ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಕ್ಕನ್ ಟಾಕೀಸ್ ಜಾಗದಲ್ಲಿ ಮಾಲ್

Last Updated 22 ಅಕ್ಟೋಬರ್ 2012, 6:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಮರಾಠಾ ಗಲ್ಲಿಯಲ್ಲಿ ಕಳೆದ ಮೇ 11ರಂದು ಸ್ಥಗಿತಗೊಂಡ ಡೆಕ್ಕನ್ ಟಾಕೀಸ್ ಜಾಗದಲ್ಲಿ ಸುಖಸಾಗರ ಮಾಲ್ ತಲೆ ಎತ್ತಲಿದೆ.

`ಮಾಲ್ ನಿರ್ಮಾಣಕ್ಕೆ ಸಿದ್ಧತೆಗಳು ಆರಂಭವಾಗಿವೆ. ಈಗಾಗಲೇ ಚಿತ್ರಮಂದಿರದ ಕಟ್ಟಡವನ್ನು ಕೆಡುವುವ ಕಾರ್ಯ ಆರಂಭವಾಗಿದೆ. ಡೆಕ್ಕನ್ ಚಿತ್ರಮಂದಿರ ಚಿಕ್ಕದಾಗಿದ್ದ ಕಾರಣ ಸ್ಥಳಾವಕಾಶ ಕಡಿಮೆ ಇದೆ. ಇರುವ ಸ್ಥಳವನ್ನು ಬಳಸಿಕೊಂಡು ಕೇವಲ 7,000 ಚ. ಅಡಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ~ ಎಂದು ಡೆಕ್ಕನ್ ಟಾಕೀಸ್ ಮಾಲೀಕ ಅರುಣ್ ಚೌಧರಿ `ಪ್ರಜಾವಾಣಿ~ಗೆ ತಿಳಿಸಿದರು.

`ಈ ಕಟ್ಟಡದಲ್ಲಿ ಒಟ್ಟು ನಾಲ್ಕು ಅಂತಸ್ತುಗಳು ಇರುತ್ತವೆ. ಇಡೀ ಕಟ್ಟಡ ಹವಾನಿಯಂತ್ರಿತವಾಗಲಿದೆ. ಕೆಳ ಅಂತಸ್ತಿನಲ್ಲಿ ಗೇಮ್ ಜೋನ್, ಎರಡು ಮಲ್ಟಿಪ್ಲೆಕ್ಸ್‌ಗಳು, ಸಣ್ಣ ಸಣ್ಣದಾಗಿರುವ 300 ಮಳಿಗೆಗಳನ್ನು ನಿರ್ಮಿಸಲಾಗುತ್ತದೆ. ಎಸ್ಕಲೇಟರ್ ಸೌಲಭ್ಯವಿರುತ್ತದೆ~ ಎಂದು ಅವರು ವಿವರಿಸಿದರು.

`ಮಾಲ್‌ನಲ್ಲಿ ಮಲ್ಟಿಪ್ಲೆಕ್ಸ್‌ಗಳು ಇರುತ್ತವೆ. ಹಾಗಾಗಿ ಡೆಕ್ಕನ್ ಟಾಕೀಸ್ ನಿಂತು ಹೋದ ಕೊರಗು ನಿವಾರಣೆಯಾಗಲಿದೆ. ಮಾಲ್ ನಿರ್ಮಾಣಕ್ಕೆ ಸುಮಾರು ಎಂಟು ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಹೊಸ ಕಟ್ಟಡ ನಿರ್ಮಾಣ ಜನವರಿಯಲ್ಲಿ ಶುರುವಾಗಲಿದೆ. 2015ರ ವೇಳೆಗೆ ಹೈಟೆಕ್ ಮಾಲ್ ಸಾರ್ವಜನಿಕರಿಗೆ ಮುಕ್ತವಾಗಲಿದೆ~ ಎಂದು ಅವರು ತಿಳಿಸಿದರು.

ಇತಿಹಾಸ: 1914ರಲ್ಲಿ ಆರಂಭಗೊಂಡಿದ್ದ ಡೆಕ್ಕನ್ ಟಾಕೀಸ್ ಅವಳಿನಗರದ ಅತ್ಯಂತ ಹಳೆಯ ಟಾಕೀಸ್. ಮುಂಬೈ ಕರ್ನಾಟಕದ ಮೊದಲ ಟಾಕೀಸ್ ಎಂದೂ ಪರಿಗಣಿಸಲಾಗಿತ್ತು. ಪುಣೆಯ ಡೆಕ್ಕನ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಯ ಸಹಯೋಗದಲ್ಲಿ ಡಾಕಪ್ಪ ಗೊಂಡಕರ ಈ ಟಾಕೀಸ್ ಆರಂಭಿಸಿದ್ದರು. ಭಾರತೀಯ ಸಿನಿಮಾದ ಪ್ರಸಿದ್ಧ ನಿರ್ದೇಶಕ ವಿ. ಶಾಂತಾರಾಮ್ ಗೇಟ್‌ಕೀಪರ್ ಆಗಿದ್ದ ಟಾಕೀಸ್ ಕೂಡಾ ಇದು.
 
ನಂತರ ಅವರು ಸಿನಿಮಾ ಪ್ರಚಾರಕರ್ತರಾಗಿ ದುಡಿದರು. ಈ ಕುರಿತು ತಮ್ಮ ಆತ್ಮಚರಿತ್ರೆಯಲ್ಲಿ ಶಾಂತಾರಾಮ್ ಉಲ್ಲೇಖಿಸಿದ್ದಾರೆ. `ಡೆಕ್ಕನ್ ಟಾಕೀಸ್‌ನಲ್ಲಿ ಕೆಲಸ ಮಾಡದಿದ್ದರೆ ಸಿನಿಮಾ ಉದ್ಯಮಕ್ಕೇ ಕಾಲಿಡುತ್ತಿರಲಿಲ್ಲ~ ಎಂದು ಸ್ಮರಿಸಿಕೊಂಡಿದ್ದಾರೆ.

`300 ಆಸನಗಳ ಡೆಕ್ಕನ್ ಟಾಕೀಸ್ ಉಳಿಸಿಕೊಳ್ಳಲು ಬಹಳ ಶ್ರಮ ವಹಿಸಿದರೂ ಟಾಕೀಸ್ ಕಡೆ ಜನರು ಬರದೇ ನಷ್ಟ ಹೆಚ್ಚಾಯಿತು. ಸಿಬ್ಬಂದಿಗೆ ಸಂಬಳ ಕೊಡಲೂ ಕಷ್ಟವಾಗುತ್ತಿತ್ತು. ಹೀಗಾಗಿ ಟಾಕೀಸ್ ಮುಚ್ಚಬೇಕಾಯಿತು. ಈಗ ಅದೇ ಜಾಗದಲ್ಲಿ ಮಾಲ್ ಕಟ್ಟುತ್ತೇವೆ. ಯೋಗೇಶ ಹಬೀಬ ಹಾಗೂ ಕಿರಣ್ ಹಬೀಬ ಅವರು ಪಾಲುದಾರರಾಗಿದ್ದಾರೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT