ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್‌ನಲ್ಲಿ ನಿರ್ಮಾಣ: 28ಕ್ಕೆ ಉದ್ಟಾಟನೆ

Last Updated 25 ಜನವರಿ 2023, 7:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಕೆಎಲ್‌ಇ ಸಂಸ್ಥೆಯ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಆವರಣದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಹೆಸರಿಡಲಾಗಿದ್ದು, 2 ಬ್ಯಾಡ್ಮಿಂಟನ್‌, 2 ಸ್ಕ್ವಾಷ್, 3 ಟೇಬಲ್ ಟೆನಿಸ್‌, ಬ್ಯಾಸ್ಕೆಟ್‌ಬಾಲ್‌ ಮತ್ತು ವಾಲಿವಾಬ್‌ ಅಂಕಣಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಯಾವುದೇ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನು ಆಯೋಜನೆ ಮಾಡಲು ಬೇಕಾದ ಸೌಲಭ್ಯಗಳು ಇಲ್ಲಿವೆ.

‘ಕ್ರೀಡಾಂಗಣದ ಹೊರಭಾಗದ ಗೋಡೆಗಳಿಗೆ ಜಿಂಕ್ ಮೆಟಲ್‌ ಸ್ಲೈಡಿಂಗ್‌ ಅಳವಡಿಸಲಾಗಿದೆ. ಇದರಿಂದ ಒಳಭಾಗ ಯಾವಾಗಲೂ ತಂಪಾಗಿರುತ್ತದೆ. ಯುರೋಪ್‌ ಮತ್ತು ಜರ್ಮನಿಗಳಲ್ಲಿ ಈ ತಂತ್ರಜ್ಞಾನ ಅಳವಡಿಸಲಾ
ಗುತ್ತದೆ’ ಎಂದು ಕ್ರೀಡಾಂಗಣದ ಕುರಿತು ವಾಸ್ತುಶಿಲ್ಪಿ ಪ್ರವೀಣ ಬಾವಡೆಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರು ಕಡೆ ಪ್ರವೇಶ ದ್ವಾರ ಇರುವುದರಿಂದ ಗಾಳಿ, ಬೆಳಕು ಸರಾಗವಾಗಿ ಬರುತ್ತದೆ. ಚಾವಣಿ ಮತ್ತು ಹೊರಭಾಗದಲ್ಲಿ ಹುಲ್ಲುಹಾಸು ಹಾಕಲಾಗಿದೆ. ಇದು ಕ್ರೀಡಾಂಗಣದ ಅಂದ ಹೆಚ್ಚಿಸಿದೆ’ ಎಂದರು.

ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಂ. ಕುರಗೋಡಿ ಮಾಹಿತಿ ನೀಡಿ, ‘ಉತ್ತರ ಕರ್ನಾಟಕ ಭಾಗದಲ್ಲಿ ಇಷ್ಟು ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಯಾವ ಖಾಸಗಿ ಕಾಲೇಜು ಮತ್ತು ವಿ.ವಿ.ಗಳಲ್ಲೂ ಇಲ್ಲ’ ಎಂದು ತಿಳಿಸಿದರು.

‘ವಿ.ವಿ.ಯಲ್ಲಿ ಹಿಂದೆ ಇದ್ದ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ಮಾತ್ರ ಆಯೋಜಿಸಲು ಸಾಧ್ಯವಿತ್ತು. ಈ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನು ಆಯೋಜಿಸಬಹುದು. ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಇದು ಸಹಕಾರಿಯಾಗಿದೆ’ ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜ. 28ರಂದು ಕ್ರೀಡಾಂಗಣ ಉದ್ಘಾಟನೆ ಮಾಡಲಿದ್ದಾರೆ.

‘1,200 ಆಸನ ವ್ಯವಸ್ಥೆ’

‘42,200 ಚದರ ಅಡಿ ವಿಸ್ತೀರ್ಣದಲ್ಲಿ ₹25 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದ್ದು, 1,200 ಆಸನಗಳ ವ್ಯವಸ್ಥೆ ಇದೆ. ಘಟಿಕೋತ್ಸವದ ಸಂದರ್ಭದಲ್ಲಿ ಇದನ್ನು ಸಭಾಂಗಣದ ರೀತಿ ಬಳಸಬಹುದಾಗಿದ್ದು, 4500 ಜನ ಕುಳಿತುಕೊಳ್ಳಬಹುದು’ ಎಂದು ಕ್ರೀಡಾಂಗಣದ ಕುರಿತು ವಾಸ್ತುಶಿಲ್ಪಿ ಪ್ರವೀಣ ಬಾವಡೆಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಜಿಮ್‌, ಡ್ರೆಸ್ಸಿಂಗ್‌ ಕೊಠಡಿ, ಶೌಚಾಲಯ ಸೌಲಭ್ಯ ಇದೆ. ಮಹಿಳೆಯರಿಗೆ ಜುಂಬಾ, ಯೋಗ, ಕಾರ್ಡಿಯೊ ವರ್ಕೌಟ್‌ಗೆ ವ್ಯವಸ್ಥೆ ಇದ್ದು, ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT