ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕಗಳ ಕುರಿತು ಪುಸ್ತಕ, ಸಾಕ್ಷ್ಯಚಿತ್ರ

Last Updated 5 ಜನವರಿ 2012, 8:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತನ್ನ 150ನೇ ವಾರ್ಷಿಕೋತ್ಸವದ ಅಂಗವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಈ ವರ್ಷದ ಜನವರಿಯಿಂದ ಡಿಸೆಂಬರ್‌ವರೆಗೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಎಎಸ್‌ಐ `ಸಂರಕ್ಷಿತ ಪಟ್ಟಿ~ಯಲ್ಲಿಲ್ಲದ ಸ್ಥಳಗಳ ಬಗ್ಗೆ ವಿಶೇಷ ಮಾಹಿತಿಗಳನ್ನು ಕಲೆಹಾಕಿ ಕಿರುಹೊತ್ತಿಗೆ ಪ್ರಕಟಿಸಲಿದೆ. ಸಾಕ್ಷ್ಯಚಿತ್ರಗಳ ಪ್ರದರ್ಶನವನ್ನೂ ಏರ್ಪಡಿಸಲಿದೆ.

ಒಟ್ಟು ನಾಲ್ಕು ಬಗೆಯ ಪ್ರಚಾರ ಸಾಮಗ್ರಿಗಳನ್ನು ಹೊರತರಲಿರುವ ಇಲಾಖೆಯು `ಕೇಂದ್ರೀಕೃತವಾಗಿ~ ಕಾರ್ಯಕ್ರಮ ಹಮ್ಮಿಕೊಳ್ಳುವ ಬದಲು, ಆಯಾ ಗ್ರಾಮ, ತಾಲ್ಲೂಕು ಇಲ್ಲವೇ ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮ ನಡೆಸಲಿದೆ.

1958ರಲ್ಲಿ ಜಾರಿಗೆ ತಂದ `ಐತಿಹಾಸಿಕ ಸ್ಮಾರಕಗಳು, ಪ್ರಾಚ್ಯತಾಣ ಹಾಗೂ ಅವಶೇಷಗಳ ಕಾಯ್ದೆ~ಯನ್ನು ಕಳೆದ ವರ್ಷ ತಿದ್ದುಪಡಿ ಮಾಡುವ ಮೂಲಕ ಕಾಯ್ದೆಗೆ ಸಾಕಷ್ಟು ಬಲವನ್ನು ತಂದಿತ್ತು. ಈ ಸಮಯದಲ್ಲಿಯೇ 150ನೇ ವಾರ್ಷಿಕೋತ್ಸವವೂ ಬಂದಿರುವುದರಿಂದ ಸ್ಮಾರಕಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಹಾಗೂ ಅವುಗಳ ಅಸ್ತಿತ್ವದಿಂದ ಪ್ರವಾಸೋದ್ಯಮಕ್ಕೆ ದೊರೆಯಲಿರುವ ಉತ್ತೇಜನವನ್ನೂ ಲೆಕ್ಕ ಹಾಕಿ ವರ್ಷಪೂರ್ತಿ ಯೋಜನೆ ಸಿದ್ಧಪಡಿಸಲಾಗಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ವಾರ್ಷಿಕೋತ್ಸವದ ಆಚರಣೆಗೆ ಚಾಲನೆ ನೀಡಲಾಯಿತು. ಎಎಸ್‌ಐನ ಬೆಂಗಳೂರು ಹಾಗೂ ಧಾರವಾಡ ವೃತ್ತಗಳು ಜಂಟಿಯಾಗಿ ಏರ್ಪಡಿಸಿದ್ದ ಈ ಕಾರ್ಯಕ್ರಮ ಇಡೀ ದೇಶದಲ್ಲಿಯೇ ಮೊಟ್ಟ ಮೊದಲ ವರ್ಷಾಚರಣೆ.

ಪ್ರಾಚೀನ, ವರ್ತಮಾನ ಮುಖಾಮುಖಿ: ಎಎಸ್‌ಐನ ಧಾರವಾಡ ವೃತ್ತದ ವ್ಯಾಪ್ತಿಯಲ್ಲಿ ಬರುವ 300 ಸ್ಮಾರಕಗಳ ಬಗ್ಗೆ ಕಿರುಹೊತ್ತಿಗೆ, ಜೇಬಿನಲ್ಲಿ ಇಟ್ಟುಕೊಳ್ಳಬಹುದಾದ ಮಾಹಿತಿ ಪುಸ್ತಕಗಳನ್ನು ಹೊರತರಲಿದೆ. ಅಲ್ಲದೇ ಪ್ರಾಚ್ಯತಾಣಗಳ ಬಗ್ಗೆ ವಾರ್ತಾ ಇಲಾಖೆ, ದೂರದರ್ಶನ ವಾಹಿನಿ ರೂಪಿಸಿದ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಿದೆ.

ಈ ಬಾರಿ ಪ್ರಮುಖ ಸ್ಮಾರಕಗಳ ಬಗ್ಗೆ ಮಾಹಿತಿ ನೀಡುವ ಜೊತೆಯಲ್ಲೇ ಜನಸಾಮಾನ್ಯರಿಗೆ ಅಷ್ಟೇನೂ ಗೊತ್ತಿಲ್ಲದ ಬೆಳಗಾವಿ ಜಿಲ್ಲೆಯ ಹಲಸಿ, ಹೂಲಿ, ಹಾವೇರಿ ಜಿಲ್ಲೆಯ ಬಂಕಾಪುರ, ಗದಗ ಜಿಲ್ಲೆಯ ಲಕ್ಕುಂಡಿ ಸ್ಮಾರಕಗಳ ಬಗ್ಗೆ ಇತಿಹಾಸ ಹಾಗೂ ಪ್ರಾಚ್ಯಶಾಸ್ತ್ರ ತಜ್ಞರಿಂದ ಮಾಹಿತಿ ಕೊಡಿಸುವ ವಿಚಾರ ಸಂಕಿರಣಗಳು ನಡೆಯಲಿವೆ. ಅಲ್ಲದೇ ಸ್ಮಾರಕಗಳ ಬಗ್ಗೆ ಸಂಶೋಧನೆ ನಡೆಯುವಾಗ ಇದ್ದ ಹಾಗೂ ಈಗ ಇರುವ ಸ್ಥಿತಿಗಳ ಬಗೆಗೆ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಪ್ರಮುಖ ಸ್ಮಾರಕಗಳ ಮಾಹಿತಿಯನ್ನು ಜನತೆಗೆ ತಲುಪಿಸುವ ಸಲುವಾಗಿ ಒಂದು ಬದಿಯಲ್ಲಿ ಕನ್ನಡ, ಮತ್ತೊಂದು ಬದಿಯಲ್ಲಿ ಇಂಗ್ಲಿಷ್‌ನಲ್ಲಿ ಮಾಹಿತಿಯನ್ನು ಒಳಗೊಂಡ ಕರಪತ್ರಗಳನ್ನು ವಿತರಿಸಲಾಗುತ್ತದೆ.

ರಾಜ್ಯದಲ್ಲಿರುವ 150 ಪ್ರಮುಖ ಸ್ಮಾರಕಗಳ ಬಗ್ಗೆ ಮಾಹಿತಿ ಪುಸ್ತಕಗಳನ್ನು ಹೊರತರುವ ಪ್ರಕ್ರಿಯೆ ಭರದಿಂದ ನಡೆದಿದ್ದು, ಬೆಂಗಳೂರು ಹಾಗೂ ಧಾರವಾಡ ವೃತ್ತ ತಲಾ 75 ಮಾಹಿತಿ ಪುಸ್ತಕಗಳನ್ನು ಹೊರತರುವ ಯೋಜನೆ ಹಾಕಿಕೊಳ್ಳಲಾಗಿದೆ.

60 ಲಕ್ಷ ರೂಪಾಯಿ ಯೋಜನೆ: ವಾರ್ಷಿಕೋತ್ಸವದ ಅಂಗವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಇಲಾಖೆಯ ಧಾರವಾಡ ವೃತ್ತದ ಅಧೀಕ್ಷಕ ಡಾ.ಎಸ್.ವಿ.ಪಿ.ಹಳಕಟ್ಟಿ, `ವರ್ಷಾಚರಣೆಗಾಗಿ ಒಟ್ಟು 60 ಲಕ್ಷ ರೂಪಾಯಿ ಯೋಜನೆಯನ್ನು ರೂಪಿಸಲಾಗಿದ್ದು, ಈಗ ಇಲಾಖೆಯ ಬಳಿ ಲಭ್ಯವಿರುವ ಹಣವನ್ನು ಬಳಸಿ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತೇವೆ. ಕೇಂದ್ರ ಬಜೆಟ್‌ನಲ್ಲಿ ದೊರೆಯುವ ಅನುದಾನ ಬಳಸಿಕೊಂಡು ಮುಂದಿನ ಕಾರ್ಯಕ್ರಮ ರೂಪಿಲಿದ್ದೇವೆ. ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ವರ್ಷಾಚರಣೆ ಕೈಗೆತ್ತಿಕೊಳ್ಳಲಾಗಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT