ಭಾನುವಾರ, ಏಪ್ರಿಲ್ 5, 2020
19 °C

ಚಿರನಿದ್ರೆಗಿಳಿದ ಚೇತನಕ್ಕೆ ಕೊನೆಯ ನುಡಿನಮನ

ರಶ್ಮಿ ಎಸ್. Updated:

ಅಕ್ಷರ ಗಾತ್ರ : | |

prajavani

ಒಂದು ಶತಮಾನ ಬಿಡುವಿಲ್ಲದಂತೆ ಚಟುವಟಿಕೆಯಿಂದಿದ್ದ ಜೀವ, ಕಳೆದ ತಿಂಗಳಿನಿಂದ ಪ್ರತಿದಿನವೂ ಕ್ಷೀಣಿಸುತ್ತಿತ್ತು. ಅವರ ಇಚ್ಛಾಶಕ್ತಿಯ ಮುಂದೆ ದೇಹದ ಕಸುವು ಸಂಘರ್ಷಕ್ಕಿಳಿದಂತಿತ್ತು. ಇನ್ನಷ್ಟು ಹೋರಾಟಗಳು, ಮತ್ತಷ್ಟು ನ್ಯಾಯ, ಕನ್ನಡ ಧ್ವಜ ಒಂದು ದಡಕ್ಕೆ ತರಬೇಕಿತ್ತು. ಇನ್ನಷ್ಟು ಬರೆಯಲಿತ್ತು.. ಮತ್ತಷ್ಟು ಕೆಲಸಗಳಿದ್ದವು. ಮನಃಶಕ್ತಿಯ ಮುಂದೆ ದೇಹ ಶಕ್ತಿ ಕ್ಷೀಣಿಸುವಾಗ ತಿಂಗಳ ಹಿಂದೆ ಕಿಮ್ಸ್‌ಗೆ ಬಂದು ಸೇರ್ಪಡೆಯಾದರು.

ಯಾವುದಕ್ಕೂ ಸೋಲೊಪ್ಪದ ಕನ್ನಡದ ಕಟ್ಟಾಳು ಮಾರ್ಚ್‌ 16ರ ರಾತ್ರಿ, ತಮ್ಮ ಧೀಶಕ್ತಿಯೊಂದಿಗೆ ಬ್ರಹ್ಮಾಂಡದ ಶಕ್ತಿಯೊಂದಿಗೆ ಲೀನವಾದರು. ಕಸುವಳಿದ ದೇಹ ಮಾತ್ರ ಇಲ್ಲಿ ಉಳಿಯಿತು. ತಣ್ಣಗೆ ಕಿಮ್ಸ್‌ನ ಶವಾಗಾರದಲ್ಲಿ ವಿಶ್ರಾಂತಿ ಪಡೆಯಿತು. ಮಂಗಳವಾರ ಬೆಳಿಗ್ಗೆ ಹುಬ್ಬಳ್ಳಿಯ ಮನೆಯಂಗಳದಲ್ಲಿ ಮಕ್ಕಳು, ಮೊಮ್ಮಕ್ಕಳು, ಮರಿಮಗ ಎಲ್ಲರೂ ಅವರ ಬರವಿಗೆ ಕಾಯುತ್ತಿದ್ದರು. ಅಂಬುಲೆನ್ಸ್‌ ಬಂದಾಗ ಅಜ್ಜ ಬಂದ್ರು, ಅಪ್ಪ ಬಂದ್ರು ಎಂಬ ಪಿಸುಮಾತುಗಳೆಲ್ಲ ಕಣ್ಣೀರ ಕೋಡಿಯಲ್ಲಿ, ಗದ್ಗದಿತ ಕಂಠದಲ್ಲಿ ಅಲ್ಲಲ್ಲೆ ತಡೆದವು. ಮನೆಗೆ ಬಂದ ದೇಹಕ್ಕೆ ಮಾತ್ರ ಯಾವುದರ ಪರಿವೆಯೂ ಇಲ್ಲ.

ನೊಸಲಿಗೆ ವಿಭೂತಿ ಬಳಿದಾಗ, ಮೊದಲ ಆರತಿ ಎತ್ತಿದಾಗ, ಬಾಳಿ ಬದುಕಿದ ಜೀವವೊಂದು ದೇವಪೀಠಕ್ಕೇರಿತು. ಇನ್ನು ಆಕ್ರಂದನದ, ಅಳುವಿನ ವಿದಾಯಕ್ಕೆ ಅಲ್ಲಿಯೇ ಕಟ್ಟೆ ಕಟ್ಟಿ, ಗೌರವದ ವಿದಾಯಕ್ಕೆ ಮನ ಸಜ್ಜುಮಾಡಿಕೊಳ್ಳಲೇಬೇಕಾಯಿತು. ಬೆಳಗಿದ ಆರತಿಯ ದೀಪದಲ್ಲಿ ಅವರಾತ್ಮದ ಬೆಳಕು, ಉಳಿದವರಾತ್ಮಕ್ಕೆ ದಾರಿದೀಪವಾಗಲಿ ಎಂಬುದು ಸಂಪ್ರದಾಯ. ಅದರಂತೆಯೇ ಪಾಪು ದೀಪ ಶಾಂತವಾಗಿ ಕುಡಿಬೆಳಕು ಚೆಲ್ಲತೊಡಗಿತು.

ಮನೆಯಂಗಳದಲ್ಲಿ ಮಲಗಿದ ಪಾಪುಗೆ ಮುಂಡಾಸು ಸುತ್ತಲಾಗಿತ್ತು.  ಖಾದಿ ಶಾಲು, ಖಾದಿ ಹಾರಗಳ ನಡುವೆ ಈ ಚೇತನ ನಿಶ್ಚೇತನವಾಗಿದ್ದೇ ಅಚ್ಚರಿಯೆಂಬಂತೆ ಅವರ ಬಂಧು, ಬಳಗ, ಆಪ್ತೇಷ್ಟರು, ವಿದ್ಯಾರ್ಥಿ ಬಳಗ ಕಣ್ತುಂಬಿಕೊಂಡೇ ಕೈ ಮುಗಿದರು. ಹೂವಿನ ಮಳೆಗರೆದರು. ಸದ್ದುಗದ್ದಲವಿಲ್ಲ, ಜನವಿದ್ದರೂ ಜಂಗುಳಿಯಿಲ್ಲ. ಮಾತುಗಳು ಮೌನವಾದ, ಕಂಬನಿ ಮಾತುಗಳಾದ ಕ್ಷಣವದು. ಸ್ಪರ್ಶ ಸಂತ್ವಾನವಾದ ಕ್ಷಣವದು. ಟೋಪಿ ಇಲ್ಲದೇ ನೋಡಿದವರೇ ಅಲ್ಲ, ಸಣ್ಣದೊಂದು ಅಪರಿಚಿತ ಭಾವ ಮೂಡಿದಂತಾದಾಗಲೇ ಅವರ ಗಾಂಧಿ ಟೋಪಿ ತಂದರು. ವೇದಿಕೆಯೊಂದಕ್ಕೆ ಹೋಗಲು ಶಿಸ್ತಿನಿಂದ ಸಿದ್ಧರಾದಂತೆ ಮತ್ತೆ ಕಾಣುತ್ತಿದ್ದರು. ಅಲ್ಲಿದ್ದವರಿಗೆಲ್ಲ ಕಾಡುತ್ತಿದ್ದರು.

ಅಂಗಳದಲ್ಲಿದ್ದ ಸಂಗಾತಿ ಇಂದುಮತಿಯ ಪುತ್ಥಳಿಯಲ್ಲಿಯೂ ಸಂಚಲನವಿದ್ದಂತೆ. ಸಸಿಗಿಡಗಳೂ ಬಾಗಿ ನಮನ ಸಲ್ಲಿಸಿದಂತೆ. ಆ ಓಣಿಯ ಅಸ್ಮಿತೆಯೇ ಯಾವುದರ ಪರಿವೆಯೇ ಇಲ್ಲದೆ ಚಿರನಿದ್ರೆಗೆ ಜಾರಿದ್ದರೂ.. ಇನ್ನೇನು ಎದ್ದಾರು ಎಂಬ ಎಚ್ಚರದಲ್ಲಿದ್ದಂತೆ ಮಾತುಗಳು ಮೆಲುಧ್ವನಿಗಿಳಿದಿದ್ದವು.

ನಾಡುನುಡಿಗಾಗಿ ಧ್ವನಿ ಎತ್ತುತ್ತಿದ್ದ ಪುಟ್ಟಪ್ಪನವರ ಎದೆಯಪ್ಪಿದ ರಾಷ್ಟ್ರಧ್ವಜಕ್ಕೂ ಗೌರವದ ನಗೆ ನೀಡಿದಂಥ ಶಾಂತ ವದನ. ಎಲ್ಲೇ ಹೋದರೂ ನಾನೇ ಕರೆದೊಯ್ಯುತ್ತಿದ್ದೆ. ನಾನಿಲ್ಲಿಯೇ ಉಳಿದೆ, ನೀವೆಲ್ಲಿಗೆ ಹೋದಿರಿ ಎಂಬಂತೆ ಪ್ರತಿಕ್ಷಣವೂ ದುಃಖಿಸುತ್ತಿದ್ದ ಮಾನಸಪುತ್ರ ಸಯ್ಯದ್‌ ಕಣ್ಣೀರಿಗೂ ಕರಗದೆ ಕಲ್ಲಾಗಿದ್ದರು.

ಅವರ ಕರ್ಮಭೂಮಿ ಎಂಬಂತಿದ್ದ ವಿದ್ಯಾವರ್ಧಕ ಸಂಘದಲ್ಲಿ ಇನ್ನೊಂದು ಬಗೆಯ ತಯಾರಿ. ಅವರಿದ್ದಾಗಲೇ ಸ್ಥಾಪಿಸಿದ್ದ ಪುತ್ಥಳಿಯ ಮುಂದೆಯೇ ಪ್ರತಿಮೆಯಂತೆ ನಿಶ್ಚಲವಾಗಿ ಪಾಪು ಮಲಗಿದ್ದರು. ಬಂದವರೆಲ್ಲ ಕೈಮುಗಿದರು. ಕಣ್ತುಂಬಿಕೊಂಡರು. ಯಾರ ಮಾತೂ ಕೇಳದಂತೆ ಹಟ ಹಿಡಿದ ಕಂಬನಿ ಕೆನ್ನೆಯಿಂದುರುಳಿದವು. 

ಯಾವಾಗಲೂ ನಗೆಯಲ್ಲಿಯೇ ಒಂದಾಗುತ್ತಿದ್ದ ಚೆಂಬೆಳಕಿನ ಕವಿ ಚೆನ್ನವೀರ ಕಣವಿಯವರ ಕಂಗಳಲ್ಲೂ ವಿದಾಯದ ನೋವು. ಗುರುಲಿಂಗ ಕಾಪ್ಸೆಯವರ ಕಣ್ಣಲ್ಲೂ ಕೊನೆಯ ನಮನದ ವಿಷಾದ. ಯಾರೆಷ್ಟೆ ತಡೆದರೂ ವಿದ್ಯಾವರ್ಧಕ ಸಂಘದ ತುಂಬೆಲ್ಲ ಅವರ ಚೇತನದ ಉಸಿರು ಗಾಳಿಯಾಗಿ ಹರಿದಾಡಿದಂತೆ. ತಮ್ಮ ಕೊನೆಯ ಭೇಟಿಯ ನಂತರ ತಮ್ಮೂರು ಹಲಗೇರಿಯ ಭೂಮಿಯ ಮಡಿಲಲ್ಲಿ ಆಡಿ, ಹೋರಾಡಿ ಬಂದ ಮಗು ಶಾಂತವಾಗಿ ಮಲಗುವಂತೆ ಮಲಗಲು ಹೊರಟೇಬಿಟ್ಟರು. ಬೆಳಗಿನ 9ರಿಂದ ಸಂಜೆ 6.50ರವರೆಗಿನ ಈ ಯಾತ್ರೆಯಲ್ಲಿ ದೇಹ ನಿಶ್ಚೇತನವಾಯಿತು. ಚೇತನ ಧೀಶಕ್ತಿಯಾಗಿ ಅವರ ಹೋರಾಟದ ನೆನಪುಗಳಲ್ಲಿ ಪ್ರಜ್ವಲಿಸಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು