ಶುಕ್ರವಾರ, ಫೆಬ್ರವರಿ 26, 2021
20 °C
ಇಂದು ಶಾಲಾ,ಕಾಲೇಜುಗಳಿಗೆ ರಜೆ; ಜಿಲ್ಲೆಯಲ್ಲಿ ಪೊಲೀಸ್‌ ಬಿಗಿ ಭದ್ರತೆ

ಬಂದ್‌: ಗದಗ ಜಿಲ್ಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆನೀಡಿರುವ ಬಂದ್‌ಗೆ ಜಿಲ್ಲೆಯ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.

‘ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಕಾಂಗ್ರೆಸ್‌ ಜಿಲ್ಲಾ ಘಟಕದಿಂದ ಬಂದ್ ಆಚರಿಸಲಾಗುವುದು’ ಎಂದು ಕೆಪಿಸಿಸಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ತಿಳಿಸಿದ್ದಾರೆ. ಜೆಡಿಎಸ್‌ನ ಸ್ಥಳೀಯ ಮುಖಂಡರು ಬಂದ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಲಾರಿ ಮಾಲೀಕರ, ಚಾಲಕರ ಸಂಘ, ಯಂಗ್ ಇಂಡಿಯಾ ಪರಿವಾರದ ಆಟೋ ಚಾಲಕ, ಮಾಲೀಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಆಟೋ ಚಾಲಕ, ಮಾಲೀಕರ ಸಂಘದಿಂದ ಸೆ.10ರಂದು ಬೆಳಿಗ್ಗೆ 9ಕ್ಕೆ ನಗರದ ತೋಂಟದಾರ್ಯ ಮಠದ ಆವರಣದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಕರ್ನಾಟಕ ರಕ್ಷಣಾ ವೇದಿಕೆಯಿಂದ ಗದುಗಿನ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ. ಮುಳಗುಂದ ನಾಕಾ ಬಳಿ ರಸ್ತೆ ತಡೆ ನಡೆಸಲಾಗುವುದು ಎಂದು ವೇದಿಕೆ ಮುಖಂಡ ಹನುಮಂತ ಅಬ್ಬಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸ್ ಸಂಚಾರ ಅನುಮಾನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳ ನೌಕರರು ಬಂದ್‌ಗೆ ಬೆಂಬಲಿಸಿದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿಯುವುದು ಅನುಮಾನ. ‘ಸೋಮವಾರ ಬೆಳಿಗ್ಗೆ ಎಂದಿನಂತೆ ಬಸ್ ಸಂಚಾರ ಪ್ರಾರಂಭಿಸುತ್ತೇವೆ. ನಂತರ ಪರಿಸ್ಥಿತಿ ನೋಡಿಕೊಂಡು ಸಂಚಾರ ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳುವುದು’ ಎಂದು ಸಂಸ್ಥೆಯ ಗದಗ ವಿಭಾಗನಿಯಂತ್ರಣಾಧಿಕಾರಿ ಪ್ರಕಟಣೆ ತಿಳಿಸಿದೆ.

‘ಬಂದ್ ಹಿನ್ನೆಲೆಯಲ್ಲಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುವುದಾಗಲಿ, ಜನಜೀವನಕ್ಕೆ ತೊಂದರೆ ಉಂಟು ಮಾಡುವುದಾಗಲಿ ಕಂಡು ಬಂದರೆ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗವುದು. ಮುಂಜಾಗ್ರತೆ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 2 ಕೆಎಸ್‍ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷಬಾಬು ತಿಳಿಸಿದರು.

ಗಜೇಂದ್ರಗಡದಲ್ಲಿ ಬಂದ್‌

ಗಜೇಂದ್ರಗಡ: ‘ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಸೆ.10 ರಂದು ನಡೆಸುತ್ತಿರುವ ಭಾರತ್ ಬಂದ್‌ಗೆ ಇಲ್ಲಿನ ಕಾಂಗ್ರೆಸ್ ನಗರ ಘಟಕದ ಜೊತೆಗೆ ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿವೆ’ ಎಂದು ಕಾಂಗ್ರೆಸ್ ಬ್ಲಾಕ್ ಕಮೀಟಿ ಅಧ್ಯಕ್ಷ ವೀರಣ್ಣ ಸೊನ್ನದ ಹೇಳಿದರು.
‘ಹಲವು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಮೋದಿಯವರ ಆಡಳಿತದಲ್ಲಿ ದೇಶ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರದ ಜನವಿರೋಧಿ ಆಡಳಿತದ ವಿರುದ್ಧ ನಡೆಸುತ್ತಿರುವ ಭಾರತ್ ಬಂದ್‌ಗೆ ಪಟ್ಟಣದ ಜನತೆ ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಬಂದ್‌ನ್ನು ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಸಿಪಿಎಂ ಬೆಂಬಲ: ಗಜೇಂದ್ರಗಡ: ‘ಎಡಪಕ್ಷಗಳು ಸೇರಿದಂತೆ ವಿವಿಧ ಪಕ್ಷಗಳು ದೇಶಾದ್ಯಂತ ಕರೆ ನೀಡಿರುವ ಭಾರತ ಬಂದ್‌ಗೆ ಸಿಪಿಎಂ ಪಟ್ಟಣ ಘಟಕದಿಂದ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು’ ಎಂದು ಬಾಲು ರಾಠೋಡ ತಿಳಿಸಿದ್ದಾರೆ.

‘ಸೋಮವಾರ ಬೆಳಿಗ್ಗೆ 10-30ಕ್ಕೆ ಪಟ್ಟಣದ ತಹಶೀಲ್ದಾರ್ ಕಚೇರಿಯಿಂದ ಪ್ರತಿಭಟನೆ ಪ್ರಾರಂಭ ಮಾಡಿ ಇಲ್ಲಿನ ದುರ್ಗಾ ವೃತ್ತ, ಕೆ.ಕೆ.ವೃತ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರತಿಕೃತಿ ದಹನ ಮಾಡಲಾಗುವುದು. ಹೀಗಾಗಿ ಪಟ್ಟಣದ ಎಲ್ಲ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಬಂದ್‌ಗೆ ಬೆಂಬಲ ಸೂಚಿಸುವ ಮೂಲಕ ಪ್ರತಿಭಟನೆ ಯಶಸ್ವಿಗೊಳಿಸಲು ಸಹಕರಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಲಕ್ಷ್ಮೇಶ್ವರ: ಸೆ.10ರಂದು ಲಕ್ಷ್ಮೇಶ್ವರ ಬಂದ್‍ಗೆ ಕರೆ ನೀಡಲಾಗಿದೆ ಎಂದು ಕಾಂಗ್ರೆಸ್‍ನ ಲಕ್ಷ್ಮೇಶ್ವರ ಘಟಕದ ಅಧ್ಯಕ್ಷ ತಿಪ್ಪಣ್ಣ ಸಂಶಿ ತಿಳಿಸಿದ್ದಾರೆ.ಬಂದ್ ಅಂಗವಾಗಿ ಸಾರ್ವಜನಿಕ ಮೆರವಣಿಗೆ ಸಂಘಟಿಸಲಾಗಿದೆ. ಬಜಾರದ ಹನಮಂತದೇವರ ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದು. ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು