ಭಾನುವಾರ, ಮೇ 9, 2021
28 °C

‘ಸರ್ಕಾರ– ಕೋಡಿಹಳ್ಳಿ ಮಧ್ಯೆ ಅಪವಿತ್ರ ಮೈತ್ರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ಕೊಟ್ಟಿರುವ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ರಾಜ್ಯ ಸರ್ಕಾರದ ಮಧ್ಯೆ ಅಪವಿತ್ರ ಮೈತ್ರಿ ನಡೆದಿದೆ. ಹೋರಾಟದ ದಿಕ್ಕು ದಾರಿತಪ್ಪಿದ್ದು, ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಹಾಗಾಗಿ, ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಕಾರ್ಮಿಕ ಹೋರಾಟಗಾರ ದೇವಾನಂದ ಜಗಾಪುರ ಹೇಳಿದರು.

‘ರೈತರ ಸಮಸ್ಯೆಗಳ ಬಗ್ಗೆಯೇ ಸರಿಯಾಗಿ ಗಮನ ಹರಿಸದ ಚಂದ್ರಶೇಖರ್ ಅವರು, ತಮಗೆ ಸಂಬಂಧವಿಲ್ಲದ ಸಾರಿಗೆ ನೌಕರರ ಪರ ಹೋರಾಟಕ್ಕೆ ಇಳಿದಿದ್ದಾರೆ. ಮುಷ್ಕರಕ್ಕೆ ಕರೆ ಕೊಡುವುದಕ್ಕೆ ಮುಂಚೆ ಅವರು, ಕಾರ್ಮಿಕ ಹಾಗೂ ರೈತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಆಗಬಹುದಾದ ಸಾಧಕ ಬಾಧಕಗಳ ಬಗ್ಗೆಯೂ ಚರ್ಚಿಸಿಲ್ಲ. ಇಡೀ ಹೋರಾಟದ ಸ್ವರೂಪ ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಸರ್ಕಾರಕ್ಕೆ ನೆರವಾಗುವಂತಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಚಂದ್ರಶೇಖರ್ ಅವರು ಕಾರ್ಮಿಕ ಸಂಘಟನೆಗಳನ್ನು ಒಡೆಯುತ್ತಿದ್ದಾರೆ. ಸಾರಿಗೆ ನೌಕರರನ್ನು ಪ್ರತಿನಿಧಿಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡರಾದ ಅನಂತ ಸುಬ್ಬರಾವ್, ಕವಳಿಕಾಯಿ ಹಾಗೂ ಎಸ್.ಕೆ.‌ ಶರ್ಮಾ ಅವರು ಮುಷ್ಕರದ ಕುರಿತು ತಮ್ಮ ಮೌನ ಮುರಿಯಬೇಕು. ನೌಕರರು ದಾರಿ ತಪ್ಪುದಕ್ಕೆ ಮುಂಚೆ ಸರಿಯಾದ ಮಾರ್ಗದರ್ಶನ ನೀಡಬೇಕು’ ಎಂದು ಮನವಿ ಮಾಡಿದರು.

ಕಳಸಾ ಬಂಡೂರಿ ಹೋರಾಟ ಸಮಿತಿಯ ಸಿದ್ದು ತೇಜಿ ಮಾತನಾಡಿ, ‘ಸರ್ಕಾರವೇ ಹೇಳುವಂತೆ ಮುಷ್ಕರದಿಂದ ಇದುವರೆಗೆ ₹950 ಕೋಟಿ ನಷ್ಟವಾಗಿದೆ. ಖಾಸಗಿ ವಾಹನಗಳ ಮೂಲಕ ಕೇವಲ ನಗರಗಳಲ್ಲಿ ಮಾತ್ರ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗದ ಜನ ಸಾರಿಗೆ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ನೌಕರರು ಮುಷ್ಕರ ಕೈಬಿಡಬೇಕು’ ಎಂದರು.

ಮುಖಂಡರಾದ ಮುಜಾವರ ಮತ್ತು ಬಾಬಾಜಾನ್ ಮುಧೋಳ ಇದ್ದರು‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.