ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿತ್ತನೆಗೆ ಮುನ್ನ ಬೀಜೋಪಚಾರ ಮಾಡಿ: ಸ್ಫೂರ್ತಿ ಜಿ.ಎಸ್. ಸಲಹೆ

ರೈತರಿಗೆ ಕೃಷಿ ಇಲಾಖೆ ಉಪ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಸಲಹೆ
Published 13 ಜೂನ್ 2024, 15:44 IST
Last Updated 13 ಜೂನ್ 2024, 15:44 IST
ಅಕ್ಷರ ಗಾತ್ರ

ಗದಗ: ‘ಬಿತ್ತನೆ ಪೂರ್ವದಲ್ಲಿ ರೈತರು ಬೀಜೋಪಚಾರ ಮಾಡಬೇಕು. ಬೀಜೋಪಚಾರ ಮಾಡುವುದರಿಂದ ಬಿತ್ತನೆ ಮಾಡಿದ ಪ್ರತಿ ಕಾಳು ಮೊಳಕೆ ಒಡೆಯುವುದಲ್ಲದೆ ಯಾವುದೇ ಕೀಟಭಾದೆಗೆ ಒಳಗಾಗುವುದಿಲ್ಲ’ ಎಂದು ಗದಗ ಕೃಷಿ ಇಲಾಖೆ ಉಪ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಹೇಳಿದರು.

ತಾಲ್ಲೂಕಿನ ಬೆನಕೊಪ್ಪ ಗ್ರಾಮದಲ್ಲಿ ಕೃಷಿ ಇಲಾಖೆ, ಬೆಟಗೇರಿ ರೈತ ಸಂಪರ್ಕ ಕೇಂದ್ರದ ಸಹಯೋಗದಲ್ಲಿ ನಡೆದ ಬೀಜೋಪಚಾರ ಆಂದೋಲನ ಮತ್ತು ಕೀಟನಾಶಕಗಳ ಸುರಕ್ಷಿತ ಬಳಕೆ ಕುರಿತಾದ ಪ್ರಾತ್ಯಕ್ಷಿಕೆ ಸಹಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಬೆಳೆಗಳಿಗೆ ಸೂಕ್ತ ರೀತಿಯಲ್ಲಿ ಕೀಟನಾಶಕ ಬಳಕೆ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು’ ಎಂದು ಹೇಳಿದರು.

ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಪರೀಕ್ಷೆ ವಿಜ್ಞಾನಿ ಎನ್.ಎಚ್.ಭಂಡಿ ಮಾತನಾಡಿ, ‘ಹೆಸರು ಕಡಿಮೆ ಅವಧಿಯ ದ್ವಿದಳ ಧಾನ್ಯದ ಬೆಳೆಯಾಗಿದೆ. ಗದಗ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಬೆಳೆಯುವುದರಿಂದ ಬಿತ್ತನೆ ಮಾಡುವಾಗ ಒಂದು ಕೆ.ಜಿ. ಬೀಜಕ್ಕೆ 4 ಗ್ರಾಂ ಟ್ರೈಕೋಡ್ರೋಮಾ ಲೇಪನ ಮಾಡಬೇಕು. ಒಂದು ಎಕರೆ ಬೀಜಕ್ಕೆ 200 ಗ್ರಾಂ ರೈಜೋಬಿಯಂ, 500 ಗ್ರಾಂ ರಂಜಕ ಕರಗಿಸುವ ಗೊಬ್ಬರದ ಜೊತೆಗೆ ಬೆರೆಸಿ ಬಿತ್ತನೆ ಮಾಡಬೇಕು’ ಎಂದು ತಿಳಿಸಿದರು.

‘40 ದಿನದ ಬೆಳೆಯಾದ ನಂತರ ಎರಡು ಬಾರಿ ಅಂತರ ಬೇಸಾಯ ಮಾಡಿ ಕಳೆ ನಿಯಂತ್ರಣ ಮಾಡಬೇಕು. ಭೂಮಿಯಲ್ಲಿ ತೇವಾಂಶ ಕಾಪಾಡಿಕೊಂಡು ಹೋಗಲು ಎಡೆ ಕುಂಟಿಯನ್ನು ಒಡೆಯಬೇಕು’ ಎಂದು ತಿಳಿಸಿದರು.

‘ಸದ್ಯದ ಹವಾಮಾನ ಪರಿಸ್ಥಿತಿ ತೇವಾಂಶದಿಂದ ಕೂಡಿದ್ದು ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿದ್ದು ನ್ಯಾನೊ ಯೂರಿಯಾ ಗೊಬ್ಬರವನ್ನು ಸಿಂಪಡಣೆ ಮಾಡುವುದರಿಂದ ರೋಗವನ್ನು ಹತೋಟಿಗೆ ತರಬಹುದು’ ಎಂದು ತಿಳಿಸಿದರು.

ಗ್ರಾಮದ  ರೈತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT