ಭೂಮಿ ಪರಿಹಾರ ಕೇಳಲು ಹೋದಾಗ ಹಲ್ಲೆ: ರೈತ ಕಣ್ಮರೆ – ದೂರು

ತಿಪ್ಪಸಂದ್ರ(ಮಾಗಡಿ): ಪವರ್ಗ್ರಿಡ್ ಯೋಜನೆಯಲ್ಲಿ ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ಚೆಕ್ ನೀಡುವ ನೆಪದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ರೈತರನ್ನು ಅಪಹರಿಸಿ ಹಲ್ಲೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರೈತರ ವಿರುದ್ಧ ನಡೆಯುತ್ತಿರುವ ಹಲ್ಲೆ ಖಂಡಿಸಿ ದೊಡ್ಡಸೋಮನಹಳ್ಳಿ ರೈತರು ‘ಪವರ್ಗ್ರಿಡ್ ವಿದ್ಯುತ್ ಕಂಬದ’ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಮುತ್ತಿಗೆ ಹಾಕಿ ಭಾನುವಾರ ಪ್ರತಿಭಟನೆ ನಡೆಸಿದರು.
ರೈತರ ಮೇಲೆ ಹಲ್ಲೆ ನಡೆಸುತ್ತಿರುವ ಹಾಗೂ ಪ್ರಾಣ ಬೆದರಿಕೆ ಹಾಕಿರುವ ಅಧಿಕಾರಿಗಳನ್ನು ಬಂಧಿಸುವಂತೆ ನಿರ್ಮಾಣ ಹಂತದಲ್ಲಿದ್ದ ಹೈವೋಲ್ಟೇಜ್ ವಿದ್ಯುತ್ ಕಂಬ ಹತ್ತಿ ಘೋಷಣೆ ಕೂಗಿದರು.
ಮುಂಜಾಗ್ರತಾ ಕ್ರಮವಾಗಿ ಪೊಲೀಸರು ರೈತರ ಮನವೊಲಿಸಿ, ವಿದ್ಯುತ್ ಕಂಬದಿಂದ ಕೆಳಗೆ ಇಳಿಯುವಂತೆ ಮನವಿ ಮಾಡಿ ಅನಾಹುತ ತಪ್ಪಿಸಿದರು.
ಹಿನ್ನೆಲೆ: ರೈತ ಮುಖಂಡ ಹನುಮಂತಯ್ಯ ಮಾತನಾಡಿ, ದೊಡ್ಡಸೋಮನಹಳ್ಳಿ ನಾಗರಾಜ್ ಎಂಬ ಕೃಷಿಕರು ಎರಡು ದಿನದಿಂದ ಕಣ್ಮರೆಯಾಗಿದ್ದಾರೆ ಎಂದು ತಿಳಿಸಿದರು.
ಸೀಗೇಹಳ್ಳಿ ಸರ್ವೆ ನಂಬರ್ 18ರಲ್ಲಿ ಪವರ್ಗ್ರಿಡ್ ಯೋಜನೆ ಸಂಬಂಧ ವಿದ್ಯುತ್ ಕಂಬ ಅಳವಡಿಸುತ್ತಿದ್ದಾರೆ. ಈ ಜಮೀನಿನ ರೈತ ನಾಗರಾಜ್ ಭೂಮಿ ಕಳೆದುಕೊಂಡಿದ್ದಾರೆ ಎಂದರು.
ಪರಿಹಾರದ ಚೆಕ್ ನೀಡಿ ನಂತರ ವಿದ್ಯುತ್ ಕಂಬ ಅಳವಡಿಸಿ ಎಂದು ರೈತ ನಾಗರಾಜ್ ಪಟ್ಟುಹಿಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಅಧಿಕಾರಿ ಚಂದ್ರಕಾಂತ್, ನಾಗರಾಜ್ ಅವರನ್ನು ತಹಶೀಲ್ದಾರ್ ಕಚೇರಿಯಲ್ಲಿ ಚೆಕ್ ಕೊಡಿಸುದಾಗಿ ತಿಳಿಸಿ ವಾಹನದಲ್ಲಿ ಕರೆದೊಯ್ದಿದ್ದಾರೆ. ಕಲ್ಯದ ಸುತ್ತುಕಟ್ಟೆ ಸಮೀಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಅವರನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಆದರೆ, ಅವರು ಕಾಣೆಯಾಗಿದ್ದು ಕುಟುಂಬದವರು ಎರಡು ದಿನಗಳಿಂದಲ್ಲೂ ಅನ್ನ–ನೀರು ಬಿಟ್ಟು ಹುಡುಕುತ್ತಿದ್ದಾರೆ. ಅವರ ಸುಳಿವು ಸಿಕ್ಕಿಲ್ಲ ಎಂದು ಮಾಹಿತಿ ನೀಡಿದರು.
ಧರಣಿ: ‘ನಮ್ಮೂರಿನ ರೈತ ನಾಗರಾಜ ಅವರ ಮೇಲೆ ಹಲ್ಲೆ ನಡೆಸಿ, ಅಪಹರಣ ಮಾಡಿರುವ ಪವರ್ ಗ್ರಿಡ್ ಅಧಿಕಾರಿಗಳನ್ನು ಬಂಧಿಸಬೇಕು. ಕುದೂರು ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿ, ರೈತರಿಗೆ ನ್ಯಾಯ ಕೊಡಿಸದಿದ್ದರೆ ತಹಶೀಲ್ದಾರ್ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ’ ರೈತ ಮುಖಂಡ ಪಾಪಣ್ಣ ಆಗ್ರಹಿಸಿದರು.
ರೈತ ಬೊಮ್ಮಲಿಂಗಯ್ಯ ಮಾತನಾಡಿ, ಪವರ್ ಗ್ರಿಡ್ ಕಂಪನಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭೂಮಿ ಕಳೆದುಕೊಂಡಿರುವ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಪರಿಹಾರದ ಚೆಕ್ ನೀಡಿಕೆಯಲ್ಲಿ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಭೂಮಿ ಕಳೆದುಕೊಂಡಿರುವ ರೈತರಾದ ನಿಂಗರಾಜು, ಗಂಗಬೋರೇಗೌಡ, ವೆಂಕಟಾಚಲಯ್ಯ, ಗಂಗಮುನಿಯಪ್ಪ, ಹೊನ್ನೇಗೌಡ, ಬಸವರಾಜು, ಬಸವಯ್ಯ, ಕಿವುಡ ಮರಿಯಪ್ಪ, ಪಾಪಣ್ಣ, ದೊಡ್ಡಕೆಂಪಯ್ಯ, ಶಿವಣ್ಣ, ಮುದ್ದಣ್ಣ, ಜಯಣ್ಣ ಪವರ್ಗ್ರಿಡ್ ಕಂಪನಿ ಅಧಿಕಾರಿಗಳು ನೀಡುತ್ತಿರುವ ಕಿರುಕುಳದ ಬಗ್ಗೆ ವಿವರಿಸಿ ಕಂಬನಿ ಮಿಡಿದರು.
ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದರು. ಕಂಪನಿ ಅಧಿಕಾರಿ ಚಂದ್ರಕಾಂತ್ ಅವರನ್ನು ಈ ಸಂಬಂಧ ‘ಪ್ರಜಾವಾಣಿ’ ಸಂಪರ್ಕಿಸಲು ಯತ್ನಿಸಿದರು ಅವರು ಕರೆ ಸ್ವೀಕರಿಸಲಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.