ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ ಪ್ರಶಸ್ತಿಗೆ ಪಾಲಿಕೆ ನಿರ್ಧಾರ

6 ವರ್ಷಗಳ ನಂತರ ಸಂಪ್ರದಾಯ ಪುನರಾರಂಭ
Last Updated 27 ಅಕ್ಟೋಬರ್ 2014, 9:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವ­ರನ್ನು ಗುರುತಿಸಿ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಶಸ್ತಿ ನೀಡಲು ಮಹಾನಗರ ಪಾಲಿಕೆ ನಿರ್ಧರಿಸಿದೆ. ಕಳೆದ 6 ವರ್ಷ ಹಿಂದೆ ಸ್ಥಗಿತಗೊಂಡಿದ್ದ ಈ ಸಂಪ್ರದಾಯಕ್ಕೆ ಪುನಃ ಚಾಲನೆ ನೀಡಲು ಪಾಲಿಕೆ ಮುಂದಾಗಿದೆ.

2008–09ನೇ ಸಾಲಿನಲ್ಲಿ ಪಾಲಿಕೆ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ­ಯನ್ನು ನೀಡಿರುವುದೇ ಕೊನೆ. ನಂತರದ ಕೆಲ ವರ್ಷಗಳ ಕಾಲ ಬರ ಹಾಗೂ ನೆರೆಯಿಂದಾಗಿ ಪ್ರಶಸ್ತಿ ನೀಡುವುದನ್ನು ನಿಲ್ಲಿಸಲಾಗಿತ್ತು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ. ಹೀಗಾಗಿ ಪ್ರಶಸ್ತಿಗಳನ್ನು ನೀಡಬೇಕು ಎಂಬ ಬಹುತೇಕ ಪಾಲಿಕೆ ಸದಸ್ಯರ ಒತ್ತಾಯ ಈಗ ಕಾರ್ಯರೂಪಕ್ಕೆ ಬರಲಿದೆ.

ಆದರೆ, ಕಳೆದ ಆರು ವರ್ಷಗಳಿಂದ ಸ್ಥಗಿತ­ಗೊಂಡಿದ್ದ ಪ್ರಶಸ್ತಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡುವುದು ಅಷ್ಟೊಂದು ಸುಲಭದ ಕೆಲಸವಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

‘ಹಿರಿಯ ಸದಸ್ಯರಿಗೆ ಈ ಪ್ರಶಸ್ತಿ­ಯನ್ನು ಕೊಡಬೇಕು ಎಂಬ ಬಗ್ಗೆ ಆಸಕ್ತಿಯೇ ಇಲ್ಲ. ಈಗಾಗಲೇ 3–4 ಬಾರಿ ಆಯ್ಕೆಯಾಗಿರುವು­ದರಿಂದ ಅವರು ಈ ಪ್ರಶಸ್ತಿಯ ಗೊಡವೆಯೇ ಬೇಡ ಎನ್ನುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಲ್ಲವೇ ಎರಡನೇ ಬಾರಿಗೆ ಆಯ್ಕೆಗೊಂಡಿರುವ ಸದಸ್ಯರು ಪ್ರಶಸ್ತಿ­ಯನ್ನು ನೀಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿ ಸದಸ್ಯರೊಬ್ಬರು ಹೇಳಿದರು.

‘ಪ್ರಶಸ್ತಿ ನೀಡಲಾಗುತ್ತದೆ ಎಂದು ಗೊತ್ತಾಗುತ್ತಿ­ದ್ದಂತೆಯೇ ಲಾಬಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ. ಅದರಲ್ಲೂ ಪಾಲಿಕೆ ಸದಸ್ಯರಿಂದ ಹಿಡಿದು ಬಹುತೇಕ ಜನಪ್ರನಿಧಿಗಳು ತಾವು ಶಿಫಾ­ರಸು ಮಾಡಿದವರಿಗೇ ಪ್ರಶಸ್ತಿ ನೀಡಬೇಕು ಎಂದು ಒತ್ತಡ ಹೇರಲು ಆರಂಭಿಸುತ್ತಾರೆ. ಹೀಗಾಗಿ ಈ ನಿರ್ಧಾರ ಪಾಲಿಕೆಗೆ ಸವಾಲಾಗಲಿದೆ’ ಎಂದೂ ಅಭಿಪ್ರಾಯಪಟ್ಟರು.

ಆದರೆ, ಈ ಎಲ್ಲ ಅಡೆತಡೆಗಳನ್ನು ನಿವಾರಿಸಿ ಈ ಬಾರಿ ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಮೇಯರ್ ಶಿವು ಹಿರೇಮಠ ವಿಶ್ವಾಸ ವ್ಯಕ್ತಪಡಿಸಿದರು.

‘ನವೆಂಬರ್‌ 1ರಂದೇ ಪ್ರಶಸ್ತಿಯನ್ನು ವಿತರಣೆ ಮಾಡುವ ಬದಲು ತಿಂಗಳಿನ ಮೂರು ಇಲ್ಲವೇ ನಾಲ್ಕನೇ ವಾರದಲ್ಲಿ ಒಂದು ದಿನ ಕಾರ್ಯಕ್ರಮ ಆಯೋಜಿಸಿ ಪ್ರಶಸ್ತಿ ಪ್ರದಾನ ಮಾಡುವ ಚಿಂತನೆ ಇದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ­ರುವ ಹಿರಿಯರ ನೇತೃತ್ವದಲ್ಲಿ ಸಮಿತಿ­ಯೊಂದನ್ನು ರಚಿಸ­ಲಾಗುವುದು. ಯಾವುದೇ ಒತ್ತಡ, ಶಿಫಾರಸು­ಗಳಿಗೆ ಒಳಗಾಗದೇ ವ್ಯಕ್ತಿಯ ಸಾಧನೆಯೇ ಮಾನ­ದಂಡ­ವನ್ನಾಗಿ ಮಾಡಿ ಆಯ್ಕೆ ಮಾಡುವಂತೆ ಸಮಿತಿಗೆ ಸೂಚನೆ ನೀಡಲಾಗುವುದು. ಈ ವಿಷಯ­ದಲ್ಲಿ ಪಾಲಿಕೆಯ ಎಲ್ಲ ಸದಸ್ಯರ ಸಹಕಾರ ಸಿಗಲಿದೆ ಎಂಬ ವಿಶ್ವಾಸ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜೋತ್ಸವ ಹಿನ್ನೆಲೆಯಲ್ಲಿ ವಿವಿಧ ಸ್ಪರ್ಧೆ­ಗಳನ್ನು ಏರ್ಪಡಿಸಲು ಸಮಿತಿ­ಗಳನ್ನು ರಚಿಸ­ಲಾಗಿದೆ. ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ವಿವಿಧ ಸ್ಪರ್ಧೆಗಳನ್ನು ಸಂಘಟಿಸಲಾಗುವುದು. ಈ ಸ್ಪರ್ಧಾ ವಿಜೇತರಿಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುವ ಸಲುವಾಗಿ ಆಯೋಜಿಸುವ ಕಾರ್ಯ­ಕ್ರಮ­ದಲ್ಲಿಯೇ ಬಹುಮಾನ ವಿತರಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸ್ಥಳೀಯರನ್ನು ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ವರ್ಷ ಪ್ರಶಸ್ತಿಗೆ ಆಯ್ಕೆ ಮಾಡಲು ಸಮಯವಿಲ್ಲ. ಸಾಕಷ್ಟು ಮುಂಚೆಯೇ ಈ ಬಗ್ಗೆ ತಯಾರಿ ಮಾಡಿಕೊಳ್ಳಬೇಕಿತ್ತು ಎಂದು ಇತ್ತೀಚೆಗೆ ಈ ಸಂಬಂಧ ಚರ್ಚಿಸಲು ನಡೆದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದೆ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಯಾಸಿನ್‌ ಹಾವೇರಿಪೇಟ ಹೇಳಿದರು.

‘ಪ್ರಶಸ್ತಿಗಾಗಿ ವ್ಯಕ್ತಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪಾರದರ್ಶಕ­ವಾಗಿರಬೇಕು. ಒಟ್ಟು 25 ಕ್ಷೇತ್ರಗಳ ಸಾಧಕರನ್ನು ಆಯ್ಕೆ ಮಾಡಬೇಕು ಎಂಬ ಸಲಹೆ ನೀಡಿದ್ದೇನೆ’ ಎಂದೂ ಹೇಳಿದರು.

‘2008–09ರಲ್ಲಿ ಆಯ್ಕೆ ನಡೆದಾಗ ಅನೇಕ ಪಾಲಿಕೆ ಸದಸ್ಯರು ತಮ್ಮ ಪಕ್ಷದ ಬೆಂಬಲಿಗರು, ಕಾರ್ಯಕರ್ತರನ್ನೇ ಆಯ್ಕೆ ಮಾಡಿದ್ದರು. ಈ ಕ್ರಮವನ್ನು ನಾನು ವಿರೋಧಿಸಿದ್ದೆ’ ಎಂದೂ ನೆನಪಿಸಿಕೊಂಡರು.

‘ಆರು ವರ್ಷಗಳ ನಂತರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂಬ ಪಾಲಿಕೆಯ ನಿರ್ಧಾರಕ್ಕೆ ಅವಳಿನಗರದ ಜನತೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಕುತೂಹಲದ ವಿಷಯ. ಈಗಾಗಲೇ ಮೂಲಸೌಕರ್ಯಗಳು ಇಲ್ಲದೇ ಜನರು ನಿತ್ಯ ತೊಂದರೆ ಅನುಭವಿಸುತ್ತಿರುವಾಗ ಈ ಪ್ರಶಸ್ತಿ ನೀಡುವ ಅಗತ್ಯ ಏನಿತ್ತು ಎಂಬ ಪ್ರಶ್ನೆಗೆ ಪುರಪಿತೃಗಳು ಉತ್ತರಿಸಬೇಕಾಗುತ್ತದೆ’ ಎಂದು ಹೊಸೂರು ನಿವಾಸಿ, ಖಾಸಗಿ ಕಂಪೆನಿ ಉದ್ಯೋಗಿ ರವೀಂದ್ರ ಕಂದಾರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT