ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಾಗ್ರಹಕ್ಕೆ ಕಾಂಗ್ರೆಸ್, ಜೆಡಿಎಸ್ ಬೆಂಬಲ

ವೇತನ ನೀಡುವಂತೆ, ಕೆಲಸಕ್ಕೆ ಸೇರಿಸಿಕೊಳ್ಳುವಂತೆ ನಿರಂತರ ಸತ್ಯಾಗ್ರಹ
Last Updated 7 ಫೆಬ್ರುವರಿ 2023, 5:14 IST
ಅಕ್ಷರ ಗಾತ್ರ

ಧಾರವಾಡ: ‘ಏಳು ತಿಂಗಳ ವೇತನ ಬಿಡುಗಡೆ ಹಾಗೂ ಮರು ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ, ಪಾಲಿಕೆಯ ಕೇಂದ್ರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿರುವ ಜಲಮಂಡಳಿ ನೌಕರರ ಹೋರಾಟಕ್ಕೆ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಜೆಡಿಎಸ್ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಅವರು ಸೋಮವಾರ ತಮ್ಮ ಪಕ್ಷದ ವತಿಯಿಂದ ಬೆಂಬಲ ಸೂಚಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.

ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದಲ್ಲಿ ಜಲಮಂಡಳಿ ನೌಕರರು ಕಳೆದ 9 ದಿನಗಳಿಂದ ನಡೆಸಿರುವ ಆಮರಣ ಉಪವಾಸ ಸತ್ಯಾಗ್ರಹ ಸೋಮವಾರವೂ ಮುಂದುವರೆಯಿತು.

ಗುರುರಾಜ ಹುಣಸಿಮರದ ಮಾತನಾಡಿ, ‘ನೌಕರರ ಸರದಿ ಉಪವಾಸ ಸತ್ಯಾಗ್ರಹಕ್ಕೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗಾಗಲಿ, ಜಿಲ್ಲಾಡಳಿತವಾಗಲಿ ಈವರೆಗೂ ಸಕಾರಾತ್ಮಕವಾಗಿ ಸ್ಪಂದಿಸದೇ ಜಾಣಕುರುಡು ಪ್ರದರ್ಶಿಸುತ್ತಿರುವುದು ನೋವಿನ ಸಂಗತಿ. ಹಲವರು ಅಸ್ವಸ್ಥರಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿಯೇ ಆಮರಣ ಉಪವಾಸ ನಡೆಸಿದ್ದರೂ, ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

358 ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಹಾಗೂ ಅವರ ಬಾಕಿ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ ಶಿವಲೀಲಾ ಕುಲಕರ್ಣಿ ಮಾತನಾಡಿ, ‘ಎಲ್ ಆ್ಯಂಡ್‌ ಟಿ ಕೇವಲ ಪೈಪ್ ಲೈನ್ ಉತ್ಪಾದನೆ, ಅಳವಡಿಕೆಯಲ್ಲಿ ನುರಿತ ಕಂಪನಿ. ಅವರಿಗೆ ನೀರು ಸರಬರಾಜು ಮಾಡಿದ ಯಾವುದೇ ಅನುಭವವಿಲ್ಲ. ಅಲ್ಲದೆ, ಜನಾಭಿಪ್ರಾಯ ಸಂಗ್ರಹಿಸದೇ, ಯಾವ ಮಾನದಂಡದ ಆಧಾರದ ಮೇಲೆ ಗುತ್ತಿಗೆ ಕೊಡಲಾಗಿದೆ ಎಂಬುದು ತಿಳಿಯುತ್ತಿಲ್ಲ. ಜಲಮಂಡಳಿ ವಿರುದ್ದ ದೂರುಗಳಿವೆಯೇ? ಎಲ್ ಆ್ಯಂಡ್ ಟಿ ಕಂಪನಿಯ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ದಾಖಲೆಯನ್ನು ಸರ್ಕಾರ ಸಂಪೂರ್ಣವಾಗಿ ಬಹಿರಂಗ ಪಡಿಸಬೇಕು’ ಎಂದು ಒತ್ತಾಯಿಸಿದರು.

‘ಪಾಲಿಕೆ ಆಯುಕ್ತರು ಹಾಗೂ ಎಲ್ ಆ್ಯಂಡ್‌ ಟಿ ಕಂಪನಿ, ಈ ಎಲ್ಲ 358 ನೌಕರರನ್ನು ಮರು ನೇಮಕ ಮಾಡಿಕೊಂಡು ಅವಳಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಅಗತ್ಯತೆ ಇದೆ. ಇಲ್ಲದಿದ್ದರೆ ಬರುವ ದಿನಗಳಲ್ಲಿ ನೀರಿನ ಖಾಸಗೀಕರಣ ವಿರೋಧಿಸಿ, ‘ಎಲ್ ಆ್ಯಂಡ್‌ ಟಿ ಹಠಾವೋ, ಹುಬ್ಬಳ್ಳಿ ಧಾರವಾಡ ಬಚಾವೋ’ ಆಂದೋಲನಕ್ಕೆ ಕರೆ ನೀಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ, ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ ಹಾಗೂ ಜೆಡಿಎಸ್ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT