ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘15 ದಿನಗಳಲ್ಲಿ ಗುಂಡಿ ಮುಕ್ತ ಅವಳಿ ನಗರ’

ಗಡುವು ಮೀರಿದರೆ ಎಂಜಿನಿಯರ್‌ಗಳ ವಿರುದ್ಧ ಕ್ರಮ
Last Updated 10 ಜನವರಿ 2014, 6:07 IST
ಅಕ್ಷರ ಗಾತ್ರ

ಧಾರವಾಡ: ‘ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಮುಂದಿನ 15 ದಿನಗಳಲ್ಲಿ ನಗರದ ಎಲ್ಲ ರಸ್ತೆಗಳ ಗುಂಡಿಗಳನ್ನು ಮುಚ್ಚುವಂತೆ ಪಾಲಿಕೆ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದ್ದು, ಗಡುವು ಮೀರಿದರೆ ಅಂಥ ಎಂಜಿನಿಯರ್‌ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಉಸ್ತುವಾರಿ ಸಚಿವರಾದ ಬಳಿಕ ಗುರುವಾರ ಮೊಟ್ಟ ಮೊದಲ ಪ್ರಗತಿಪರಿಶೀಲನಾ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿ­ವರು, ‘ನಗರದ ಬಹುತೇಕ ಗುಂಡಿಗಳನ್ನು ಮುಚ್ಚು­ವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಶೇ 40ರಷ್ಟು ರಸ್ತೆ ಕೆಟ್ಟು ಹೋಗಿದ್ದರೆ, ಪೂರ್ತಿ­ಯಾಗಿ ರಸ್ತೆಯನ್ನು ನಿರ್ಮಾಣ ಮಾಡುವಂತೆ ಸೂಚನೆ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳು 15 ದಿನಗಳಲ್ಲಿ ಹಾಗೂ ಲೋಕೋ­ಪಯೋಗಿ ಇಲಾಖೆಯಡಿ ಬರುವ ರಸ್ತೆಗಳನ್ನು ಮುಂದಿನ ಒಂದು ತಿಂಗಳಲ್ಲಿ ರಿಪೇರಿ ಮಾಡುವಂತೆ ಸೂಚನೆ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಕುಂದಗೋಳ ತಾಲ್ಲೂಕಿನ ಹಲವು ಗ್ರಾಮಗಳಿಗೆ ಇನ್ನೂ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುವ ಸಂಬಂಧ ಹಲವರಿಂದ ಟೀಕೆ ವ್ಯಕ್ತವಾಗಿದ್ದು, ಆ ತಾಲ್ಲೂಕಿನಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಅಧಿಕಾರಿಗೆ ಸೂಚನೆ ನೀಡಲಾಗಿದ್ದು, ಫೆಬ್ರವರಿಯೊಳಗಾಗಿ ಅಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳ್ಳಲಿದೆ’ ಎಂದರು.

‘ಹಲವು ತಿಂಗಳಿಂದ ಸ್ಥಗಿತಗೊಂಡಿರುವ 24/7 ನಿರಂತರ ನೀರು ಯೋಜನೆ ಕಾಮಗಾರಿ ಇದೇ 10ರಿಂದ ಆರಂಭಗೊಳ್ಳಲಿದೆ. ಇಷ್ಟು ದಿನ ಏಕೆ ಸ್ಥಗಿ­ತ­ಗೊಂಡಿತ್ತು ಎಂಬುದನ್ನು ಪರಿಶೀಲಿಸುವ ಬದಲು ಕೆಲಸ ಶೀಘ್ರವೇ ಪೂರ್ಣಗೊಳಿಸುವಂತೆ ನೋಡಿಕೊ­ಳ್ಳುವುದು ಮುಖ್ಯ’ ಎಂದರು.

‘ಇನ್ನೂ ಬರಬೇಕಾದ ಅನುದಾನವನ್ನು ಸರ್ಕಾ­ರದಿಂದ ಬಿಡುಗಡೆ ಮಾಡಿಸಿ ಕಾಮಗಾರಿಗಳು ಸುಸೂ­ತ್ರವಾಗಿ ನಡೆಯುವಂತೆ ನೋಡಿಕೊಳ್ಳಲಿದ್ದೇವೆ. ಜಿಲ್ಲೆಯ ಶಾಸಕರ ಹಾಗೂ ಜನಪ್ರತಿನಿಧಿಗಳ ಸಹ­ಯೋಗದೊಂದಿಗೆ ನಾಲ್ಕು ವರ್ಷಗಳ ಅವಧಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆಯುವ ಹಂಬ­ಲವಿದ್ದು, ದೀರ್ಘಾವಧಿಯ ಯೋಜನೆಗಳನ್ನು ಹಾಕಿ­ಕೊ­ಳ್ಳಲಾಗುವುದು’ ಎಂದು ಸಚಿವರು ತಿಳಿಸಿದರು.

‘ಜನವಿರೋಧಿ ಅಧಿಕಾರಿಗಳ ವರ್ಗಾವಣೆ’

ಜನರ ಸಮಸ್ಯೆಗಳಿಗೆ ಸ್ಪಂದಿಸದ ಹಾಗೂ ಅಹವಾಲುಗಳನ್ನು ಸ್ವೀಕರಿಸದ ಐಎಎಸ್‌ ಸೇರಿದಂತೆ ಎಲ್ಲ ಶ್ರೇಣಿಯ ಅಧಿಕಾರಿಗಳನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವರ್ಗಾವಣೆ ಮಾಡಿಸಲಾಗುವುದು. ಸರ್ಕಾರ ಹಾಕಿಕೊಂಡ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವರ್ತನೆಯನ್ನು ಸಹಿಸುವುದಿಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಬಯೊಮೆಟ್ರಿಕ್‌ ಯಂತ್ರ ಬಳಕೆ ಇಲ್ಲ

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ­ಯು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಯೊಮೆಟ್ರಿಕ್‌ ಆಧರಿತ ತೂಕದ ಯಂತ್ರದ ಮೂಲಕ ಪಡಿತರ ನೀಡುವ ಯೋಜ­ನೆಯನ್ನು ಜಾರಿಗೆ ತಂದಿತ್ತು. ಆದರೆ, ಸಾಫ್ಟ್‌­ವೇರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿ­ರುವು­ದರಿಂದ ಅದರ ಬಳ­ಕೆಯನ್ನು ಸ್ಥಗಿತಗೊಳಿ­ಸಲಾಗಿದೆ. ಅದರ ಬದಲು ಸಾಮಾನ್ಯ ತೂಕದ ಯಂತ್ರದಿಂದಲೇ ಪಡಿತರ ವಿತರಣೆ ಮಾಡುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT