ಶನಿವಾರ, ಮಾರ್ಚ್ 28, 2020
19 °C

ಯೋಗೇಶಗೌಡ ಕೊಲೆ: ಸಿಬಿಐ ತನಿಖೆ ಅಭಾದಿತ, ಹೈಕೋರ್ಟ್‌ ತಡೆಯಾಜ್ಞೆಗೆ ‘ಸುಪ್ರೀಂ’ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೇಶಗೌಡ ಗೌಡ ಕೊಲೆ ಪ್ರಕರಣದ ಸಿಬಿಐ ತನಿಖೆಯನ್ನು ಅಮಾನತಿನಲ್ಲಿರಿಸಿ ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ತಡೆ ನೀಡಿದೆ.

2016ರ ಜನವರಿ 15ರಂದು ನಡೆದಿದ್ದ ಯೋಗೇಶಗೌಡ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಕಳೆದ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರ ನೀಡಿದ್ದ ಆದೇಶದ ಸಿಂಧುತ್ವ ಪ್ರಶ್ನಿಸಿ ಆರೋಪಿ ಬಸವರಾಜ ಮುತಗಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಧಾರವಾಡ ಪೀಠ ಕಳೆದ ನವೆಂಬರ್‌ 21ರಂದು ತನಿಖೆಗೆ ತಡೆ  ನೀಡಿತ್ತು.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತಾ ಹಾಗೂ ಅನಿರುದ್ಧ ಬೋಸ್‌ ಅವರಿದ್ದ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶೇ 60ರಷ್ಟು ತನಿಖೆ ಕೈಗೊಂಡಿರುವ ಸಿಬಿಐ, ತನಿಖೆ ಪೂರ್ಣಗೊಳಿಸಲಿ ಎಂದು ಅಭಿಪ್ರಾಯಪಟ್ಟಿತು.

ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಆರೋಪಿ ಮುತಗಿ ಅವರಿಗೆ ಪೀಠವು ನೋಟಿಸ್‌ ಜಾರಿ ಮಾಡಿತು.

ಸಿಬಿಐ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹಾಗೂ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ. ನಟರಾಜ್‌, ತನಿಖೆಗೆ ತಡೆ ನೀಡಿದ್ದ ಹೈಕೋರ್ಟ್‌ ಆದೇಶದ ಸಿಂಧುತ್ವ ಪ್ರಶ್ನಿಸಿದರು.

ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿರುವುದು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಮತ್ತು ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ಆತಂಕಕ್ಕೆ ಕಾರಣವಾಗಿದೆ.

ವಿನಯ್‌ ಕುಲಕರ್ಣಿ ಅವರು ಆರೋಪಿಗಳ ವಿರುದ್ಧ ಸಾಕ್ಷ್ಯ ನುಡಿಯದಂತೆ ಕೆಲವರಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿ ಮೃತ ಯೋಗೇಶ ಗೌಡ ಅವರ ಸೋದರ ಗುರುನಾಥ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಈ ಬಗ್ಗೆ ಹೊಸದಾಗಿ ವಿಚಾರಣೆ ನಡೆಸುವಂತೆ ಅಧೀನ ನ್ಯಾಯಾಲಯಕ್ಕೆ ಸೂಚಿಸಿತ್ತು.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಯೋಗೇಶಗೌಡ ಅವರ ತಾಯಿ ತುಂಗಮ್ಮ ಗೌಡರ್‌ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು 2019ರ ಜುಲೈನಲ್ಲಿ ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ಆದರೆ, ತನಿಖೆಯನ್ನು ಸಿಬಿಐಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು.

ಕೊಲೆ ಪ್ರಕರಣದಲ್ಲಿ ಸಚಿವ ವಿನಯ್‌ ಕುಲಕರ್ಣಿ ಅವರ ಭಾಗಿಯಾಗಿದ್ದಾರೆ. ಘಟನೆ ನಡೆದ ಸಂದರ್ಭ ಒಂದು ಕಪ್ಪು ಹುಂಡೈ ಕಾರು ಕೆಸಿಡಿ ವೃತ್ತದಿಂದ ಸಪ್ತಾಪುರದವರೆಗೆ ಸಂಶಯಾಸ್ಪದವಾಗಿ ಸುತ್ತಾಡಿತ್ತು. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸುತ್ತಿಲ್ಲ. ಅಲ್ಲದೆ, ‘ಇದು ಆಸ್ತಿ ವಿವಾದಕ್ಕೆ ಸಂಬಂಧಿಸಿದ ಕೃತ್ಯ’ ಎಂದು  ಕೊಲೆ ನಡೆದ ಒಂದು ಗಂಟೆಯೊಳಗೆ ಆಗಿನ ಗೃಹ ಸಚಿವರು ಹೇಳಿಕೆ ನೀಡಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ತುಂಗಮ್ಮ ದೂರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು