ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆ ಎತ್ತಲಿದೆ ಸಂಸ್ಕೃತಿ ಉತ್ಥಾನ ಕೇಂದ್ರ

Last Updated 13 ಜೂನ್ 2011, 6:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೇಶದಲ್ಲೇ ದೊಡ್ಡದಾದ ರಾಮಕೃಷ್ಣ ವಿವೇಕಾನಂದ ಆಶ್ರಮ ತಡಸ ಬಳಿ ಕಮಲಾನಗರದ 75 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದ್ದು, ಜೂನ್ 14ರಂದು ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಲಿದೆ. ದಟ್ಟ ಹಸಿರಿನ ಮಧ್ಯೆ ಕಂಗೊಳಿಸುವ ಆಶ್ರಮದ ಕೆಂಪು ಕಟ್ಟಡದ ನೀಲನಕ್ಷೆಯೇ ತುಂಬಾ ಅಪ್ಯಾಯಮಾನವಾಗಿದ್ದು, ಕಟ್ಟಡ ನನಸಾಗುವ ದಿನಕ್ಕಾಗಿ ಅದರ ಅನುಯಾಯಿಗಳು ಕಾತರದಿಂದ ಕಾದಿದ್ದಾರೆ.

ಮಂದಿರ, ಗುರುಕುಲ, ಆಸ್ಪತ್ರೆ ಹಾಗೂ ಗೋಶಾಲೆಗಳು ಈ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿದ್ದು, `ತೇಜಸ್ವಿಗಳಾದ, ಶ್ರದ್ಧಾ ಸಂಪನ್ನರಾದ ಮತ್ತು ನಿಷ್ಕಪಟಿ~ಗಳಾದ ಯುವಕರನ್ನು ತಯಾರು ಮಾಡುವ ಹೊಂಗನಸನ್ನು ಹೊತ್ತ ವಿವೇಕಾನಂದ ಮಾನವ ಪ್ರಾವೀಣ್ಯ ಸಂಸ್ಥೆ ಸಹ ಇಲ್ಲಿಯೇ ಗರಿಬಿಚ್ಚಲಿದೆ. ಆಶ್ರಮ ನಿರ್ಮಾಣಕ್ಕೆ ಒಟ್ಟಾರೆ ರೂ. 27.05 ಕೋಟಿ ಬೇಕಾಗಲಿದೆ ಎಂದು ಅಂದಾಜು ಮಾಡಲಾಗಿದೆ.

`ಯುವಕರಲ್ಲಿ ಶಾರೀರಿಕ ಶಕ್ತಿ, ಬೌದ್ಧಿಕ ಶಕ್ತಿ, ನೈತಿಕ ಶಕ್ತಿ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ತುಂಬುವಂತಹ ಕೇಂದ್ರ ಇದಾಗಲಿದ್ದು, ಭಾರತೀಯ ಸಂಸ್ಕೃತಿಯ ಉತ್ಥಾನ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ~ ಎಂದು ಹುಬ್ಬಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ರಘುವೀರಾನಂದ ಅಭಿಪ್ರಾಯಪಡುತ್ತಾರೆ.

`ಬೌದ್ಧಿಕ ಶಕ್ತಿಯ ವೃದ್ಧಿಗೆ ಅವಧಾನ, ಅಧ್ಯಯನ, ಆಲೋಚನೆ ಹಾಗೂ ಪ್ರಾರ್ಥನೆಯ ಮಂತ್ರವನ್ನು ಯುವಕರಿಗೆ ಹೇಳಿಕೊಡಲಾಗುತ್ತದೆ. ನೈತಿಕ ಶಕ್ತಿಯನ್ನು ತುಂಬಲು ವಿಶೇಷ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ~ ಎಂದು ಅವರು ವಿವರಿಸುತ್ತಾರೆ.

`ನಮ್ಮ ಪೂರ್ವಜರ ಶಿಕ್ಷಣ ಪದ್ಧತಿಯು ಇಡೀ ಸಮಾಜವನ್ನೇ ಮುನ್ನಡೆಸಬಲ್ಲಂತಹ ಅತ್ಯುನ್ನತ ವ್ಯಕ್ತಿಗಳನ್ನು ತಯಾರು ಮಾಡುತ್ತಿತ್ತು. ಅದೇ ಪದ್ಧತಿಯನ್ನು ಆಧರಿಸಿದ ಗುರುಕುಲವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಮಾಮೂಲಿ ಶಾಲೆಗಳಿಗಿಂತ ಇಲ್ಲಿಯ ಶಿಕ್ಷಣ ಪದ್ಧತಿ ಸಂಪೂರ್ಣ ಭಿನ್ನವಾಗಿರಲಿದ್ದು, ಬದುಕಿನ ಶಿಕ್ಷಣವನ್ನು ಈ ಗುರುಕುಲದಲ್ಲಿ ನೀಡಲು ಉದ್ದೇಶಿಸಲಾಗಿದೆ~ ಎಂದು ಸ್ವಾಮೀಜಿ ತಮ್ಮ ಕನಸುಗಳನ್ನು ಹಂಚಿಕೊಳ್ಳುತ್ತಾರೆ.

ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ಜೊತೆಗೆ ಸುತ್ತಲಿನ ಹಳ್ಳಿಗಳ ಜನರಿಗೆ ಆಸ್ಪತ್ರೆಯನ್ನೂ ತೆರೆಯುವ ಗುರಿಯನ್ನು ಹೊಂದಲಾಗಿದೆ. ಹಳ್ಳಿಗರ ಮನೆಬಾಗಿಲಿಗೇ ಆರೋಗ್ಯ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಸಂಚಾರಿ ಆಸ್ಪತ್ರೆ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಧ್ವನಿ-ತೆರೆಯ ಮೂಲಕ ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲೂ ಈ ವಾಹನವನ್ನು ಬಳಕೆ ಮಾಡಲಾಗುತ್ತದೆ.

`ಕಾಳಿಮಾತೆ, ರಾಮಕೃಷ್ಣ, ಶಾರದಾದೇವಿ, ಸ್ವಾಮಿ ವಿವೇಕಾನಂದರ ಭವ್ಯ ಮಂದಿರ ಈ ಕ್ಯಾಂಪಸ್‌ನಲ್ಲಿಯೇ ನಿರ್ಮಾಣಗೊಳ್ಳಲಿದೆ. ಸಾವಯವ ಕೃಷಿ ಪ್ರಾತ್ಯಕ್ಷಿಕೆಯನ್ನೂ ಆಶ್ರಮದ ಆವರಣದಲ್ಲಿ ನಡೆಸಿಕೊಡಲು ಗುರಿ ಹೊಂದಲಾಗಿದ್ದು, ಗೋಶಾಲೆಯನ್ನು ಕೂಡ ತೆರೆಯಲಾಗುತ್ತದೆ.
 
ವಿವಿಧ ತಳಿ ಗೋವುಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ಸಂಶೋಧನೆಯನ್ನು ಇಲ್ಲಿ ನಡೆಸಲಾಗುತ್ತದೆ~ ಎಂದು ಆಶ್ರಮದ ಮತ್ತೊಬ್ಬ ನೇತಾರರಾದ ಸ್ವಾಮಿ ನಚಿಕೇತಾನಂದ ಮಾಹಿತಿ ನೀಡುತ್ತಾರೆ.

ಕಮಲಾನಗರದ 75 ಎಕರೆ ಪ್ರದೇಶದಲ್ಲಿ ನೂರಾರು ಮರಗಳಿದ್ದು ಒಂದೇ ಒಂದು ಮರವನ್ನೂ ಕತ್ತರಿಸದೆ ಕಟ್ಟಡ ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಇದು ಸ್ವಾಮೀಜಿಗಳ ಪರಿಸರ ಕಾಳಜಿಯನ್ನೂ ತೋರಿಸುತ್ತದೆ. ಶಿಕ್ಷಕರೂ ಸೇರಿದಂತೆ ವಿವಿಧ ವೃತ್ತಿಯಲ್ಲಿರುವ ಉದ್ಯೋಗಿಗಳಿಗೆ ಇಲ್ಲಿಯ ಕೇಂದ್ರದಲ್ಲಿ ಉಚಿತವಾಗಿ ಪ್ರಾವೀಣ್ಯದ ಪಾಠಗಳನ್ನು ಮಾಡಲಾಗುತ್ತದೆ.

`ಯಾವುದೇ ಕ್ಷೇತ್ರದ ವ್ಯಕ್ತಿ ತನ್ನ ವೃತ್ತಿಯಲ್ಲಿ ಶ್ರೇಷ್ಠತೆಯನ್ನು ಸಾಧಿಸಬೇಕು. ಅದರ ಲಾಭ ಸಮಾಜಕ್ಕೆ, ತನ್ಮೂಲಕ ದೇಶಕ್ಕೆ ತಟ್ಟಬೇಕು~ ಎಂಬುದು ಸ್ವಾಮಿ ರಘುವೀರಾನಂದರ ಅಚಲ ನಂಬಿಕೆಯಾಗಿದೆ.

`ಜಿಡ್ಡುಗಟ್ಟಿದ ವ್ಯವಸ್ಥೆಯನ್ನೇ ಹೊಂದಿದ ಹತ್ತಾರು ಮಠ-ಮಾನ್ಯಗಳಿಗೆ ಕೋಟಿಗಟ್ಟಲೆ ಹಣ ಸುರಿಯುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇಂತಹ ಆಶ್ರಮಕ್ಕೆ ಧನ ಸಹಾಯ ಮಾಡಿದ್ದಾದರೆ ಅದರಿಂದ ರಾಜ್ಯಕ್ಕೆ ಸಾಕಷ್ಟು ಪ್ರಯೋಜನವಾಗಲಿದೆ~ ಎಂದು ಆಶ್ರಮದ ಅನುಯಾಯಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT