ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಲ್ಲಿ ಮೀನುಗಳ ಸಾವು: ಆತಂಕ

Last Updated 27 ಮಾರ್ಚ್ 2020, 10:27 IST
ಅಕ್ಷರ ಗಾತ್ರ

ಸೊರಬ: ತಾಲ್ಲೂಕಿನ ಅಂಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರೂರು ಗ್ರಾಮದ ಮುಂಭಾಗದ ದೊಡ್ಡ ಕೆರೆಯಲ್ಲಿ ನಿತ್ಯವೂ ರಾಶಿ ರಾಶಿ ಮೀನುಗಳು ಮೃತಪಡುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಬಗ್ಗೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಹರೂರು ಗ್ರಾಮದ ದೊಡ್ಡ ಕೆರೆಯಲ್ಲಿ 15 ದಿನಗಳಿಂದ ಮೀನುಗಳು ಸಾಯುತ್ತಿವೆ. ಈ ಬಗ್ಗೆ ಗ್ರಾಮಸ್ಥರು ಸಂಬಂಧಪಟ್ಟ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು, ‘ಕೆರೆಯಲ್ಲಿ ಮೀನುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಆಮ್ಲಜನಕದ ಕೊರತೆ ಉಂಟಾಗಿ ಸಾಯುತ್ತಿವೆ. ಮೀನುಗಳಿಗೆ ಯಾವುದೇ ರೋಗ ಬಂದು ಸಾಯುತ್ತಿಲ್ಲ’ ಎಂದು ದೃಢಪಡಿಸಿದ್ದಾರೆ. ಕೂಡಲೇ ಶಿಕಾರಿ ಮಾಡಿ ಮೀನುಗಳನ್ನು ತಿನ್ನಬಹುದು ಎಂದು ಭರವಸೆ ನೀಡಿದ್ದಾರೆ. ಆದರೆ ಕೊರೊನಾ ಸೋಂಕಿನ ಭೀತಿಯಿಂದ ಗ್ರಾಮಸ್ಥರು ಕೆರೆಯಲ್ಲಿಯ ಮೀನುಗಳನ್ನು ಶಿಕಾರಿ ಮಾಡಲು ಹಿಂದೇಟು ಹಾಕಿದ್ದಾರೆ.

ಸತ್ತ ಮೀನುಗಳಿಂದ ರೋಗ ಹರಡದಂತೆ, ಪ್ರಾಣಿ–ಪಕ್ಷಿಗಳು ತಿನ್ನದಂತೆ ಗ್ರಾಮ ಸಲಹಾ ಸಮಿತಿಯು ಪ್ರತಿ 5 ಮನೆಗಳಂತೆ 5 ಜನರನ್ನು ನೇಮಿಸಿ ಕೆರೆಗೆ ಬೀಟ್ ಹಾಕಿದೆ. ನಿತ್ಯವೂ ಮಧ್ಯಾಹ್ನ ಐವರು ಬಂದು ಕೆರೆಯ ಅಂಚಿನಲ್ಲಿ ನಿಂತು ಸತ್ತ ಮೀನುಗಳನ್ನು ಆಯ್ದು ಕೆರೆ ಅಂಗಳದಲ್ಲಿ ಹೂಳುತ್ತಿದ್ದಾರೆ.

ಸಾಂಕ್ರಾಮಿಕ ಕಾಯಿಲೆ ಭೀತಿಯಿಂದ ಜನ ಕೆರೆಗೆ ಬಟ್ಟೆ ತೊಳೆಯುವುದಕ್ಕೂ ಹೋಗುತ್ತಿಲ್ಲ. ಕಣ್ಣೆದುರಿಗೇ ಸಾಯುತ್ತಿರುವ ಮೀನುಗಳನ್ನು ನೋಡಿ ಶಿಕಾರಿ ಮಾಡಿ ತಿನ್ನಲು ಹೇಗೆ ಮನಸ್ಸು ಬರುತ್ತದೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.

ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚಿನ ಕೆರೆಗಳನ್ನು ಹೊಂದಿರುವ ತಾಲ್ಲೂಕಿನಲ್ಲಿ ಕಳೆದ 4 ವರ್ಷಗಳಿಂದ ಸತತ ಬರಗಾಲ ಆವರಿಸಿ ಡಿಸೆಂಬರ್ ಹೊತ್ತಿಗೆ ಕೆರೆಯ ಒಡಲು ಬರಿದಾಗುತ್ತಿತ್ತು. ಈ ಬಾರಿ ಉತ್ತಮ ಮಳೆ ಆಗಿರುವುದರಿಂದ ಕೆರೆಯಲ್ಲಿ ನೀರು ತುಂಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT