ಅರಣ್ಯ ಸಂರಕ್ಷಣೆ ಸೈನಿಕ ಸೇವೆಗೆ ಸಮ: ಜಿಲ್ಲಾ ನ್ಯಾಯಾಧೀಶ ಕೆ. ನಟರಾಜನ್ ಬಣ್ಣನೆ

7
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ

ಅರಣ್ಯ ಸಂರಕ್ಷಣೆ ಸೈನಿಕ ಸೇವೆಗೆ ಸಮ: ಜಿಲ್ಲಾ ನ್ಯಾಯಾಧೀಶ ಕೆ. ನಟರಾಜನ್ ಬಣ್ಣನೆ

Published:
Updated:
Deccan Herald

ಶಿವಮೊಗ್ಗ: ಪ್ರಕೃತಿ– ಮನುಷ್ಯನ ಮಧ್ಯೆ ಸಮತೋಲನ ಕಾಯುವ ಅರಣ್ಯವನ್ನು ಸಂರಕ್ಷಿಸಲು ಬದುಕನ್ನೇ ಮುಡುಪಾಗಿಡುವ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ಸಿಬ್ಬಂದಿ ಸೇವೆ ಅನನ್ಯ ಎಂದು ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶ ಕೆ.ನಟರಾಜನ್ ಬಣ್ಣಿಸಿದರು.

ಶ್ರೀಗಂಧದ ಕೋಠಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಾದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಅಮೂಲ್ಯ ವನ್ಯಸಂಪತ್ತು, ವನ್ಯಜೀವಿಗಳ ಸಂರಕ್ಷಣೆಗಾಗಿ ಕಳ್ಳ ಸಾಗಾಣಿಕೆದಾರರು, ಮರಗಳ್ಳರು, ದಂತಚೋರರು, ವನ್ಯಜೀವಿ ಹಂತಕರ ಜತೆ ಹೋರಾಡುವಾಗ ಹಲವರು ಜೀವ ತೆತ್ತಿದ್ದಾರೆ. ನೈಸರ್ಗಿಕ ಸಂಪತ್ತು ಉಳಿಸಲು ಜೀವವನ್ನೇ ತ್ಯಾಗ ಮಾಡಿದ ಅವರ ಸೇವೆ ಸ್ಮರಣೀಯ ಎಂದರು.

ಅರಣ್ಯ ಸಂಪತ್ತು ಸಂರಕ್ಷಿಸುವುದು ಸಾಮಾನ್ಯ ಕಾರ್ಯವಲ್ಲ. ಅರಣ್ಯ ಇಲಾಖೆಯ ಸೇವೆ ದೇಶದ ಸೈನಿಕ ಸೇವೆಗೆ ಸಮ. ದೇಶದ ಹೊರಗಿನ ಕ್ರೂರಿಗಳಿಗಿಂತ ದೇಶದ ಒಳಗಿನ ಕ್ರೂರಿಗಳ ಉಪಟಳ ಹೆಚ್ಚು ಅಪಾಯಕಾರಿ. ಗಾಳಿ, ಮಳೆಗೂ ಜಗ್ಗದೆ ಅರಣ್ಯ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಿಗೆ ಸಮಾಜ ಸದಾ ಬೆಂಬಲ ನೀಡಬೇಕು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಮರಿಯಾ ಪ್ರಸ್ತಾವಿಕ ಮಾತನಾಡಿ, 1730ರಲ್ಲಿ ಜೋಧಪುರ್ ಮಹಾರಾಜ ಅಭಯ್‌ಸಿಂಗ್‌ನ ಸೈನಿಕರು ಕೇಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ರಾಜನ ಅರಮನೆ ನಿರ್ಮಾಣಕ್ಕಾಗಿ ಕಡಿಯಲು ಮುಂದಾದಾಗ ಬಿಷ್ಣೋಯಿ ಸಮುದಾಯದ ಜನರು ವಿರೋಧ ವ್ಯಕ್ತಪಡಿಸಿದ್ದರು. ಆಗ 363 ಜನರನ್ನು ಕೊಲ್ಲಯಾಗಿತ್ತು. ಮರಗಳ ಸಂರಕ್ಷಣೆಗಾಗಿ ಬಲದಾನ ಮಾಡಿದ ಅವರ ತ್ಯಾಗದ ಸ್ಮರಣೆಗಾಗಿ ಭಾರತ ಸರ್ಕಾರ ಆ ದಿನವನ್ನು ‘ರಾಷ್ಟ್ರೀಯ ಅರಣ್ಯ ಹುತಾತ್ಮರ’ ದಿನವಾಗಿ ಘೋಷಿಸಿದೆ ಎಂದು ವಿವರ ನೀಡಿದರು.

ದಂತಚೋರ ವೀರಪ್ಪನ್ ಪಿ. ಶ್ರೀನಿವಾಸನ್ ಸೇರಿದಂತೆ ಹಲವು ದಕ್ಷ ಅಧಿಕಾರಿಗಳ ಹತ್ಯೆ ನಡೆಸಿದ್ದ. ಮರಗಳ್ಳರ ಕ್ರೌರ್ಯಕ್ಕೆ ಇದುವರೆಗೆ 45 ಅಧಿಕಾರಿಗಳು ಮತ್ತು ಸಿಬ್ಬಂದಿ ಬಲಿಯಾಗಿದ್ದಾರೆ. ಅವರೆಲ್ಲ ಸದಾ ಸ್ಫೂರ್ತಿಯ ಚಿಲುಮೆ. ಅವರ ನೆನಪು ಇಂದಿಗೂ ಶಕ್ತಿ ಎಂದು ಬಣ್ಣಿಸಿದರು.

ಹಲವು ಗಣ್ಯರು, ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ. ಬಾದಾಮಿ, ಮುಖ್ಯ ಅರಣ್ಯಾಧಿಕಾರಿ ಯು.ಪಿ. ಸಿಂಗ್, ಪ್ರೆಸ್‌ಟ್ರಸ್ಟ್‌ ಅಧ್ಯಕ್ಷ ಎನ್‌. ಮಂಜುನಾಥ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !