ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲೇ ಅತಿಹೆಚ್ಚು ಕೃಷಿ ಹೊಂಡಗಳು ಗದಗ ಜಿಲ್ಲೆಯಲ್ಲಿ ನಿರ್ಮಾಣ

ರಾಜ್ಯದಲ್ಲೇ ಅತಿ ಹೆಚ್ಚು ಕೃಷಿ ಹೊಂಡಗಳ ನಿರ್ಮಾಣ: ಬೇಸಿಗೆಯಲ್ಲಿ ಬೆಳೆಗೆ ಅನುಕೂಲ
Last Updated 22 ನವೆಂಬರ್ 2021, 4:28 IST
ಅಕ್ಷರ ಗಾತ್ರ

ಗದಗ: ಈ ಹಿಂದಿನ ಕಾಂಗ್ರೆಸ್‌ ಸರ್ಕಾರವು ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಲು ರೈತರಿಗೆ ಸಹಾಯಧನ ನೀಡುವ ‘ಕೃಷಿ ಭಾಗ್ಯ’ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆ ಅಡಿ ರಾಜ್ಯದಲ್ಲೇ ಅತಿಹೆಚ್ಚು ಕೃಷಿ ಹೊಂಡಗಳು ಗದಗ ಜಿಲ್ಲೆಯಲ್ಲಿ ನಿರ್ಮಾಣಗೊಂಡಿದ್ದವು. ಸದ್ಯ ಈ ಯೋಜನೆ ಸ್ಥಗಿತಗೊಂಡಿದ್ದು, ತೋಟಗಾರಿಕೆ ಇಲಾಖೆ ಹಾಗೂ ನರೇಗಾ ಯೋಜನೆ ಅಡಿಯಲ್ಲಿ ರೈತರು ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.

ಜಿಲ್ಲೆಯ ಬಹುತೇಕ ತಾಲ್ಲೂಕುಗಳ ಕೃಷಿಕರು ಮಳೆಯಾಶ್ರಿತ ಕೃಷಿ ನಡೆಸುತ್ತಿದ್ದಾರೆ. ಮಳೆ ಪ್ರಮಾಣ ಕಡಿಮೆ ಇದ್ದಾಗ ಬೆಳೆಗಳಿಗೆ ಅಗತ್ಯವಿರುವ ನೀರಿನ ಕೊರತೆ ನೀಗಿಸುವಲ್ಲಿ ಈ ಕೃಷಿ ಹೊಂಡಗಳು ನೆರವಾಗಿವೆ. ಹಾಗಾಗಿ, ಕೃಷಿ ಹೊಂಡಗಳಿಂದ ರೈತರಿಗೆ ಸಾಕಷ್ಟು ಅನುಕೂಲಗಳಾಗಿವೆ.

‘ತೋಟಗಾರಿಕೆ ಇಲಾಖೆ ವತಿಯಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿಗೆ ಕೃಷಿ ಹೊಂಡಗಳನ್ನು ನಿರ್ಮಿಸಲು ಸಹಾಯಧನ ನೀಡಲಾಗುತ್ತಿದೆ. 20 ಮೀಟರ್ ಉದ್ದ, 20 ಮೀಟರ್‌ ಅಗಲ ಹಾಗೂ ಮೂರು ಮೀಟರ್‌ ಆಳವಿರುವ ಕೃಷಿ ಹೊಂಡ ನಿರ್ಮಾಣಕ್ಕೆ ₹1.5 ಲಕ್ಷ ವೆಚ್ಚವಾಗಲಿದ್ದು, ಅದರಲ್ಲಿ ಶೇ 50ರಷ್ಟು ಸಹಾಯಧನ ರೈತರಿಗೆ ಸಿಗಲಿದೆ’ ಎನ್ನುತ್ತಾರೆ ಗದಗ ಜಿಲ್ಲಾ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶೈಲೇಂದ್ರ ಬಿರಾದಾರ.

‘ಕೋವಿಡ್‌ ಕಾರಣದಿಂದ ಕಳೆದ ವರ್ಷ ಯಾವುದೇ ಕೃಷಿ ಹೊಂಡಗಳು ನಿರ್ಮಾಣ ಆಗಿಲ್ಲ. ತೋಟಗಾರಿಕೆ ಇಲಾಖೆ ವತಿಯಿಂದ 2019–20ನೇ ಸಾಲಿನಲ್ಲಿ ಐದು ಹಾಗೂ 2020–21ನೇ ಸಾಲಿನಲ್ಲಿ 5 ಕೃಷಿ ಹೊಂಡಗಳು ನಿರ್ಮಾಣವಾಗಿದೆ. ಪ್ರತಿವರ್ಷ 10ರಿಂದ 20 ಅರ್ಜಿಗಳು ರೈತರಿಂದ ಬರುತ್ತವೆ. ಮಳೆಯಾಶ್ರಿತ ಪ್ರದೇಶಗಳ ರೈತರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ’ ಎನ್ನುತ್ತಾರೆ ಅವರು.

‘ಕೃಷಿ ಭಾಗ್ಯ ಯೋಜನೆ ಅಡಿ ದೊಡ್ಡ ದೊಡ್ಡ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಇತ್ತು. ಜತೆಗೆ ಈ ಕೆಲಸಕ್ಕೆ ಯಂತ್ರಗಳನ್ನು ಬಳಸಬಹುದಿತ್ತು. ಆದರೆ, ನರೇಗಾದಲ್ಲಿ 7.5X7.5X3, 9X9X3 ಹಾಗೂ 12X12X3 ಅಳತೆಯ ಕೃಷಿ ಹೊಂಡಗಳನ್ನು ವೈಯಕ್ತಿಕ ಕಾಮಗಾರಿ ಅಡಿಯಲ್ಲಿ ರೈತರು ನಿರ್ಮಿಸಿಕೊಳ್ಳುವ ಅವಕಾಶವಿದೆ. ಕೃಷಿ ಭೂಮಿ ಹೆಚ್ಚಿರುವ ರೈತರು ಕೃಷಿ ಹೊಂಡಗಳ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಜಾಗದ ಸಮಸ್ಯೆ ಎದುರಾಗುವುದರಿಂದ ಚಿಕ್ಕ ರೈತರು ಇವುಗಳ ಬಗ್ಗೆ ಒಲವು ತೋರುತ್ತಿಲ್ಲ’ ಎನ್ನುತ್ತಾರೆ ಗದಗ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾ ಹಕ ಅಧಿಕಾರಿ ಡಾ. ಎಸ್‌. ಜಿನಗಾ.

‘ಮಳೆಯಾಶ್ರಿತ ರೈತರಿಗೆ ಕೃಷಿ ಹೊಂಡಗಳಿಂದ ಹೆಚ್ಚಿನ ಅನುಕೂಲವಾಗಿದೆ. ಮಳೆ ಕೈಕೊಟ್ಟಾಗ ಹೊಂಡಗಳಲ್ಲಿನ ನೀರು, ಬೆಳೆ ಹಾಗೂ ರೈತರನ್ನು ಬದುಕಿಸಿದೆ. ಕೃಷಿ ಹೊಂಡಗಳಿಂದ ರೈತರ ಆದಾಯ ಕೂಡ ಹೆಚ್ಚಾಗಿದೆ’ ಎನ್ನುತ್ತಾರೆ ಅವರು.

ಖಾಲಿಯಾಗುತ್ತಿದೆ ಕೃಷಿಹೊಂಡದ ನೀರು

ನರೇಗಲ್:‌ ಹೋಬಳಿಯ ರೈತರು ಮಳೆ ಆಧಾರಿತ ಹಾಗೂ ಕೊಳವೆಬಾವಿ ನೀರಿನ ಮೇಲೆ ಕೃಷಿ ಜೀವನವನ್ನು ಕಟ್ಟಿಕೊಂಡಿದ್ದಾರೆ. ನೀರಿನ ಯಾವುದೇ ಮೂಲಗಳಿಲ್ಲದ ಕಾರಣ ಈ ಭಾಗದಲ್ಲಿ ಕೃಷಿ ಎಂಬುದು ರೈತರಿಗೆ ಕಠಿಣವಾಗುತ್ತಿದೆ.

ಆದರೆ ಕೃಷಿ ಇಲಾಖೆಯಿಂದ ನಿರ್ಮಿಸಲಾದ ಕೃಷಿ ಹೊಂಡಗಳಲ್ಲಿ ಅಲ್ಪ ಪ್ರಮಾಣ ನೀರು ಸಂಗ್ರಹಗೊಳ್ಳುತ್ತಿರುವುದರಿಂದ ಕೃಷಿಗೆ ಸಹಕಾರಿಯಾಗಿವೆ.

ಸದ್ಯ ಹಿಂಗಾರು ಬೆಳೆಗಳಿಗೆ ಮಳೆ ಪ್ರಮಾಣ ಕಡಿಮೆಯಾದ ಕಾರಣದ ಕೃಷಿ ಹೊಂಡದ ನೀರನ್ನು ರೈತರು ಬಳಕೆ ಮಾಡುತ್ತಿದ್ದಾರೆ. ಆದರೆ, ಹಲವು ಕಡೆಗಳಲ್ಲಿ ಕೃಷಿ ಹೊಂಡದ ನೀರು ಖಾಲಿಯಾಗಿದೆ ಎಂದು ಹೋಬಳಿಯ ರೈತರು ತಿಳಿಸಿದರು.

ಕೃಷಿಭಾಗ್ಯ ಯೋಜನೆ ಬಂದ್: ರೈತರಿಗೆ ಬೇಸರ

ಡಂಬಳ: ಎರಡು ಮೂರು ವರ್ಷಗಳಿಂದ ಕೃಷಿಭಾಗ್ಯ ಯೋಜನೆ ಬಂದ್ ಆಗಿರುವುದರಿಂದ ರೈತರು ನಿರಾಸೆಗೊಂಡಿದ್ದಾರೆ.

‘ನಾಲ್ಕೈದು ವರ್ಷಗಳ ಮುಂಚೆ ಮುಂಡರಗಿ ತಾಲ್ಲೂಕಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಸಾವಿರಾರು ಕೃಷಿ ಹೊಂಡಗಳು ನಿರ್ಮಾಣವಾಗಿದ್ದು, ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಆದರೆ ಅನುದಾನ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಸರ್ಕಾರ ಕೃಷಿಭಾಗ್ಯ ಯೋಜನೆಯನ್ನು ಎರಡು ವರ್ಷಗಳಿಂದ ಬಂದ್ ಮಾಡಿದೆ’ ಎನ್ನುತ್ತಾರೆ ಮುಂಡರಗಿ ತಾಲ್ಲೂಕು ಕೃಷಿ ಅಧಿಕಾರಿ ವೆಂಕಟೇಶಮೂರ್ತಿ.

‘ನರೇಗಾ ಯೋಜನೆಯಡಿ ರೈತರು ಕೃಷಿಹೊಂಡ, ಬದು ನಿರ್ಮಾಣ, ಎರೆಹುಳತೊಟ್ಟಿ ಮೊದಲಾದ ಕಾಮಗಾರಿಗಳನ್ನು ಮಾಡಲು ಅವಕಾಶವಿದೆ. ಪ್ರಸ್ತುತ ಬದು ನಿರ್ಮಾಣ, ಎರೆಹುಳತೊಟ್ಟಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ’ ಎನ್ನುತ್ತಾರೆ ಅವರು.

‘ಸರ್ಕಾರ ರೈತಪರ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಬಂದ್ ಮಾಡಬಾರದು. ಕೃಷಿಭಾಗ್ಯ ಯೋಜನೆ ಹಿಂದುಳಿದ ವರ್ಗ, ಪರಿಶಿಷ್ಟ ಸಮುದಾಯ, ಸಾಮಾನ್ಯ ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ರೈತರಿಗೂ ವರದಾನವಾಗಿತ್ತು. ಪ್ರಸ್ತುತ ಕೃಷಿಹೊಂಡ ನಿರ್ಮಿಸಿಕೊಳ್ಳಬೇಕು ಎಂಬ ಆಸೆಯನ್ನು ಸಾಕಷ್ಟು ರೈತರು ಹೊಂದಿದ್ದಾರೆ. ಆದರೆ, ಅನುಷ್ಠಾನ ಸಮರ್ಪಕವಾಗಿ ನಡೆಯುತ್ತಿಲ್ಲ’ ಎನ್ನುತ್ತಾರೆ ಮೇವುಂಡಿ ಗ್ರಾಮದ ರೈತ ಹೇಮಂತ ಹಾರೂಗೇರಿ, ಡಂಬಳ ಗ್ರಾಮದ ರೈತ ಗವಿಸಿದ್ದಪ್ಪ ಹಳ್ಳಾಕಾರ.

ಕೃಷಿ ಹೊಂಡಗಳ ಸಂಖ್ಯೆ ಹೆಚ್ಚಲಿರೋಣ: ತಾಲ್ಲೂಕು ವ್ಯಾಪ್ತಿಯಲ್ಲಿ ಈ ಮೊದಲು ನೂರಾರು ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಪ್ರತಿವರ್ಷ ಮುಂಗಾರು ಮತ್ತು ಹಿಂಗಾರು ಮಳೆಯ ಸಂದರ್ಭದಲ್ಲಿ ನೀರು ತುಂಬಿರುತ್ತದೆ. ಆದರೆ ವಿಶಾಲವಾದ ಕೃಷಿ ಭೂಮಿ ಹೊಂದಿರುವ ತಾಲ್ಲೂಕಿನಲ್ಲಿ ನೀರಿನ ಅಭಾವ ಹೆಚ್ಚಿರುವ ಕಾರಣ ಕೃಷಿ ಹೊಂಡಗಳ ನಿರ್ಮಾಣಕ್ಕೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಇಲ್ಲಿನ ರೈತರು ಆಗ್ರಹಿಸಿದ್ದಾರೆ.

ಹೊಲಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳ

ಲಕ್ಷ್ಮೇಶ್ವರ: ಸತತ ಬರಗಾಲಕ್ಕೆ ತುತ್ತಾಗುತ್ತಿದ್ದ ತಾಲ್ಲೂಕಿನಲ್ಲಿ ಕೃಷಿ ಇಲಾಖೆ ವತಿಯಿಂದ ಕಳೆದ ನಾಲ್ಕೈದು ವರ್ಷಗಳಲ್ಲಿ ನೂರಾರು ಕೃಷಿಹೊಂಡಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಹೊಲಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ.

2015ರಿಂದ ಈವರೆಗೆ ತಾಲ್ಲೂಕಿನಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಕೃಷಿಹೊಂಡಗಳು ನಿರ್ಮಾಣಗೊಂಡಿದ್ದು, ಅವುಗಳಲ್ಲಿ ಸಾಕಷ್ಟು ನೀರು ನಿಂತಿದೆ. ವಾರದ ಹಿಂದೆ ಸುರಿಯುತ್ತಿರುವ ಮಳೆಗೆ ಸಮೀಪದ ರಾಮಗಿರಿ, ಬಸಾಪುರ, ಯಳವತ್ತಿ, ಮಾಡಳ್ಳಿ, ಯತ್ನಳ್ಳಿ ಗ್ರಾಮಗಲ್ಲಿನ ಕೃಷಿಹೊಂಡಗಳು ತುಂಬಿಕೊಂಡಿವೆ. ಬರಗಾಲದಲ್ಲಿ ನೀರಿಲ್ಲದೆ ಪರದಾಡುತ್ತಿದ್ದ ರೈತರಿಗೆ ಕೃಷಿ ಹೊಂಡಗಳು ಸದ್ಯ ನೀರಿನ ಮೂಲಗಳಾಗಿವೆ. ‘ಕೃಷಿ ಹೊಂಡಗಳಿಂದ ನಮಗೆ ಅನುಕೂಲವಾಗಿದೆ. ಎರಡು ವರ್ಷಗಳ ಹಿಂದೆ ಹೊಂಡದ ನೀರನ್ನು ಹಾಯಿಸಿ ಕಡಲೆ ಬೆಳೆದುಕೊಂಡಿದ್ದೇನೆ’ ಎಂದು ಸಮೀಪದ ಯಳವತ್ತಿ ಗ್ರಾಮದ ಬಾಪೂಗೌಡ ಭರಮಗೌಡ ಹೇಳಿದರು. ‘ಕೃಷಿ ಹೊಂಡಗಳು ಬೇಸಿಗೆಯಲ್ಲಿ ನೀರಿನ ಹಂಡೆ ಆಗ್ಯಾವ್ರೀ’ ಎಂದು ಸಮೀಪದ ರಾಮಗಿರಿ ಗ್ರಾಮದ ಶಂಕರಣ್ಣ ಕಾಳೆ ಸಂತಸ ವ್ಯಕ್ತಪಡಿಸಿದರು.

‘ಕೃಷಿ ಹೊಂಡಗಳು ರೈತರಿಗೆ ವರದಾನ’

ನರಗುಂದ: ಕೃಷಿ ಹೊಂಡಗಳು ರೈತರ ಬದುಕಿಗೆ ಆಸರೆಯಾಗಿದ್ದು, ಅವುಗಳಿಂದ ಪಟ್ಟಣ ಹಾಗೂ ತಾಲ್ಲೂಕಿನ ರೈತರು ಸಾಕಷ್ಟು ಲಾಭ ಪಡೆದಿದ್ದಾರೆ.

ಮಳೆ ಕೈಕೊಟ್ಟಾಗ ಅದರಲ್ಲಿನ ನೀರನ್ನು ಬಳಸಿಕೊಂಡು ರೈತರು ಕೃಷಿ ಮಾಡಿದ್ದಾರೆ. ಹೆಚ್ಚಿನ ಇಳುವರಿ ಪಡೆದಿದ್ದಾರೆ. ಕಳೆದ ಅವಧಿಯ ಸರ್ಕಾರದಲ್ಲಿ ಕೃಷಿ ಭಾಗ್ಯದ ಮೂಲಕ ಪ್ರತಿಯೊಬ್ಬ ರೈತರು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದರು. ಈಗ ಅವು ವರದಾನವಾಗಿವೆ.‘ಕಳೆದ ಎರಡು ವರ್ಷಗಳಿಂದ ನರೇಗಾ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಅವಕಾಶವಿದೆ. ಆದರೆ, ಅದರ ಮೂಲಕ ನಿರೀಕ್ಷಿತ ಪ್ರಮಾಣದಲ್ಲಿ ಹೊಂಡಗಳ ನಿರ್ಮಾಣ ಅಸಾಧ್ಯವಾಗಿದೆ. ಆದ್ದರಿಂದ ಮೊದಲಿನಂತೆ ಕೃಷಿ ಭಾಗ್ಯ ಯೋಜನೆ ಮೂಲಕ ಕೃಷಿ ಹೊಂಡಗಳ ನಿರ್ಮಾಣ ಅಗತ್ಯವಿದೆ’ ಎಂದು ಯಲ್ಲಪ್ಪ ಚಲುವಣ್ಣವರ ಹೇಳುತ್ತಾರೆ.

ನಮ್ಮಲ್ಲಿ ನೀರಿನ ಮೂಲಗಳು ಇಲ್ಲದ ಕಾರಣ 12 ತಿಂಗಳು ಕೃಷಿ ಆಗುತ್ತಿಲ್ಲ. ಜನಪ್ರತಿನಿಧಿಗಳು ನಿರಂತರ ಪ್ರಯತ್ನ ಮಾಡಿ ಶಾಶ್ವತ ನೀರಾವರಿ ಅನುಷ್ಠಾನ ಮಾಡಬೇಕು

ಅನಿಲ್‌ ಗೊಡಚಪ್ಪನವರ, ರೈತ ನರೇಗಲ್

ತಾಲ್ಲೂಕಿನಲ್ಲಿ ಎರಡು ವರ್ಷಗಳ ಹಿಂದೆಯೇ 2,300 ಕೃಷಿ ಹೊಂಡಗಳು ನಿರ್ಮಾಣವಾಗಿವೆ. ಇವುಗಳಿಂದ ರೈತರಿಗೆ ಹೆಚ್ಚು ಅನುಕೂಲವಾಗಿವೆ. ಈಗಲೂ ಬೇಡಿಕೆ ಇದೆ. ಆದರೆ, ಅನುದಾನ ಬರಬೇಕಿದೆ.
ಮೈತ್ರಿ, ಸಹಾಯಕ ಕೃಷಿ ನಿರ್ದೇಶಕಿ, ನರಗುಂದ

ಕೃಷಿ ಹೊಂಡಗಳ ನಿರ್ಮಾಣದಿಂದಾಗಿ ವ್ಯರ್ಥವಾಗಿ ಹರಿಯುತ್ತಿದ್ದ ನೀರನ್ನು ತಡೆದಂತಾಗಿದೆ. ಬೇಸಿಗೆಯಲ್ಲಿ ಈ ನೀರನ್ನು ಬಳಸಿ ನೂರಾರು ರೈತರು ಬೆಳೆ ಬೆಳೆಯುತ್ತಾರೆ

ಚಂದ್ರಶೇಖರ ನರಸಮ್ಮನವರ, ರೈತ ಸಂಪರ್ಕ ಕೇಂದ್ರದ ಅಧಿಕಾರಿ, ಲಕ್ಷ್ಮೇಶ್ವರ

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ನಾಗರಾಜ ಎಸ್‌.ಹಣಗಿ, ಲಕ್ಷ್ಮಣ ಎಚ್ ದೊಡ್ಡಮನಿ, ಡಾ.ಬಸವರಾಜ ಹಲಕುರ್ಕಿ, ಚಂದ್ರು ರಾಥೋಡ್‌, ಬಸವರಾಜ ಪಟ್ಟಣಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT