ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯಾ ಸಮಾಧಿಯಲ್ಲಿ ಲೀನರಾದ ಮಹಾಚೇತನ ಡಾ. ಅಭಿನವನ ಅನ್ನದಾನ ಶ್ರೀ

ಮಹಾಮನೆಯ ಮಧ್ಯದಲ್ಲಿ ಡಾ. ಅಭಿನವನ ಅನ್ನದಾನ ಶ್ರೀಗಳ ಕ್ರಿಯಾ ಸಮಾಧಿ
Last Updated 24 ನವೆಂಬರ್ 2021, 3:10 IST
ಅಕ್ಷರ ಗಾತ್ರ

ನರೇಗಲ್: ಗಜೇಂದ್ರಗಡ ತಾಲ್ಲೂಕಿನ ಹಾಲಕೆರೆ ಮಠದ ಲಿಂಗೈಕ್ಯ ಡಾ. ಅಭಿನವ ಅನ್ನದಾನ ಸ್ವಾಮೀಜಿ ಅವರ ಅಂತಿಮ ಕ್ರಿಯಾವಿಧಿ ಶ್ರೀಗಳು ಇಚ್ಛೆಪಟ್ಟಿದ್ದಂತೆ ಅನ್ನದಾನೇಶ್ವರ ಮಠದ ಮಹಾಮನೆಯ ಮಧ್ಯದ ಜಾಗದಲ್ಲಿಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ಸಂಜೆ ನೆರವೇರಿತು.

ಶ್ರೀಗಳ ಅಂತಿಮ ವಿಧಿವಿಧಾನದ ಕಾರ್ಯಗಳು ನಡೆಯುವ ವೇಳೆ ಭಕ್ತರ ಕಣ್ಣೀರಿನ ಕಟ್ಟೆ ಒಡೆಯಿತು. ಆಕ್ರಂದನ ಮುಗಿಮುಟ್ಟಿತು. ವಿವಿಧೆಡೆಯಿಂದ ಬಂದಿದ್ದ ಸ್ವಾಮೀಜಿಗಳ ಕಣ್ಣಂಚಿನಲ್ಲೂ ನೀರು ಜಿನುಗಿತು.

ಹುಬ್ಬಳ್ಳಿ-ಹಾನಗಲ್‌ ಮೂರುಸಾವಿರಮಠದ ಡಾ.ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳ ಕಾರ್ಯ ನಡೆಯಿತು. ಇವರ ಜತೆಗೆ ವಳಬಳ್ಳಾರಿಯ ಸಿದ್ಧಲಿಂಗ ಸ್ವಾಮೀಜಿ, ಇಳಕಲ್‌ನ ವಿಜಯಮಹಾಂತ ಸ್ವಾಮೀಜಿ, ಬಾಲೆಹೊಸೂರು ದಿಂಗಾಲೇಶ್ವರಮಠದ ದಿಂಗಾಲೇಶ್ವರ ಸ್ವಾಮೀಜಿ, ನೂತನ ಪೀಠಾಧಿಪತಿ ಮುಪ್ಪಿನಬಸವಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠದ ಹಿರಿಯ ಶ್ರೀಗಳು ಪಾಲ್ಗೊಂಡಿದ್ದರು.

ವೀರಶೈವ-ಲಿಂಗಾಯತ ಧರ್ಮದ ಪದ್ಧತಿಯಂತೆ ಕ್ರಿಯಾ ಸಮಾಧಿ ಸಿದ್ಧಪಡಿಸಲಾಗಿತ್ತು. ಮೂರು ಮೆಟ್ಟಿಲುಗಳನ್ನು ನಿರ್ಮಿಸಿ, ಗೂಡು ತೋಡಿ ಸುತ್ತಲೂ ವಿಭೂತಿಗಳನ್ನು ಜೋಡಿಸಲಾಗಿತ್ತು. ನಂತರ ಅವರನ್ನು ಸಿದ್ಧಾಸನದಲ್ಲಿ ಕೂರಿಸಿ, ಎರಡು ಕೈಗಳನ್ನು ಎದೆಗೆ ಸ್ವಲ್ಪ ಕೆಳಭಾಗದಲ್ಲಿ ಜೋಡಿಸಿ ಅಲ್ಲಿ ಅವರ ಇಷ್ಟಲಿಂಗವನ್ನು ಇಟ್ಟು ಪಂಚಾಭಿಷೇಕ ಮಾಡಲಾಯಿತು. ಮತ್ತೆ ಪೂಜೆ ಮಾಡಿ ಲಿಂಗ ದರ್ಶನ ಮಾಡಿಸಲಾಯಿತು.

ಐದು ಬಗೆಯ ಪೂಜೆ ಬಳಿಕ ಲಿಂಗದೇಹದ ಐಕ್ಯಮಾಡಲಾಯಿತು. ನಂತರ ಬಿಲ್ವ ಪತ್ರೆ ಹಾಗೂ ಓಂಕಾರ ತಿದ್ದಿರುವ ಅಂದಾಜು 8 ಸಾವಿರ ವಿಭೂತಿಗಳ ಮೂಲಕ ಸಂಪೂರ್ಣವಾಗಿ ಮುಚ್ಚಲಾಯಿತು. ಗುಂಡಿಯ ಒಳ ಭಾಗದಲ್ಲಿ ಪೂಜೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಇಡಲಾಗಿತ್ತು. ಕೊನೆಯಲ್ಲಿ ಮರಳಿನಿಂದ ಮುಚ್ಚಿ, ಅದರ ಮೇಲೆ ಲಿಂಗವನ್ನು ಇಡಲಾಯಿತು. ಭಕ್ತರ ಪಾಲಿನ ಮಹಾಚೇತನ ಪ್ರಕೃತಿಯಲ್ಲಿ
ಲೀನವಾದರು.

ಗದಗ, ಬಾಗಲಕೋಟೆ, ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಅಂದಾಜು ಒಂದು ಲಕ್ಷ ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು. ಪೊಲೀಸ್ ಇಲಾಖೆಯಿಂದ ಶ್ರೀಗಳಿಗೆ ಸರ್ಕಾರಿ ಗೌರವ ಸಲ್ಲಿಸಿದ ನಂತರ ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಲಾಯಿತು. ಸ್ವಾಮೀಜಿ ಪಾರ್ಥೀವ ಶರೀರಕ್ಕೆ ರಾಷ್ಟ್ರ ಧ್ವಜ ಹೊದಿಸಿ ಗೌರವ ಸಲ್ಲಿಸಲಾಯಿತು. ಗದಗ ಜಿಲ್ಲಾ ಉಸ್ತುವಾರಿ ಹಾಗೂ ಲೋಕೊಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ, ಶಾಸಕ ಕಳಕಪ್ಪ ಬಂಡಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT