ಬೀದಿಗೆ ಬಿದ್ದ ಕೊನೆಗಾರ ಕುಟುಂಬ

7

ಬೀದಿಗೆ ಬಿದ್ದ ಕೊನೆಗಾರ ಕುಟುಂಬ

Published:
Updated:
ಚಿತ್ರ: 02ಹೆಚ್ಒಎಸ್1ಪಿ ಹೊಸನಗರ ಸಮೀಪದ ಕಾರ್ಗಡಿಯಲ್ಲಿ ಕೊನೆಗಾರ ಅಡಿಕೆ ಮರದಿಂದ ಬಿದ್ದ ಜೂಜೆ ಮಿನೆಜಸ್ ಕಳೆದ 10 ವರ್ಷದಿಂದ ಹಾಸಿಗೆ ಹಿಡಿದ್ದಾರೆ.

ಹೊಸನಗರ: ಹಿಂದಿನ ಪೀಳಿಗೆಯಿಂದ ಬಳುವಳಿಯಾಗಿ ಬಂದ ವೃತ್ತಿಯೊಂದು ಒಂದು ಕುಟುಂಬದ ದುರಂತ ಸನ್ನಿವೇಶ ನಿರ್ಮಿಸಿದೆ ಎಂಬುದು ನೋವಿನ ಸಂಗತಿ.

ಪೀಳಿಗೆಯಿಂದ ಬಂದ ಅಡಿಕೆ ಕೊನೆಗಾರ ವೃತ್ತಿಯು ಅಣ್ಣನನ್ನು ನಿರಂತರ ಹಾಸಿಗೆಯಲ್ಲಿ ಮಲಗಿದ್ದರೆ, ತಮ್ಮನ ಜೀವವವನ್ನು ಬೇಡಿತು. ಜೂಜೆ(ಜೋಸೆಫ್) ಮಿನೆಜೆಸ್ ವಯಸ್ಸು 60 ವೃತ್ತಿ ಕೊನೆಗಾರ. ಕಳೆದ 10 ವರ್ಷದಿಂದ ಅಡಿಕೆ ಮರದಿಂದ ಬಿದ್ದ ಪರಿಣಾಮ ಬೆನ್ನುಮೂಳೆ ಮುರಿತದಿಂದಾಗಿ ಕಾಲು ಸ್ವಾದೀವಿಲ್ಲದ ಹಾಸಿಗೆ ಹಿಡಿದ್ದಾರೆ.

ತಮ್ಮ ಗ್ರೆಗೆರೀ ಮಿನೆಜಸ್(51) ಕುಟುಂಬದ ವೃತ್ತಿಯನ್ನೇ ಮಾಡಿಕೊಂಡು ಬಂದಿದ್ದ. ಆದರೆ ಭಾನುವಾರ ಅಡಿಕೆ ಏರಿ ಕೊಳೆ ಔಷಧಿ ಸಿಂಪಡಿಸುತ್ತಿದ್ದಾಗ ಆಕಸ್ಮಿಕ ಕಾಲು ಜಾರಿ ಬಿದ್ದ ಪರಿಣಾಮ ಮೃತಪಟ್ಟಿದ್ದಾನೆ.  ಆಶ್ರಯ ಮನೆಯಲ್ಲಿರುವ ಮೃತ ತಮ್ಮನ ಕೃಷಿ ಕೂಲಿ ಆದಾಯವನ್ನು ನಂಬಿದ್ದ ಹಾಸಿಗೆ ಹಿಡಿದ ಅಣ್ಣ ಜೂಜೆ(ಜೋಸೆಫ್), ಪಾರ್ಷವಾಯು ಪೀಡಿತ ಅತ್ತಿಗೆ ದಿಕ್ಕು ಕಾಣದಂತಾಗಿ ಅಕ್ಷರಶಃ ಬೀದಿಗೆ ಬಿದ್ದಂತಾಗಿದ್ದಾರೆ. ಮಳೆಗಾಲದಲ್ಲಿ ಅಡಿಕೆ ಮರ ಏರಿ ಕೊಳೆ ರೋಗಕ್ಕೆ ಔಷಧಿ ಸಿಂಪಡಿಸುವುದು ಅತ್ಯಂತ ಕಷ್ಟದ ಕೆಲಸ. ದೋ ಅಂತ ಮಳೆ ಸುರಿಯುತ್ತಿರುವಾಗಲೆ ಜೀವದ ಹಂಗು ತೊರೆದು ಔಷಧಿ ಹೊಡೆಯುವ ಕೆಲಸ ಕೊನೆಗಾರನದು.

ಅಸಂಘಟಿತ ಅಡಿಕೆ ಕೊನೆಗಾರರ ಜೀವ ರಕ್ಷಣೆಗೆ ಯಾವುದೇ ಉಪಕರಣ ಇಲ್ಲ. ತುಂಡು ಬಟ್ಟೆ, ಕಾಲಿಗೊಂದು ಹಗ್ಗ, ಮರದ ಮೇಲೆ ಕೂರಲು ಮಣೆ ಎರಡು ಮಾತ್ರ. ಇವೆರಡರಲ್ಲಿ ಒಂದು ಕೈಕೊಟ್ಟರೂ ಕೊನೆಗಾರ ಕೆಳಕ್ಕೆ. ಕೃಷಿ ತಾಂತ್ರಿಕತೆ ಎಷ್ಟೇ ಮುಂದುವರೆದರೂ ಸಹ ಕೊನೆಗಾರನಿಗೆ ಮಾತ್ರ ಇದು ತಲುಪಿಲ್ಲದಿರುವುದು ಆ ವೃತ್ತಿಯ ದುರ್ದೈವ ಎನ್ನಲಾಗಿದೆ.

ಗುಂಪು ವಿಮೆ, ಆರೊಗ್ಯ ಇಲಾಖೆ, ಕಾರ್ಮಿಕ ಇಲಾಕೆಯ ವಿಮೆ ಎಲ್ಲಾ ಯೋಜನೆಗಳು ಅಸಂಘಟಿತ ಕೃಷಿ ಕಾರ್ಮಿಕ ವರ್ಗಕ್ಕೆ ಇನ್ನೂ ತಲುಪಿಲ್ಲ. ಕೃಷಿಕರು ತಮ್ಮ ಹೊಲ, ತೋಟದಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರಿಗೆ ಕನಿಷ್ಟ ಆರೋಗ್ಯ ವಿಮಾ ಕಂತು ಪಾವತಿಸುವ ಮೂಲಕ ಅವರ ಆಕಸ್ಮಿಕವಾಗಿ ಸಂಘವಿಸಬಹುದಾದ ಆಸ್ಪತ್ರೆ ಖರ್ಚನ್ನಾದರು ಭರಿಸಲು ಸಹಕರಿಸುವಂತೆ ತಾಲ್ಲೂಕು ಬೆಳೆಗಾರರ ಸಂಘದ ಕಾರ್ಯದರ್ಶಿ ಎಂ.ವಿ.ಜಯರಾಮ ಅವರ ಸಲಹೆ.

ಅಡಿಕೆ ಬೆಳೆಗಾರರಿಗಾಗಿ ಇರುವ ಮ್ಯಾಮ್ ಕೋಸ್ ಸಂಸ್ಥೆಯು ತಮ್ಮ ಸದಸ್ಯರಿಗೆ ಹಾಗೂ ಅವಲಂಬಿತ ಕೂಲಿ ಕಾರ್ಮಿಕರಿಗೆ ಎರಡು ರೀತಿಯ ಗುಂಪು ವಿಮಾ ಅಭಿರಕ್ಷೆ ಯೋಜನೆ ಜಾರಿಗೆ ತಂದಿದೆ. ಗರಿಷ್ಠ ರೂ. 4 ಲಕ್ಷದ ತನಕ ಪರಿಹಾರ ನೀಡುವ ಯೋಜನೆ ಅಡಿಕೆ ಬೆಳೆಗಾರರಿಗೆ ಸೂಕ್ತ ಆಗಿದೆ ಎನ್ನುವುದು ಸಂಸ್ಥೆಯ ಅಭಿಪ್ರಾಯ.

ಆಸ್ಪತ್ರೆ, ಔಷಧಿ ಖರ್ಚು ಗಗನಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ಕೃಷಿ ಕೂಲಿ ಕಾರ್ಮಿಕರು ಮುಂಬರುವ ಅವಗಡಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ವಿಮಾ ಯೋಜನೆಗೆ ಒಳಪಡುವುದು ಸೂಕ್ತ. ಇಲ್ಲವಾದರೆ ಮಿನೆಜೆಸ್ ಕುಟುಂಬದಂತೆ ಅನಾಥ ಭಾವ ಅನುಭವಿಸಬೇಕಾಗುತ್ತದೆ.
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !