ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಸಾಹಿತ್ಯ ಸಮ್ಮೇಳನ: ಶೌಚಾಲಯವಿದೆ ನೀರಿಲ್ಲ!

84th kannada sahithya sammelana
Last Updated 4 ಜನವರಿ 2019, 12:39 IST
ಅಕ್ಷರ ಗಾತ್ರ

ಧಾರವಾಡ: ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಮಹಿಳೆಯರಿಗಾಗಿ ಆಯೋಜಕರು ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಿದ್ದಾರೆ. ಆದರೆ, ಇಲ್ಲಿ ನೀರಿನ ಸಮಸ್ಯೆ ಇದ್ದುದ್ದರಿಂದ ಬಹುತೇಕ ಮಹಿಳೆಯರು ಶೌಚಾಲಯ ಬಳಸಲು ಹಿಂಜರಿದರು.

‘ಸಮ್ಮೇಳನಕ್ಕೆ ಸಾವಿರಾರು ಮಹಿಳೆಯರು ಬರುತ್ತಾರೆ. ನಿಜ ಅವರಿಗೆಲ್ಲಾ ಶೌಚಾಲಯ ವ್ಯವಸ್ಥೆ ಮಾಡಲಾಗದು. ಹಾಗೆಂದು ಬರೀ ಏಳೆಂಟು ಶೌಚಾಲಯಗಳಷ್ಟೇ ಇದ್ದರೆ ಸಾಕೇ? ಇ ಟಾಯ್ಲೆಟ್ ಮಾದರಿಯಲ್ಲಿರುವ ಈ ಶೌಚಾಲಯಗಳಲ್ಲಿ ಕಮೋಡ್ ವ್ಯವಸ್ಥೆ ಇದೆ. ಫ್ಲಶ್ ಮಾಡಿದರೆ ನೀರೇ ಬರೋದಿಲ್ಲ. ದುರ್ವಾಸನೆ ಸಹಿಸಲಾಗಲಿಲ್ಲ. ಹಾಗಾಗಿ, ಶೌಚಾಲಯ ಬಳಸಲಿಲ್ಲ’ ಎಂದು ಗಂಗಾವತಿಯಿಂದ ಬಂದಿದ್ದ ರೇಖಾ.

‘ಇಷ್ಟು ಕಡಿಮೆ ಸಂಖ್ಯೆಯಲ್ಲಿ ಶೌಚಾಲಯಗಳಿರುವುದರಿಂದ ಮಹಿಳೆಯರು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಪುಟ್ಟ ಮಕ್ಕಳನ್ನು ಈ ಶೌಚಾಲಯದಲ್ಲಿ ಕೂಡಿಸಲಾಗದು. ನೀರಿನ ಸೌಕರ್ಯವೇ ಇಲ್ಲ. ಇದರಿಂದ ಬಹುಬೇಗ ಸೋಂಕು ತಗುಲುತ್ತದೆ’ ಎಂದು ವಿದ್ಯಾರ್ಥಿನಿ ಕಾವ್ಯಾ.

ಪುಸ್ತಕ ಮಳಿಗೆ ದಾರಿಯಲ್ಲಿ ನೂಕುನುಗ್ಗಲು
ಸಮ್ಮೇಳನದ ಪ್ರಧಾನ ವೇದಿಕೆಯಿಂದ ತುಸು ದೂರದಲ್ಲಿ ಹಾಕಲಾಗಿದ್ದ ಪುಸ್ತಕ ಮಳಿಗೆಗಳತ್ತ ಜನರು ಏಕಕಾಲಕ್ಕೆ ಪ್ರವಾಹದೋಪಾದಿಯಲ್ಲಿ ನುಗ್ಗಿದ ಕಾರಣ, ಆ ಮಾರ್ಗದಲ್ಲಿ ಕೆಲಕಾಲ ಆತಂಕದ ಸ್ಥಿತಿ ಉಂಟಾಗಿತ್ತು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬರುವುದು ತಡವಾಗುತ್ತದೆ. ಅಂತೆಯೇ ಚಂದ್ರಶೇಖರ ಕಂಬಾರ ದಂಪತಿ ಇನ್ನೂ ವೇದಿಕೆಗೆ ಬಂದಿಲ್ಲ ಎಂದು ತಿಳಿದು ಬಂದ ಕೂಡಲೇ, ಸಾಹಿತ್ಯಾಭಿಮಾನಿಗಳು ಊಟದ ಹಾಲ್‌ನತ್ತ ಧಾವಿಸಿದರು. ಪುಸ್ತಕಮಳಿಗೆಯ ಹಾದಿಯಲ್ಲೇ ತೆರಳಬೇಕಾದ್ದರಿಂದ ಕೆಲಕಾಲ ನೂಕುನುಗ್ಗಲು ಉಂಟಾಯಿತು. ಮಹಿಳೆಯರು ಮತ್ತು ಪುಟ್ಟಮಕ್ಕಳು ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ನೂಕುನುಗ್ಗಲ್ಲಿನಲ್ಲೇ ನಿಲ್ಲಬೇಕಾಯಿತು. ಕೆಲವರು ಸಮ್ಮೇಳನದ ಮಾರ್ಗದ ಪಕ್ಕದಲ್ಲಿದ್ದ ಹೊಲಗಳತ್ತ ಜಿಗಿದರು. ಈ ಸ್ಥಿತಿಯಲ್ಲಿ ಪೊಲೀಸರು ಅಸಹಾಯಕರಾಗಿದ್ದರು.

ಉಪ್ಪಿಟ್ಟು ಖಾಲಿ!
ಊಟಕ್ಕಾಗಿ ಮಹಿಳೆಯರು, ಪುರುಷರು, ವೃದ್ಧರು, ವಿಕಲಚೇತನರು ಮತ್ತು ಪೊಲೀಸರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ತಿಂಡಿಗೆಂದು ಸಿದ್ಧಪಡಿಸಿದ್ದ ಉಪ್ಪಿಟ್ಟು ಬೇಗ ಖಾಲಿಯಾಯಿತು. ಉಪ್ಪಿಟ್ಟು ಸಿಗದವರಿಗೆ ಅನ್ನ ಮತ್ತು ಸಾರು ಬಡಿಸಲಾಯಿತು.

ಪುರುಷರ ವಿಭಾಗದಲ್ಲಿ ಕೆಲಕಾಲ ನೂಕುನುಗ್ಗಲು ಉಂಟಾಯಿತು. ಆಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮಧ್ಯಾಹ್ನ ಊಟಕ್ಕೆ ಗೋಧಿ ಹುಗ್ಗಿ, ಚಪಾತಿ, ಕಟಕ್ ರೊಟ್ಟಿ, ಬದನೇಕಾಯಿ ಪಲ್ಲೆ, ಮಡಕಿ ಕಾಳಿನ ಪಲ್ಲೆ, ಅನ್ನ, ಸಾಂಬಾರ, ಚಟ್ನಿ, ಉಪ್ಪಿನಕಾಯಿ, ಮೊಸರು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT