ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಕೊರತೆ; ತಗ್ಗಿದ ತರಕಾರಿ ಬೇಸಾಯ

ಬಿಸಿಲ ಝಳ ಹೆಚ್ಚಳ, ಅಂತರ್ಜಲ ಮಟ್ಟ ಕುಸಿತ, ಸೋಯಾಬಿನ್‌ದಿಂದ ದೂರವಾದ ಕೃಷಿಕರು
Last Updated 16 ಫೆಬ್ರುವರಿ 2017, 11:35 IST
ಅಕ್ಷರ ಗಾತ್ರ
ಹುಬ್ಬಳ್ಳಿ:  ಬಿಸಿಲ ಝಳ ಹೆಚ್ಚುತ್ತಿರುವಂತೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯತೊಡಗಿದೆ. ಪರಿಣಾಮ ಜಲಮೂಲಗಳು ಬತ್ತಿಹೋಗಿವೆ. ನೀರಿನ ಕೊರತೆ ಎದುರಾಗಿರುವುದರಿಂದ ಬೇಸಿಗೆಯಲ್ಲಿ ತರಕಾರಿ ಬೆಳೆಯುವುದು ಇಳಿಮುಖವಾಗಿದೆ.
 
ಕಲಘಟಗಿ, ಧಾರವಾಡ ಮತ್ತು ಹುಬ್ಬಳ್ಳಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲೂ ಕೃಷಿಕರು ಕೊಳವೆಬಾವಿ ನೀರು ಬಳಸಿ ತರಕಾರಿ ಬೆಳೆಯುತ್ತಾರೆ. ಆದರೆ, ಈ ಅಂತರ್ಜಲ ಬತ್ತಿಹೋಗಿರುವುದರಿಂದ ತರಕಾರಿ ಬೆಳೆಯುವ ಪ್ರದೇಶ ಕಡಿಮೆಯಾಗಿದೆ.
 
ಕಲಘಟಗಿ ತಾಲ್ಲೂಕಿನ ದುಮ್ಮವಾಡ ಗ್ರಾಮವೊಂದರಲ್ಲೇ ಪ್ರತಿ ದಿನ ಒಂದು ಸಾವಿರಕ್ಕೂ ಅಧಿಕ ಬುಟ್ಟಿ ಬದನೆ, ಟೊಮೆಟೊ, ಹಿರೇಕಾಯಿ, ಬೆಂಡೆಕಾಯಿ, ಹಾಗಲಕಾಯಿಯನ್ನು ಹುಬ್ಬಳ್ಳಿ ಎಪಿಎಂಸಿಗೆ ಕಳುಹಿಸಲಾಗುತ್ತಿದೆ. ಆದರೆ, ಬರದಿಂದಾಗಿ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ತರಕಾರಿಯನ್ನು ಬೆಳೆಯಲು ಸಾಧ್ಯವಾಗಿಲ್ಲ. ಕೇವಲ ದಿನಕ್ಕೆ 200 ರಿಂದ 300 ಬುಟ್ಟಿ ಮಾತ್ರ ಮಾರುಕಟ್ಟೆಗೆ ಕಳುಹಿಸುತ್ತಿದ್ದೇವೆ ಎಂದು ದುಮ್ಮವಾಡದ ರೈತ ಮಂಜುನಾಥ ಶಾಂತಪ್ಪ ನೇರಲಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
 
‘ಈ ವರ್ಷ ಒಂದು ಎಕರೆಯಲ್ಲಿ ಟೊಮೆಟೊ ಕೃಷಿ ಮಾಡಿದ್ದೇನೆ. ಬೆಳೆಗೆ ಸಮರ್ಪಕವಾಗಿ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ವಾರಕ್ಕೊಮ್ಮೆ ನೀರು ಹಾಯಿಸುತ್ತಿದ್ದೇನೆ. ಇದರಿಂದ ಅರ್ಧಕರ್ಧ ಇಳುವರಿ ಕಡಿಮೆಯಾಗಿದೆ. ದಿನಕ್ಕೆ ನಾಲ್ಕು ತಾಸು ಪಂಪ್‌ಸೆಟ್‌ ಚಾಲು ಮಾಡಿದರೂ ಬೆಳೆಗೆ ನೀರು ಸಾಲುತ್ತಿಲ್ಲ’ ಎಂದು ಅವರು ಹೇಳಿದರು.
 
ಪ್ರತಿ ವರ್ಷ ಹೊಲದಲ್ಲಿ ಬಿಳಿಜೋಳ, ಸೊಯಾಬೀನ್‌ ಬಿತ್ತನೆ ಮಾಡುತ್ತಿದ್ದೆವು. ಈ ವರ್ಷ ನೀರಿಲ್ಲದ ಕಾರಣಕ್ಕೆ ಹೊಲ ಪಡ(ಪಾಳು) ಬಿಟ್ಟಿದ್ದೇವೆ ಎಂದು ಉಗ್ನಕೇರಿ ಗ್ರಾಮದ ಅಶೋಕ ದೊಡ್ಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ವರ್ಷ ಜಿಲ್ಲೆಯಲ್ಲಿ ತರಕಾರಿ ಕೃಷಿ ಇಳಿಮುಖವಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
- ಬಸವರಾಜ್ ಸಂಪಳ್ಳಿ
 
ಶೇ 50 ರಷ್ಟು ತರಕಾರಿ ಬೆಳೆ ಕುಸಿತ: ಜಿಲ್ಲೆಯಲ್ಲಿ ಪ್ರತಿ ವರ್ಷ 500 ಹೆಕ್ಟೇರ್‌ ಪ್ರದೇಶದಲ್ಲಿ ತರಕಾರಿ ಬೆಳೆಯಲಾಗುತ್ತದೆ. ಆದರೆ, ಈ ವರ್ಷ ಬರಗಾಲದಿಂದಾಗಿ ಜಲ ಮೂಲಗಳು ಬತ್ತಿರುವುದರಿಂದ ಕೇವಲ 250 ಹೆಕ್ಟೇರ್‌ನಲ್ಲಿ ಮಾತ್ರ ತರಕಾರಿ ಬೆಳೆಯಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶ್ರೀಶೈಲ ದಿಡ್ಡಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
 
ಬದನೆ, ಟೊಮೆಟೊ, ಸೊಪ್ಪು (ರಾಜಗಿರಿ, ಪಾಲಕ್‌, ಮೆಂತೆ, ಸಬ್ಬಸಗಿ, ಕೊತ್ತಂಬರಿ) , ಹಸಿಮೆಣಸಿನಕಾಯಿಯನ್ನು ಹುಬ್ಬಳ್ಳಿ, ಧಾರವಾಡ ಮತ್ತು ಕಲಘಟಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತಿದೆ ಎಂದು ಹೇಳಿದರು. ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ಬಹುತೇಕ ರೈತರು ಬೇಸಿಗೆಯಲ್ಲಿ ತರಕಾರಿ ಬೆಳೆಯುವುದರಿಂದ ಹಿಂದೆ ಸರಿದಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT