ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಶ್ವಾಪುರದಲ್ಲಿ ಎಕರೆಗೆ ಬರೀ ಐದು ಲಕ್ಷ!:ಮೂರುಸಾವಿರ ಮಠದ ಎರಡು ಎಕರೆ ಜಮೀನು ಮಾರಾಟ

Last Updated 19 ಅಕ್ಟೋಬರ್ 2012, 5:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಠದ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರದ ಸಲುವಾಗಿ ತುರ್ತು ಹಣ ಹೊಂದಿಸುವ ಕಾರಣ ನೀಡಿ ಮೂರುಸಾವಿರ ಮಠಕ್ಕೆ ಸೇರಿದ ಇಲ್ಲಿನ ಕೇಶ್ವಾಪುರದಲ್ಲಿನ ಎರಡು ಎಕರೆ ಜಮೀನನ್ನು ಕಳೆದ ತಿಂಗಳ 27ರಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಎನ್.ಎಚ್. ಮಲ್ಲಿಕಾರ್ಜುನಪ್ಪ ಎಂಬುವವರಿಗೆ ಮಾರಾಟ ಮಾಡಲಾಗಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ ಕೇಶ್ವಾಪುರದ ಸರ್ವೆ ನಂ 58/2ರಲ್ಲಿ ಮಠಕ್ಕೆ ಸೇರಿದ 8.24 ಎಕರೆ ಜಮೀನು ಇದ್ದು, ಅದರಲ್ಲಿ ಎರಡು ಎಕರೆ ಭೂಮಿಯನ್ನು ಎಕರೆಗೆ ಐದು ಲಕ್ಷ ರೂಪಾಯಿಯಂತೆ ಮಠದ ಪೀಠಾಧಿಪತಿ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹುಬ್ಬಳ್ಳಿ ಉಪ ನೋಂದಣಿ ಅಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಟ್ಟಿದ್ದಾರೆ.

ಜಮೀನು ಖರೀದಿ ವ್ಯವಹಾರದ ನಂತರ ಮಲ್ಲಿಕಾರ್ಜುನಪ್ಪ ಶಿಕಾರಿಪುರದ ಕಾರ್ಪೊರೇಶನ್ ಬ್ಯಾಂಕಿನ ಶಾಖೆಯಿಂದ ಪಡೆದ ತಲಾ ಐದು ಲಕ್ಷದ ಎರಡು ಡಿ.ಡಿಗಳ ಮೂಲಕ (ಡಿಡಿ ಸಂಖ್ಯೆ-680733  ಹಾಗೂ 680734; ದಿ. 26-09-2012) ಸ್ವಾಮೀಜಿ ಅವರಿಗೆ ಹಣ ಸಂದಾಯ  ಮಾಡಿದ್ದಾರೆ.

ಮಲ್ಲಿಕಾರ್ಜುನಪ್ಪ ಮೂಲತಃ ಕೃಷಿಕರು ಎಂದು ತೋರಿಸಲಾಗಿದ್ದು, ಅವರ ಹಾಲಿ ವಾಸಸ್ಥಳ ಹುಬ್ಬಳ್ಳಿಯೇ ಎಂದು ಖರೀದಿ ಪತ್ರದಲ್ಲಿ ನಮೂದಿಸಲಾಗಿದೆ. ಕೇಶ್ವಾಪುರ ಪ್ರದೇಶದಲ್ಲಿ ಸರ್ಕಾರ ನಿಗದಿಗೊಳಿದ ಬೆಲೆ ಯಲ್ಲಿಯೇ ಜಮೀನು ಮಾರಾಟ ಮಾಡ ಲಾಗಿದ್ದು, ಮಾರಾಟದ ಉದ್ದೇಶವನ್ನು ಪತ್ರದಲ್ಲಿ ದಾಖಲಿಸಲಾಗಿದೆ.

ಸದರಿ ಜಮೀನು ಒಣ ಭೂಮಿಯಾಗಿದ್ದು, ಮಳೆಯಾಶ್ರಿತವಾಗಿದೆ. ಈಗ ಅಲ್ಲಿ ಯಾವುದೇ ಬೆಳೆ ಬೆಳೆಯುತ್ತಿಲ್ಲ ಎಂದು ತಿಳಿಸಲಾಗಿದೆ.  ಮುಂದಿನ ದಿನಗಳಲ್ಲಿ ಸದರಿ ಜಮೀನನ ಮಾಲೀಕತ್ವದ ಬಗ್ಗೆ ಯಾರಾದರೂ ತಂಟೆ-ತಕರಾರು ಮಾಡಿದಲ್ಲಿ ಮಠದ ಸ್ವಂತ ಖರ್ಚಿನಲ್ಲಿ ಪರಿಹರಿಸಿ, ಖರೀದಿ ಮಾಡಿದವರಿಗೆ ಆದ ನಷ್ಟವನ್ನು ತುಂಬಿಕೊಡಲಾಗುವುದು ಎಂದು ಮಾರಾಟ ಪತ್ರದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಜಮೀನಿನ ಬೆಲೆ ಅನ್ವಯ ಮಲ್ಲಿಕಾರ್ಜುನಪ್ಪ 56,500 ರೂಪಾಯಿ ಮುದ್ರಾಂಕ ಶುಲ್ಕವನ್ನು ತುಂಬಿದ್ದಾರೆ.

ಕಪ್ಪು ಮಣ್ಣಿನ ಭೂಮಿ: ಕೇಶ್ವಾಪುರದ ನವೀನ ಪಾರ್ಕ್, ನೈರುತ್ಯ ರೈಲ್ವೆ ಕ್ವಾಟ್ರಸ್, ಡಿಡಿಎಂ ಚರ್ಚ್, ಬಸವಾಪುರ ಲೇಔಟ್‌ನಿಂದ ಸುತ್ತುವರಿ ದಿರುವ ಜಾಗದಲ್ಲಿ ಪ್ರಸ್ತುತ ಹತ್ತಿ ಬಿತ್ತನೆ ಮಾಡ ಲಾಗಿದೆ. ಹುಬ್ಬಳ್ಳಿಯ ಸೋಮಣ್ಣ ಕುರಹಟ್ಟಿ ಎಂಬುವವರು ಜಮೀನನ್ನು ನೋಡಿ ಕೊಳ್ಳುತ್ತಿದ್ದಾರೆ.  ಜಮೀನು ಮಾರಾಟ ಆಗಿರುವ ಬಗ್ಗೆ ತಮಗೂ ಮಾಹಿತಿ ಇಲ್ಲ ಎಂದು ತಿಳಿಸಿದರು.

`ಉನ್ನತಾಧಿಕಾರ ಸಮಿತಿ ಕೇಳಿ:~ ಕೇಶ್ವಾಪುರದ ಜಮೀನು ಮಾರಾಟದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಗುರುವಾರ ಸಂಪರ್ಕಿಸಿ ದಾಗ `ನಾವು ಫೋನಿನಲ್ಲಿ ಮಾತ ನಾಡುವುದಿಲ್ಲ. ಮಠಕ್ಕೆ ಬನ್ನಿ ಮಾತನಾಡೋಣ~ ಎಂದು ಕರೆದರು. ಮಠಕ್ಕೆ ಹೋದಾಗ, `ಜಮೀನು ಮಾರಾಟ ಸೇರಿದಂತೆ ಯಾವುದೇ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ. ನೀವು ಮಠದ ಉನ್ನತಾಧಿಕಾರ ಸಮಿತಿಯವರನ್ನು  ಕೇಳಿ~ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿ ಕರೆದು ಉತ್ತರಿಸುವೆ
ಕೇಶ್ವಾಪುರದ ಜಮೀನು ಮಾರಾಟದ ಬಗ್ಗೆ ನಾನು ಏನೂ ಹೇಳಲು ಬಯಸುವುದಿಲ್ಲ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರೊಂದಿಗೆ ಸೇರಿ ಶೀಘ್ರ ಪತ್ರಿಕಾಗೋಷ್ಠಿ ಕರೆದು ಎಲ್ಲಾ ಗೊಂದಲಗಳಿಗೂ ಉತ್ತರಿಸುತ್ತೇನೆ.
-ಶಾಸಕ ಮೋಹನ ಲಿಂಬಿಕಾಯಿ, ಮೂರುಸಾವಿರ ಮಠ ಉನ್ನತಾಧಿಕಾರ ಸಮಿತಿ ಅಧ್ಯಕ್ಷ

ಸಮಿತಿ ಗಮನಕ್ಕೆ ಬಂದಿಲ್ಲ...

ಮಠಕ್ಕೆ ಸೇರಿದ ಕೇಶ್ವಾಪುರದ ಜಮೀನು ಮಾರಾಟ ನನ್ನ ಗಮನಕ್ಕೆ ಬಂದಿಲ್ಲ. ನಾನು ಮಠದ ಉನ್ನತಾಧಿಕಾರ ಸಮಿತಿ ಸದಸ್ಯನಾದರೂ ವಿಚಾರವೇ ತಿಳಿದಿಲ್ಲ. ಕೇವಲ 10 ಲಕ್ಷ ರೂಪಾಯಿಗೆ ಜಮೀನು ಮಾರಾಟ ಮಾಡಿರುವುದು ಅಚ್ಚರಿ ಎನಿಸಿದೆ. ಮಾರಾಟದ ಬಗ್ಗೆ ಚರ್ಚಿಸಲು ಮಠದ ಉನ್ನತ ಸಮಿತಿಯ ಸಭೆ ಕರೆದು ಒಪ್ಪಿಗೆ ಪಡೆದಿಲ್ಲ. ಈ ಬಗ್ಗೆ ಸಮಿತಿಯ ಅಧ್ಯಕ್ಷ ಮೋಹನ ಲಿಂಬಿಕಾಯಿ ಅವರನ್ನು ಕೇಳಿ ಖಚಿತಪಡಿಸಿಕೊಂಡು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತೇನೆ.
-ಶಾಸಕ ಬಸವರಾಜ ಹೊರಟ್ಟಿ, ಮಠದ ಉನ್ನತಾಧಿಕಾರಿ ಸಮಿತಿ ಸದಸ್ಯರು

ಮಾರಾಟ ಅನುಮಾನ ಮೂಡಿಸಿದೆ...
ಮಠದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲವೆನ್ನುತ್ತಾರೆ. ಕೇಶ್ವಾಪುರದ ಜಮೀನನ್ನು ಮಾರುಕಟ್ಟೆ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದು ಅಚ್ಚರಿ ಮೂಡಿಸಿದೆ.  ಆ ಪ್ರದೇಶದಲ್ಲಿ ಮಾರುಕಟ್ಟೆ ಬೆಲೆ ಎಕರೆಗೆ ಕನಿಷ್ಠ 80 ಲಕ್ಷದಿಂದ ಒಂದು ಕೋಟಿ ರೂಪಾಯಿವರೆಗೆ ಇದ್ದು, ಮಠದ ಜೀರ್ಣೋದ್ಧಾರದ ಕಾರಣ ನೀಡಿ ಅಷ್ಟು ಕಡಿಮೆ ಮೊತ್ತಕ್ಕೆ ಆಸ್ತಿ ಮಾರಾಟ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. 

ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸ ಲಾಗಿದೆ. ಮಠಕ್ಕೆ ಕರೆಸಿದಾಗ ಕೇಶ್ವಾಪುರದ ಜಮೀನು ಮಾರಾಟ ಆಗಿಲ್ಲ ಎಂದು ಹೇಳಿದ್ದರು. ಈಗ ಆಸ್ತಿ ಮಾರಾಟ ಮಾಡಿದ್ದಾರೆ.
 -ಮಹಾಂತೇಶ ಗಿರಿಮಠ, ವಿಶ್ವಹಿಂದೂ ಪರಿಷತ್ ನಗರ ಜಂಟಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT