಗಿ ದಾಖಲಾಗುವುದಿಲ್ಲ. ಕೋವಿಡ್‌ ಆಸ್ಪತ್ರೆಯಾದ ಕಿಮ್ಸ್‌ನಿಂದಲೇ ಅವರನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುತ್ತದೆ. ಅವರು ಸೂಚಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

‘ನಿತ್ಯವೂ ಫಲಕದಲ್ಲಿನ ಅಂಕಿ–ಅಂಶಗಳನ್ನು ಅಪ್‌ಡೇಟ್‌ ಮಾಡಲಾಗುತ್ತದೆ. ಜೊತೆಗೆ ಆಸ್ಪತ್ರೆಯ ನೋಡಲ್‌ ಅಧಿಕಾರಿ ಹಾಗೂ ಜಿಲ್ಲಾ ನೋಡಲ್‌ ಅಧಿಕಾರಿಗಳ ಮೊಬೈಲ್‌ ಫೋನ್‌ ಸಂಖ್ಯೆ ಹಾಕಲಾಗಿರುತ್ತದೆ. ಅವರಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ’ ಎನ್ನುತ್ತಾರೆ ಸಂಜೀವಿನ ಸ್ಪೆಷಾಲಿಟಿ ಆಸ್ಪತ್ರೆಗೆ ನೋಡಲ್‌ ಅಧಿಕಾರಿಯಾಗಿರುವ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕವಿತಾ ಎ.ಎಸ್‌.

‘ಪ್ರತಿ ಆಸ್ಪತ್ರೆಗೆ ನೋಡಲ್‌ ಅಧಿಕಾರಿ ನೇಮಿಸಲಾಗಿದೆ. ಬೆಳಿಗ್ಗೆ ಹಾಗೂ ಸಂಜೆ ಆಸ್ಪತ್ರೆಗಳಲ್ಲಿ ದಾಖಲಾಗಿರುವ, ಬಿಡುಗಡೆಯಾಗಿರುವ ರೋಗಿಗಳ ವಿವರಗಳನ್ನು ಅವರು ನಮಗೆ ನೀಡುತ್ತಾರೆ. ಖಾಸಗಿ ಆಸ್ಪತ್ರೆಗಳ ವಿರುದ್ದ ಇದ್ದ ದೂರುಗಳ ಸಂಖ್ಯೆ ಕಡಿಮೆಯಾಗಿದೆ. ಆಸ್ಪತ್ರೆಯವರೂ ಎಲ್ಲ ರೀತಿಯಿಂದ ಸಹಕಾರ ನೀಡುತ್ತಿದ್ದಾರೆ’ ಎಂದು ನೋಡಲ್‌ ಅಧಿಕಾರಿಯಾಗಿರುವ ಹೆಸ್ಕಾಂ ವ್ಯವಸ್ಥಾಪಕ ಪ್ರಬಂಧಕ ಇಬ್ರಾಹಿಂ ಮೈಗೂರ.

ರಾಜ್ಯದಲ್ಲಿರುವಂತೆಯೇ ಜಿಲ್ಲೆಯಲ್ಲಿಯೂ ಆರಂಭದಲ್ಲಿ ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದವು. ಚಿಕಿತ್ಸೆಗೆ ದಾಖಲಾದ ರೋಗಿಗೆ ಕೋವಿಡ್‌–19 ಇರುವುದು ದೃಢಪಟ್ಟ ಕೂಡಲೇ ಕಿಮ್ಸ್‌ಗೆ ಕಳುಹಿಸಿ ಕೈತೊಳೆದುಕೊಂಡಿದ್ದವು. ಜಿಲ್ಲಾಡಳಿತ ಬಿಗಿ ಕ್ರಮಗಳನ್ನು ಕೈಗೊಂಡ ಮೇಲೆ ಚಿಕಿತ್ಸೆ ನೀಡಲಾರಂಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT