ಗುರುವಾರ , ನವೆಂಬರ್ 14, 2019
19 °C
ವಿಜಯಪುರ–ಯಶವಂತಪುರ ರೈಲು ಸೇವೆಗೆ ಚಾಲನೆ

ಹೊಸ ರೈಲು ‘ದೀಪಾವಳಿ’ ಗಿಫ್ಟ್

Published:
Updated:
Prajavani

ವಿಜಯಪುರ: ‘ಈ ಭಾಗದ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಬೇಡಿಕೆ ಅರಿತು ವಿಜಯಪುರ–ಯಶವಂತಪುರ ಮಾರ್ಗದಲ್ಲಿ ಹೊಸ ರೈಲು ಆರಂಭಿಸುವ ಮೂಲಕ ಜಿಲ್ಲೆಯ ಜನತೆಗೆ ದೀಪಾವಳಿ ಗಿಫ್ಟ್ ನೀಡಲಾಗಿದೆ’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ನಗರದ ರೈಲು ನಿಲ್ದಾಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜಯಪುರ–ಯಶವಂತಪುರ ಹೊಸ ರೈಲು ಸೇವೆಯ ಚಾಲನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರೈಲು ದೇಶವನ್ನು ಒಂದುಗೂಡಿಸುತ್ತದೆ. ಎಲ್ಲ ಭಾಷೆ, ಧರ್ಮದವರನ್ನು ಒಟ್ಟಿಗೆ ಕರೆದೊಯುತ್ತದೆ. ಇಲಾಖೆಯಿಂದ ಪ್ರಯಾಣಿಕರಿಗೆ ಎಲ್ಲ ರೀತಿಯ ಅನುಕೂಲಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಪ್ರಯಾಣಿಕರ ಭದ್ರತೆ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಎಲ್ಲಾ ರೈಲು ನಿಲ್ದಾಣಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು’ ಎಂದು ಭರವಸೆ ನೀಡಿದರು.

‘ನವದೆಹಲಿ–ಕಾಟ್ರಾ ಹಾಗೂ ನವದೆಹಲಿ–ವಾರಾಣಸಿ ಮಧ್ಯೆ ವಂದೇ ಭಾರತ್‌ ರೈಲು ಸೇವೆಯನ್ನು ಆರಂಭಿಸಲಾಗಿದೆ. ಇನ್ನೂ 40 ವಂದೇ ಭಾರತ್‌ ರೈಲುಗಳನ್ನು ಆರಂಭಿಸುವ ಚಿಂತನೆ ಇದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ 150 ರೈಲುಗಳನ್ನು ಓಡಿಸುವ ಯೋಜನೆಯೂ ಇದೆ. ಅದೇ ರೀತಿ ಹಂಪಿ, ಬಾದಾಮಿ ಮತ್ತು ವಿಜಯಪುರ ಪ್ರವಾಸಿ ತಾಣಗಳಿಗೆ ಗೋಲ್ಡನ್ ಚಾರಿಯಟ್‌ ಸೇವೆಯನ್ನು ಒದಗಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ತಿಳಿಸಿದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ‘ನಮ್ಮ ಸರ್ಕಾರದ ಅವಧಿಯಲ್ಲಿ ರೈಲ್ವೆ ಯೋಜನೆಗಳು ತ್ವರಿತವಾಗಿವೆ. ರೈಲ್ವೆ ಮಾರ್ಗ ದ್ವಿಪಥೀಕರಣ, ಗೂಡ್ಸ್‌ಶೆಡ್‌ ಸ್ಥಳಾಂತರ, ರೈಲು ನಿಲ್ದಾಣ ಮೇಲ್ದರ್ಜೇಗೇರಿಸುವುದು ಸೇರಿದಂತೆ ಅನೇಕ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ವಿಜಯಪುರ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ಅಳವಡಿಸಬೇಕು ಮತ್ತು ಆಲಮಟ್ಟಿಯಲ್ಲಿ ಎಲ್ಲಾ ರೈಲುಗಳಿಗೆ ನಿಲುಗಡೆ ಕಲ್ಪಿಸಬೇಕು’ ಎಂದು ಸಚಿವರಲ್ಲಿ ಮನವಿ ಮಾಡಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ಎನ್‌ಟಿಪಿಸಿ, ಆಲಮಟ್ಟಿ ಮತ್ತು ಇಂಡಿ ರಸ್ತೆ ರೈಲ್ವೆ ನಿಲ್ದಾಣಗಳಲ್ಲಿ ಎಲ್ಲಾ ರೈಲುಗಳಿಗೆ ನಿಲುಗಡೆ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿದರು. ಶಾಸಕರಾದ ಶಿವಾನಂದ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ, ಸುನಿಲ್‌ಗೌಡ ಪಾಟೀಲ, ಹನುಮಂತ ನಿರಾಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ, ಜಿಲ್ಲಾ ಪಂಚಾಯಿತಿ ಪ್ರಭಾರ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರೆಡ್ಡಿ ಇದ್ದರು.

 

ಪ್ರತಿಕ್ರಿಯಿಸಿ (+)