ಮಂಗಳವಾರ, ಜನವರಿ 31, 2023
19 °C

ಬಿಜೆಪಿಯವರಿಗೆ ಕರ್ನಾಟಕದಲ್ಲಿ ಗೋವು ಅವ್ವ, ಗೋವಾದಲ್ಲಿ ಅವ್ವ ಅಲ್ವಾ: CM ಇಬ್ರಾಹಿಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಗೋವನ್ನು ಅವ್ವ, ಮಾತೆ ಎನ್ನುವ ಬಿಜೆಪಿ ಗೋವಾದಲ್ಲಿ ಯಾಕೆ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿಲ್ಲ. ಗೋವಾದ ಗೋವು ಬಿಜೆಪಿಯವರಿಗೆ ಅವ್ವ– ಮಾತೆಯಲ್ಲವೇ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಗೋವಾದಲ್ಲಿ ಗೋಹತ್ಯೆ ಜಾರಿ ಮಾಡಿದರೆ ಅಲ್ಲಿರುವ ಕ್ರೈಸ್ತರು ಹೊಡೆಯುತ್ತಾರೆ. ಗೋವಾದಿಂದ ದನದ ಮಾಂಸ ರಾಜ್ಯಕ್ಕೆ ಬರುತ್ತಿದೆ. ಅದನ್ನು ಏಕೆ ತಡೆಯುತ್ತಿಲ್ಲ‘ ಎಂದರು.

ಚುನಾವಣೆ ಹತ್ತಿರ ಇರುವುದರಿಂದ ಸೋಲು ಭೀತಿಯಲ್ಲಿರುವ ಬಿಜೆಪಿ ಗೋವು, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧದ ಹೆಸರಿನಲ್ಲಿ ಮತ ಧ್ರವೀಕರಣ ಮಾಡಲು ಹೊರಟಿದೆ ಎಂದು ಗಂಭೀರ ಆರೋಪ ಮಾಡಿದರು.

ಕುಮಾರಸ್ವಾಮಿಯೇ ಸಿಎಂ:

ಜೆಡಿಎಸ್‌ಗೆ ಸಂಪೂರ್ಣ ಬಹುಮತ ಬಂದರೆ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲಾಗುತ್ತದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಚ್‌.ಡಿ. ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಲಿದ್ದಾರೆ. ಪಂಚರತ್ನ ಯಾತ್ರೆ ಮೂಲಕ ರಾಜ್ಯದ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ಹುದ್ದೆಗೇರಿದರೆ ಮಾತ್ರ ಇಲ್ಲಿ ಯಾರು ಮುಖ್ಯಮಂತ್ರಿ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಯೇತರ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣಾ ಆಮಿಷ ಕೋರ್ಟ್‌ಗೆ ಮೊರೆ:

ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಮತದಾರರಿಗೆ ಹಣ, ವಸ್ತುಗಳನ್ನು ಹಂಚುವ ವಿಷಯವನ್ನು ಜೆಡಿಎಸ್ ಗಂಭೀರವಾಗಿ ಪರಿಗಣಿಸಿದೆ. ಈ ವಿಷಯವನ್ನು ನ್ಯಾಯಾಲಯಕ್ಕೆ ಪಕ್ಷ ಕೊಂಡೊಯ್ಯಲಿದೆ. ಇಂತಹ ಆಮಿಷ ಪ್ರಕರಣಗಳನ್ನು ಪತ್ತೆ ಹಚ್ಚುವ ಸಲುವಾಗಿಯೇ ಬೆಂಗಳೂರಿನಲ್ಲಿ ವಾರ್‌ರೂಂ ಆರಂಭಿಸಲಾಗಿದ್ದು, 400 ಯುವಕರು ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಟಿಕೆಟ್ ಘೋಷಣೆಯಾಗಿಲ್ಲ:

ಕೆಲವು ಕ್ಷೇತ್ರಗಳಲ್ಲಿ ಮುಖಂಡರು ತಾವೇ ಜೆಡಿಎಸ್ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಈ ವರೆಗೆ ಜೆಡಿಎಸ್ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಿಲ್ಲ ಎಂದರು.

ಮಹಾರಾಷ್ಟ್ರದ ಗಡಿ ಖ್ಯಾತೆಯ ಬಗ್ಗೆ ಮಾತನಡಿದ ಅವರು, ಇದು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಬಿಜೆಪಿ ನಡುವೆ ನಡೆಯುತ್ತಿರುವ ಕುಸ್ತಿ. ಜನರಿಗೆ ಈ ಬಗ್ಗೆ ಚಿಂತೆ ಇಲ್ಲದಿದ್ದರೂ ರಾಜಕೀಯ ಕಾರಣಕ್ಕೆ ವಿವಾದ ಮಾಡಲಾಗುತ್ತಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಹಾಯಕರಾಗಿದ್ದಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು