ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ; ಸಹಕಾರಿ ಬ್ಯಾಂಕುಗಳ ಆದಾಯ ತೆರಿಗೆ ಮನ್ನಾ ಮಾಡಿ: ಎಚ್‌.ಕೆ.ಪಾಟೀಲ

Last Updated 18 ಜನವರಿ 2020, 10:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಸರ್ಕಾರವು ಖಾಸಗಿ ಬ್ಯಾಂಕುಗಳಿಗಿಂತ ಸಹಕಾರಿ ಬ್ಯಾಂಕುಗಳಿಗೆ ಹೆಚ್ಚಿನ ಆದಾಯ ತೆರಿಗೆ ವಿಧಿಸುವ ಮೂಲಕ ದ್ರೋಹ ಮಾಡುತ್ತಿದ್ದು, ತಕ್ಷಣ ಇದನ್ನು ನಿಲ್ಲಿಸಬೇಕು. ಸಹಕಾರಿ ಬ್ಯಾಂಕುಗಳಿಗೆ ಆದಾಯ ತೆರಿಗೆ ಮನ್ನಾ ಮಾಡಬೇಕು ಎಂದು ಶಾಸಕ ಎಚ್‌.ಕೆ.ಪಾಟೀಲ ಒತ್ತಾಯಿಸಿದರು.

ಇಲ್ಲಿನ ದಾಜಿಬಾನಪೇಟೆಯಲ್ಲಿರುವ ಎಸ್‌.ಕೆ.ಕೆ ಕೋ–ಆಪ್‌ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನಿರ್ಮಿಸಲಾಗಿರುವ ನೂತನ ಸಭಾಭವನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ಲಾಭ ಮಾಡುವ ಖಾಸಗಿ ಬ್ಯಾಂಕುಗಳಿಗೆ ಮತ್ತು ಕಾರ್ಪೊರೇಟ್‌ ಬ್ಯಾಂಕುಗಳಿಗೆ ಶೇ 20ರಷ್ಟು ಆದಾಯ ತೆರಿಗೆ ವಿಧಿಸುತ್ತದೆ. ಆದರೆ, ಸಹಕಾರಿ ಬ್ಯಾಂಕುಗಳಿಗೆ ಶೇ 30ರಷ್ಟು ಆದಾಯ ತೆರಿಗೆ ವಿಧಿಸುತ್ತಿದೆ. ಈ ತಾರತಮ್ಯ ನಿವಾರಣೆಯಾಗಬೇಕು ಎಂದರು.

ಸಹಕಾರಿ ಕ್ಷೇತ್ರಕ್ಕೆ ಸರ್ಕಾರದಿಂದ ಹೆಚ್ಚಿನ ಬೆಂಬೆಲ, ಪ್ರೋತ್ಸಾಹ ಸಿಗುತ್ತದೆ ಎಂಬ ಭಾವನೆ ಅನೇಕರಲ್ಲಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಯಾ ಪೈಸೆ ಪ್ರೋತ್ಸಾಹ ಸಹಕಾರಿ ಕ್ಷೇತ್ರಕ್ಕೆ ಲಭಿಸುತ್ತಿಲ್ಲ. ಸಹಕಾರಿ ಬ್ಯಾಂಕುಗಳಲ್ಲಿ ಸರ್ಕಾರ ಠೇವಣಿ ಸಹ ಇಡುತ್ತಿಲ್ಲ, ಕೇವಲ ರಾಷ್ಟ್ರೀಕೃತ ಬ್ಯಾಂಕ್‌ ಮತ್ತು ಶೆಡ್ಯೂಲ್‌ ಬ್ಯಾಂಕ್‌ಗಳಲ್ಲಿ ಮಾತ್ರ ಠೇವಣಿ ಇಡುತ್ತದೆ. ಸಹಕಾರಿ ಬ್ಯಾಂಕುಗಳು ಉಳಿದುಕೊಂಡಿರುವುದು ಸಾರ್ವಜನಿಕ ವಿಶ್ವಾಸದಿಂದ ಎಂದು ಹೇಳಿದರು.

ಎಸ್‌ಎಸ್‌ಕೆ ಬ್ಯಾಂಕ್‌ ಜನಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು.ಬ್ಯಾಂಕ್‌ ಸದ್ಯ ₹ 25 ಕೋಟಿ ಠೇವಣಿ ಹೊಂದಿದ್ದು, ಮುಂದಿನ ವರ್ಷ ನಡೆಯಲಿರುವ ಬ್ಯಾಂಕಿನ ಶತಮಾನೋತ್ಸವ ವೇಳೆಗೆ ₹ 50 ಕೋಟಿ ಠೇವಣಿ ಸಂಗ್ರಹಿಸಬೇಕು. ಶತಮಾನೋತ್ಸವ ಸಮಾರೋಪದ ವೇಳೆಗೆ ₹ 100 ಕೋಟಿ ಠೇವಣಿ ಹೊಂದುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

‘ಮುಚ್ಚುವ ಸ್ಥಿತಿ ತಲುಪಿದ್ದ ಎಸ್‌ಎಸ್‌ಕೆ ಬ್ಯಾಂಕಿನ ಪುನಶ್ಚೇತನಕ್ಕೆ ಶ್ರಮಿಸಿದ ಮುಖಂಡರಾದ ವಸಂತ ಲದವಾ, ವಿಠಲ ಲದವಾ ಮತ್ತಿತರರನ್ನು ಸಮಾಜ ಸದಾ ಸ್ಮರಿಸಬೇಕು’ ಎಂದು ಹೇಳಿದರು.

ಸಾಧಕರಿಗೆ ಸನ್ಮಾನ:ಸಾಧಕರಾದ ಬಾಲಚಂದ್ರ ನಾಕೋಡ, ಡಾ.ರಿಷಿಕಾ ಹಬೀಬ್‌ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕರ್ನಾಟಕ ಪ್ರಾಂತೀಯ ಎಬಿಎಸ್‌ಎಸ್‌ಕೆ ಸಮಾಜದ ಗೌರವ ಕಾರ್ಯದರ್ಶಿ ಶಶಿಕುಮಾರ ಮೆಹರವಾಡೆ, ಎಸ್‌.ಕೆ.ಕೆ ಕೋ–ಆಪ್‌ ಬ್ಯಾಂಕಿನ ಅಧ್ಯಕ್ಷ ವಿಠ್ಠಲ ಪಿ.ಲದವಾ, ಉಪಾಧ್ಯಕ್ಷ ನಾರಾಯಣ ಜರತಾರಘರ್‌, ನಿರ್ದೇಶಕರಾದ ನಾರಾಯಣ ಬದ್ದಿ, ಅರ್ಜುನ ಅಥಣಿ,ದೀಪಕ್‌ ಮಗಜಿಕೊಂಡಿ, ಕೃಷ್ಣಾ ಎನ್‌. ಕಾಟೀಗರ, ಪ್ರಕಾಶ ಎಂ.ಬುರಬುರೆ, ನಾರಾಯಣ ಎನ್.ಖೋಡೆ, ವಸಂತ ಎನ್‌.ಲದವಾ, ರತ್ನಮಾಲಾ ಜೆ.ಬದ್ದಿ, ಸರಳಾ ಜಿ.ಭಾಂಡಗೆ, ಸುರೇಶ ಆರ್‌.ಭಾಂಡಗೆ ನೀಲುಸಾ ಕೆ.ದಲಭಂಜನ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನೀಲ ಹನುಮಸಾಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT