ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜೀವನ ಶಿಕ್ಷಣ ಮಾಸಿಕ ಪತ್ರಿಕೆಗೆ ಶಾಶ್ವತ ಅನುದಾನ'

Last Updated 15 ಜುಲೈ 2013, 4:19 IST
ಅಕ್ಷರ ಗಾತ್ರ

ಧಾರವಾಡ: `ಕಳೆದ 148 ವರ್ಷಗಳಿಂದ ಪ್ರಾಥಮಿಕ ಶಿಕ್ಷಣ ಸಂವರ್ಧನೆಗೆ ನಿರಂತರ ಶ್ರಮಿಸುತ್ತಿರುವ ಕನ್ನಡ ಪತ್ರಿಕೋದ್ಯಮದ ಹಿರಿಯ ನಿಯತಕಾಲಿಕೆ ಜೀವನ ಶಿಕ್ಷಣ ಶೈಕ್ಷಣಿಕ ಮಾಸಪತ್ರಿಕೆಯ ಪ್ರಕಟಣಾ ವೆಚ್ಚಕ್ಕಾಗಿ ಸರ್ಕಾರದಿಂದ ಶಾಶ್ವತ ಅನುದಾನ ನೀಡಲಾಗುವುದು' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಭರವಸೆ ನೀಡಿದರು.

ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಆವರಣದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿಯಲ್ಲಿ ಈಚೆಗೆ ನಡೆದ ಜಿಲ್ಲೆಯ ಶಿಕ್ಷಣ ಇಲಾಖೆಯ ಹಾಗೂ ಡಯಟ್ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಮತ್ತು ಸಾಹಿತಿ ಮೋಹನ ನಾಗಮ್ಮನವರ ಅವರು, ಜೀವನ ಶಿಕ್ಷಣ ಶೈಕ್ಷಣಿಕ ಮಾಸಪತ್ರಿಕೆಗೆ ವಾರ್ಷಿಕ 25 ಲಕ್ಷ ರೂಪಾಯಿಗಳ ಶಾಶ್ವತ ಅನುದಾನವನ್ನು ಸರ್ಕಾರ  ನೀಡಬೇಕೆಂದು ಒತ್ತಾಯಿಸಿ ಸಚಿವರಿಗೆ ಸಲ್ಲಿಸಿದ ಪ್ರತ್ಯೇಕ ಮನವಿಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

`ಇತ್ತೀಚಿನ ವರ್ಷಗಳಲ್ಲಿ ಆರಂಭವಾಗಿರುವ ಶಿಕ್ಷಣ ವಾರ್ತೆ ಶೈಕ್ಷಣಿಕ ಮಾಸಪತ್ರಿಕೆಗೆ ರಾಜ್ಯ ಸರ್ಕಾರದ ಲೆಕ್ಕ ಶೀರ್ಷಿಕೆಯಿಂದಲೇ ವಾರ್ಷಿಕವಾಗಿ ಅನುದಾನ ಒದಗಿಸಲಾಗುತ್ತಿದ್ದು, ಕಳೆದ 148 ವರ್ಷಗಳಿಂದ ಶಿಕ್ಷಕರ ಸಹಕಾರದೊಂದಿಗೆ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಕನ್ನಡ ನಾಡಿನ ಇತಿಹಾಸದ ಭಾಗವೇ ಆಗಿರುವ  ಜೀವನ ಶಿಕ್ಷಣ ಶೈಕ್ಷಣಿಕ ಮಾಸಪತ್ರಿಕೆಗೆ ವಿಳಂಬವಿಲ್ಲದೇ ಸರ್ಕಾರ ಶಾಶ್ವತವಾಗಿ ಪ್ರತಿ  ವರ್ಷವೂ ಪತ್ರಿಕೆಯ ಪ್ರಕಟಣಾ ವೆಚ್ಚಕ್ಕೆ ಅನುದಾನ ನೀಡಲೇಬೇಕೆಂದು' ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಮತ್ತು ಸಾಹಿತಿ ಮೋಹನ ನಾಗಮ್ಮನವರ ಸಚಿವರ ಗಮನಸೆಳೆದರು.

ತಕ್ಷಣ ಸಚಿವರು ಇಲಾಖೆಯ ಅಧಿಕಾರಿಗಳಿಂದ ಈ ಕುರಿತು ಮಾಹಿತಿ ಪಡೆದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಎ.ಎನ್. ಪಾಟೀಲ ಅವರು, ಜೀವನ ಶಿಕ್ಷಣ ಶೈಕ್ಷಣಿಕ ಮಾಸಪತ್ರಿಕೆಯನ್ನು ಪ್ರಸ್ತುತ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ 9 ಶೈಕ್ಷಣಿಕ ಜಿಲ್ಲೆಗಳ ಪ್ರತಿಯೊಂದೂ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಅಂಚೆ ಮೂಲಕ ಒಟ್ಟು 12 ಸಾವಿರ ಪ್ರತಿಗಳನ್ನು ಕಳಿಸಲಾಗುತ್ತಿದ್ದು, ಶಿಕ್ಷಕರ ವರ್ಗ ಬೋಧನೆಗೆ ಪೂರಕವಾಗಬಲ್ಲ ಎಲ್ಲ ಉಪಯುಕ್ತ ಮಾಹಿತಿಗಳನ್ನು ಪತ್ರಿಕೆ ಒಳಗೊಂಡಿದೆ. ಈಗ ಪತ್ರಿಕೆಯನ್ನು ಸಂಪೂರ್ಣ ವೆಬ್ ಆಫ್‌ಸೆಟ್ ತಂತ್ರಜ್ಞಾನಕ್ಕೆ ಅಳವಡಿಸಿ ಬಹುವರ್ಣ ಮುದ್ರಣದಲ್ಲಿ ಹೊರತರಲಾಗುತ್ತಿದೆ. ಇಂದಿನ ದುಬಾರಿ ಮುದ್ರಣ ವೆಚ್ಚವನ್ನು ಭರಿಸುವುದು ಕಷ್ಟವಾಗುತ್ತಿದ್ದು, ವಾರ್ಷಿಕವಾಗಿ ಅನುದಾನದ ಅಗತ್ಯವಿರುವುದನ್ನು ಸಚಿವರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಜಿ.ಎಸ್.ನಾಯ್ಕ, ಸಹ ನಿರ್ದೇಶಕ ಸಿದ್ಧರಾಮ ಮನಹಳ್ಳಿ ಹಾಗೂ ಡಯಟ್ ಪ್ರಾಚಾರ್ಯ ಎಚ್.ಎನ್.ಗೋಪಾಲಕೃಷ್ಣ ಅವರು, ಪತ್ರಿಕೆಯ ಮಹತ್ವ, ಅದರ ಚರಿತ್ರಾರ್ಹ ಸಾಧನೆ, ಪ್ರಕಟಣಾ ವೆಚ್ಚಕ್ಕಿರುವ ಆರ್ಥಿಕ ಸಮಸ್ಯೆ ಮುಂತಾದ ವಿಷಯಗಳ ಬಗ್ಗೆ ಶಿಕ್ಷಣ ಸಚಿವರಿಗೆ ಅಂಕಿ-ಅಂಶಗಳೊಂದಿಗೆ ವಿವರಿಸಿ, ವಾರ್ಷಿಕ ಅನುದಾನದ ಅಗತ್ಯತೆಯನ್ನು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT