ಹುಬ್ಬಳ್ಳಿ: ಇಲ್ಲಿನ ವೀರಾಪುರ ಓಣಿಯ ರಾಯಚೋಟಿ ವೀರಭದ್ರೇಶ್ವರ ಜಾತ್ರೆ ಹಾಗೂ ರಥೋತ್ಸವವು ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ರಥ ಸಾಗುವ ಬೀದಿಯ ತುಂಬೆಲ್ಲ ರಂಗೋಲಿ ಬಿಡಿಸಿ, ಸುಸ್ವಾಗತ ಎಂದು ಬರೆಯಲಾಗಿತ್ತು. ಭಕ್ತರು ಹರ ಹರ ಮಹಾದೇವ ಎಂದು ಘೋಷ ಹಾಕುತ್ತ ರಥ ಎಳೆಯುತ್ತಿದ್ದರೆ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಮನೆಗಳ ಮಹಡಿಗಳ ಮೇಲೆ ಮಹಿಳೆಯರು, ಮಕ್ಕಳು ಸೇರಿದಂತೆ ಓಣಿಯ ಭಕ್ತರು ನಿಂತು ರಥೋತ್ಸವವನ್ನು ಕಣ್ತುಂಬಿಕೊಂಡರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ಲಿಂಬು ಎಸೆದು ಭಕ್ತಿ ಸಮರ್ಪಿಸಿದರು.
ದೇವಸ್ಥಾನದ ಮಹಾದ್ವಾರದಿಂದ ಆರಂಭವಾದ ರಥೋತ್ಸವವು ಎರಡೆತ್ತಿನ ಮಠದ ವರೆಗೆ ಸಾಗಿ ಮೂಲಸ್ಥಾನಕ್ಕೆ ಹಿಂದಿರುಗಿತು. ಪೋಷಕರು ತಮ್ಮ ಮಕ್ಕಳ ಹಣೆಯನ್ನು ರಥದ ಚೌಕಟ್ಟಿಗೆ ಮುಟ್ಟಿಸಿ ಆಶೀರ್ವಾದ ಪಡೆದರು. ಬ್ಯಾಂಡ್ ಸದ್ದು ಮೆರಣಿಗೆಗೆ ಮೆರುಗು ತುಂಬಿತ್ತು. ರಥೋತ್ಸವ ಮುಗಿಯುತ್ತಿದ್ದಂತೆ ಕಲ್ಲಂಗಡಿ ಹಣ್ಣಿನ ಪ್ರಸಾದ ವಿತರಿಸಲಾಯಿತು.
ಜಾತ್ರೆಯ ಅಂಗವಾಗಿ ಬೆಳಿಗ್ಗೆಯಿಂದ ಅಗ್ನಿಪುಟ, ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ವೀರಗಾಸೆ ಕುಣಿತದೊಂದಿಗೆ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ವೀರಭದ್ರೇಶ್ವರ ದೇವಸ್ಥಾನದ ಎದುರಿಗಿನ ಮಹಾಬಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಅಭಿಷೇಕ ನಡೆಸಲಾಯಿತು. ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.